ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಸಂಬಂಧಿ ಮೇಲೆ ಭ್ರಷ್ಟಾಚಾರ ಆರೋಪ: ಸಾ.ರಾ.ಮಹೇಶ್‌ರಿಂದ ಆಡಿಯೊ ಬಿಡುಗಡೆ

ಮೈಮುಲ್‌ ನೇಮಕಾತಿ ಪ್ರಕ್ರಿಯೆ
Last Updated 15 ಮೇ 2020, 8:22 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿನ (ಮೈಮುಲ್‌) ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಶಾಸಕ ಸಾ.ರಾ.ಮಹೇಶ್, ಶುಕ್ರವಾರ ಸುದ್ದಿಗೋಷ್ಠಿಯಲ್ಲಿ 3 ಆಡಿಯೊಗಳನ್ನು ಬಿಡುಗಡೆ ಮಾಡಿದರು.

‘ಮೈಮುಲ್’ ನಾಮನಿರ್ದೇಶಿತ ನಿರ್ದೇಶಕ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿ ಅಶೋಕ್ ಅವರ ಹೆಸರು ಬಿಡುಗಡೆ ಮಾಡಿರುವ ಆಡಿಯೊದಲ್ಲಿದೆ. ಇವರಿಗೆ ಹಣ ಕೊಟ್ಟಿದ್ದಾರೆ ಎಂದು ಆಡಿಯೊದಲ್ಲಿ ಹೇಳಲಾಗಿದೆ. ಹೀಗಾಗಿ, ಇಡಿ ಪ್ರಕ್ರಿಯೆ ರದ್ದುಗೊಳಿಸಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಯಬೇಕು’ ಎಂದು ಅವರು ಆಗ್ರಹಿಸಿದರು.

ಒಂದು ವೇಳೆ ಇದೇ ಸ್ವರೂಪದಲ್ಲೇ ನೇಮಕಾತಿ ಪ್ರಕ್ರಿಯೆ ನಡೆದರೆ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರ ನೇತೃತ್ವದಲ್ಲಿ ಮೇ 19ರಂದು ‘ಮೈಮುಲ್’ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.‌

‘ಅವರು ನೇಮಕಾತಿ ಪಟ್ಟಿ ಬಿಡುಗಡೆ ಮಾಡಿದರೆ, ನಾನು ಆಯ್ಕೆಯಾದ ಅಭ್ಯರ್ಥಿಗಳ ವಂಶವೃಕ್ಷ ಬಿಡುಗಡೆ ಮಾಡುವೆ’ ಎಂದೂ ಸವಾಲೆಸೆದರು.

ಡೇರಿ ಅಧ್ಯಕ್ಷರ ಅಕ್ಕನ ಮಗ ಹಾಗೂ ತಂಗಿಯ ಮಗನಿಗೆ ಸಂದರ್ಶನ ಮಾಡುತ್ತಿದ್ದಾರೆ. ಲಾಭದಾಯಕ ಹುದ್ದೆಯನ್ನು ತಮ್ಮ ಕುಟುಂಬದವರಿಗೆ ಕೊಡಬಹುದಾ ಎಂದು ಪ್ರಶ್ನಿಸಿದರು.

ಅವ್ಯವಹಾರ ನಡೆದಿದೆ ಎನ್ನುವುದಕ್ಕೆ ಲಾಕ್‌ಡೌನ್‌ ನಡುವೆಯೂ ತರಾತುರಿಯಲ್ಲಿ ಸಂದರ್ಶನ ನಡೆಸುತ್ತಿರುವುದೊಂದೇ ಸಾಕ್ಷಿ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಭ್ರಷ್ಟಾಚಾರದಲ್ಲಿ ‘ಮೈಮುಲ್’ ನಾಮನಿರ್ದೇಶಿತ ನಿರ್ದೇಶಕ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿ ಅಶೋಕ್ ಅವರು ನೇರವಾಗಿ ಭಾಗಿಯಾಗಿದ್ದಾರೆಯೇ ಎಂಬ ಪ್ರಶ್ನೆಗೆ ‘ಈ ಕುರಿತು ನಾನೇನೂ ಹೇಳುವುದಿಲ್ಲ. ಆಡಿಯೊ ಬಿಡುಗಡೆ ಮಾಡಿದ್ದೇನೆ. ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳುತ್ತದೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

ಆಡಿಯೊದಲ್ಲಿ ಏನಿದೆ?

ಮಹಿಳೆ ಮತ್ತು ತುಮಕೂರು ಡೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರ ನಡುವಿನ ಸಂಭಾಷಣೆ ಆಡಿಯೊದಲ್ಲಿ ಇದೆ. ವ್ಯಕ್ತಿಯು ‘ಮೈಮುಲ್’ ನಿರ್ದೇಶಕ ಅಶೋಕ್‌ ಅವರಿಗೆ ಮಾರ್ಕೆಟಿಂಗ್ ಅಧಿಕಾರಿ ಹುದ್ದೆಗಾಗಿ ₹ 40 ಲಕ್ಷ ಹಣವನ್ನು ಮಂಗಳೂರು ಡೇರಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ನೀಡಿದ್ದಾರೆ ಎಂದು ತಿಳಿಸುತ್ತಾರೆ.

ಪದೇ ಪದೇ ವ್ಯಕ್ತಿಯು ಮಹಿಳೆಗೆ ರೆಕಾರ್ಡ್ ಮಾಡಿಕೊಳ್ಳಬೇಡ ಎಂದು ಮನವಿ ಮಾಡುತ್ತಾರೆ. ಈಗಾಗಲೇ ಸಾ.ರಾ.ಮಹೇಶ್‌ಗೆ ಅಡಗೂರು ಎಚ್.ವಿಶ್ವನಾಥ್ ಸಹ ಬೆಂಬಲ ನೀಡಿದ್ದಾರೆ ಎಂದೂ ವ್ಯಕ್ತಿ ಸಂಭಾಷಣೆ ವೇಳೆ ಹೇಳುತ್ತಾರೆ.

ಮಹಿಳಾ ಅಭ್ಯರ್ಥಿಯೊಬ್ಬರು ಈಗಾಗಲೇ ₹ 18 ಲಕ್ಷ ಹಣ ನೀಡಿದ್ದು, ಮತ್ತೂ ₹ 3ರಿಂದ 4 ಲಕ್ಷ ಹಣ ನೀಡುವ ಕುರಿತ ಪ್ರಸ್ತಾಪ ಮತ್ತೊಂದು ಆಡಿಯೊದಲ್ಲಿ ಇದೆ.

ಆರೋಪ ನಿರಾಧಾರ: ಅಶೋಕ್

ಶಾಸಕ ಸಾ.ರಾ.ಮಹೇಶ್ ಅವರ ಆರೋಪ ಕುರಿತು ‘ಪ್ರಜಾವಾಣಿ’ ಮೈಮುಲ್ ನಾಮನಿರ್ದೇಶಿತ ಸದಸ್ಯ ಅಶೋಕ್‌ ಅವರನ್ನು ಸಂಪರ್ಕಿಸಿದಾಗ, ಅವರು ಆರೋಪ ನಿರಾಧಾರ ಎಂದು ಪ್ರತಿಕ್ರಿಯಿಸಿದರು.

‘ನನ್ನ ಬಳಿ ಕೆಲಸ ಬೇಕು ಎಂದು ಯಾರೂ ಬಂದಿಲ್ಲ. ನಾನು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಸಾ.ರಾ.ಮಹೇಶ್ ಯಾವ ದೃಷ್ಟಿಕೋನದಲ್ಲಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT