ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಹನ ಮುಕ್ತ ರಾತ್ರಿ, ವನ್ಯಜೀವಿಗಳ ಉಳಿವು ಖಾತ್ರಿ’

ಯುನೈಟೆಡ್‌ ಕನ್ಸರ್ವೇಷನ್‌ ಮೂವ್‌ಮೆಂಟ್‌ನ ‘ಬಂಡೀಪುರದಲ್ಲಿ ರಾತ್ರಿ ಸಂಚಾರ ಬೇಡ’ ಅಭಿಯಾನ
Last Updated 11 ನವೆಂಬರ್ 2018, 2:56 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಸಮಾನ ಮನಸ್ಕರು ಸೇರಿದ್ದರು. ಅವರಲ್ಲಿ ವಿದ್ಯಾರ್ಥಿಗಳು, ವಕೀಲರು, ಖಾಸಗಿ ಕಂಪನಿ ಉದ್ಯೋಗಿಗಳು, ವೈದ್ಯರು, ಪತ್ರಕರ್ತರು, ವನ್ಯಜೀವಿ ಛಾಯಾಗ್ರಾಹಕರು, ವಕೀಲರು, ಗೃಹಿಣಿಯರು, ಯುವಜನರೂ ಇದ್ದರು. ‘ಬಂಡೀಪುರ ಸಂರಕ್ಷಿತ ಅರಣ್ಯದಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಸಂಚಾರಕ್ಕೆ ಅವಕಾಶ ಕೊಡಬಾರದು’ ಎಂಬುದೇ ಎಲ್ಲರ ಮಾತಾಗಿತ್ತು.

ಯುನೈಟೆಡ್‌ ಕನ್ಸರ್ವೇಷನ್‌ ಮೂವ್‌ಮೆಂಟ್‌ ಬಂಡೀಪುರದ ಪರಿಸರ ಮತ್ತು ವನ್ಯಲೋಕದ ಉಳಿವಿಗೆ ಕರೆ ನೀಡಿದ್ದ ದಿನದ ಧರಣಿಯಲ್ಲಿ ನೂರಾರು ಪರಿಸರ ಪ್ರಿಯರು ಭಾಗವಹಿಸಿದ್ದರು. ಸಂಚಾರಕ್ಕೆ ಅವಕಾಶ ಕೊಡುವುದರಿಂದ ಆಗುವ ಪಾರಿಸರಿಕ ಹಾನಿಯ ಕುರಿತು ಚರ್ಚಿಸಿದರು. ವಾಹನಗಳು ಹಾಯ್ದು ಸತ್ತ ವನ್ಯಜೀವಿಗಳ ಚಿತ್ರಪಟಗಳನ್ನು ಪ್ರದರ್ಶಿಸುತ್ತ, ‘ಬೇಡ–ಬೇಡ, ರಾತ್ರಿ ಸಂಚಾರ ಬೇಡ, ವಾಹನ ಮುಕ್ತ ರಾತ್ರಿ–ವನ್ಯಜೀವಿ ಉಳಿವು ಖಾತ್ರಿ, ಕಾಡು ಬೆಳೆಸೋಣ, ನಾಡು ಉಳಿಸೋಣ’ ಎಂದು ಘೋಷಣೆಗಳನ್ನು ಕೂಗುತ್ತ, ಮಾನವನ ಹಸ್ತಕ್ಷೇಪದಿಂದ ಆಗುತ್ತಿರುವ ಜೀವಹಾನಿಯ ಬಗ್ಗೆ ತಿಳಿಸಿದರು.

‘912 ಚ.ಕಿ.ಮೀ. ವಿಸ್ತೀರ್ಣದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಐದು ಸಾವಿರಕ್ಕೂ ಹೆಚ್ಚು ಆನೆಗಳು ಹಾಗೂ 140 ಹುಲಿಗಳಿಗೆಆಶ್ರಯ ತಾಣವಾಗಿದೆ. ನೂರಾರು ಚಿರತೆ, ಕರಡಿಗಳು ಸೇರಿ ಸಾವಿರಾರು ಸಂಖ್ಯೆಯಲ್ಲಿ ಸರೀಸೃಪಗಳು ಇಲ್ಲಿವೆ. ರಾತ್ರಿ ಸಂಚಾರದಿಂದ ಇವುಗಳ ಜೀವನಕ್ಕೆ ಕುತ್ತು ಒದಗಲಿದೆ’ ಎಂಬುದು ಅವರ ಆತಂಕವಾಗಿತ್ತು.

‘ಅರಣ್ಯದಲ್ಲಿನ ರಸ್ತೆ ವಿಸ್ತರಣೆ, ಮೇಲ್ಸೇತುವೆ ನಿರ್ಮಾಣದಿಂದ ದುಡ್ಡು ಗಳಿಸುವ ಇರಾದೆ ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರಿಗೆ ಇದೆ. ರಾತ್ರಿ ಸಂಚಾರದಿಂದ ನಾಟಾ ಮತ್ತು ಮರಳಿನ ಕಳ್ಳಸಾಗಾಣಿಕೆ, ಅಕ್ರಮ ದಂಧೆ, ತೆರಿಗೆ ವಂಚನೆ, ಅನೈತಿಕ ಚಟುವಟಿಕೆಗಳಿಗೆ ಅವಕಾಶ ಸಿಗಲಿದೆ’ ಎಂದು ಪ್ರತಿಭಟನಾಕಾರರು ದೂರಿದರು.

ಧರಣಿಯಲ್ಲಿದ್ದ 6ನೇ ತರಗತಿ ವಿದ್ಯಾರ್ಥಿನಿ ಅನನ್ಯ, ‘ಬಂಡೀಪುರ ಪ್ರಾಣಿಗಳ ಮನೆ. ಅದನ್ನು ನಾವು ಕೆಡವಬಾರದು. ನಮ್ಮ ಮನೆ ಬೀಳಿಸಿ ರಸ್ತೆ ಮಾಡಿದರೆ, ನಾವು ಸುಮ್ಮನಿರುತ್ತೇವೆಯೇ. ನಮ್ಮಂತೆ ಆ ಜೀವಿಗಳಿಗೂ ಬದುಕುವ ಹಕ್ಕಿದೆ. ಪರಿಸರ ಸತ್ತರೇ ನಮ್ಮ ಬದುಕಿಗೆ ಕುತ್ತು ಬರಲಿದೆ’ ಎಂದಳು.

‘ರಷ್ಯಾ, ಅಮೆರಿಕಾದಂತ ಮುಂದುವರಿದ ದೇಶಗಳಲ್ಲಿ ಅಭಿವೃದ್ಧಿಗಾಗಿ ಕಾಡಿನ ವಿಸ್ತೀರ್ಣ ಕಡಿಮೆ ಆಗಿಲ್ಲ. ಅಭಿವೃದ್ಧಿದಾರರನ್ನು ನಾವು ಪ್ರಶ್ನೆ ಮಾಡುತ್ತಿಲ್ಲ. ಹಾಗಾಗಿ ನಮ್ಮ ದೇಶದಲ್ಲಿ ಕಾಡಿನ ಪ್ರಮಾಣ ಪ್ರತಿವರ್ಷ ಕುಗ್ಗುತ್ತಿದೆ’ ಎಂದು ವಕೀಲ ಸಂತೋಷ್ ನಾರಾಯಣ ಅಭಿಪ್ರಾಯಪಟ್ಟರು.

ಹೂವರ್‌, ಬಾದುಷಾ, ವೈನಾಡು ಸಂರಕ್ಷಣಾ ಸಮಿತಿ, ಆರೋಷಾ, ರೋಟರಿ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಬಿಎನ್‌ಎಂ ಕಾಲೇಜು, ಕ್ಯಾಥೆಡ್ರಲ್‌ ಶಾಲೆಯ ವಿದ್ಯಾರ್ಥಿಗಳು ಧರಣಿಯಲ್ಲಿ ಭಾಗವಹಿಸಿದ್ದರು.

**

ಶೇ.60 ಸರಕುಗಳನ್ನು ಪರಿಸರದಿಂದ ಪಡೆಯುತ್ತಿದ್ದೇವೆ. ಅದು ಉಳಿದರೆ ಸಮೃದ್ಧ ಮಳೆ, ಬೆಳೆಯಾಗಿ ಮನುಕುಲಕ್ಕೆ ನೆಮ್ಮದಿ ಸಿಗುತ್ತದೆ.

–ಸುರೇಶ್‌ ಹೆಬ್ಳೀಕರ್‌, ಪರಿಸರವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT