ಶನಿವಾರ, ಜುಲೈ 24, 2021
26 °C

ಸಿಗರೇಟ್ ಹಂಚಿಕೆದಾರನ ಅಡ್ಡಗಟ್ಟಿ ₹ 45.50 ಲಕ್ಷ ಸುಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಮಾಲ್‌ಗಳು ಹಾಗೂ ಅಂಗಡಿಗಳಿಗೆ ಸಿಗರೇಟ್ ಸರಬರಾಜು ಮಾಡುವ ಹಂಚಿಕೆದಾರ ರಾಕೇಶ್ ಪೊಕರನ್ (40) ಎಂಬುವವರ ಬಳಿಯಿದ್ದ ₹ 45.50 ಲಕ್ಷ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಪುಲಿಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜೂನ್ 11ರಂದು ಸಂಜೆ ನಡೆದಿರುವ ಸುಲಿಗೆ ಸಂಬಂಧ ರಾಕೇಶ್ ನೀಡಿದ ದೂರು ಆಧರಿಸಿ, ಮೂವರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಎಚ್‌ಬಿಆರ್‌ ಲೇಔಟ್‌ ನಿವಾಸಿ ರಾಕೇಶ್, ಐ.ಟಿ.ಸಿ ಸಿಗರೇಟ್ ಕಂಪನಿ ಹಂಚಿಕೆದಾರರು. ಅವರ ಕಂಪನಿಯಲ್ಲಿ 100 ಜನ ಕೆಲಸಗಾರರಿದ್ದಾರೆ. ನಿತ್ಯ ಮಾಲ್, ಅಂಗಡಿಗಳಿಗೆ ಸಿಗರೇಟ್‌ ತಲು ಪಿಸುವ ಸೇಲ್ಸ್‌ಮನ್‌ಗಳು, ಹಣವನ್ನು ರಾಕೇಶ್ ಅವರಿಗೆ ತಂದು ಕೊಡುತ್ತಿದ್ದರು. ಅವರು ಬ್ಯಾಂಕ್‌ಗೆ ಹೋಗಿ ಜಮೆ ಮಾಡುತ್ತಿದ್ದರು.’

‘ಜೂನ್ 11ರಂದು ಸಂಗ್ರಹವಾಗಿದ್ದ ಹಣವನ್ನು ರಾಕೇಶ್ ಅವರು ಬಾಕ್ಸ್‌ನಲ್ಲಿ ಹಾಕಿಕೊಂಡು ಚಾಲಕ ಚಂದ್ರು ಜೊತೆಯಲ್ಲಿ ಕಾರಿನಲ್ಲಿ
ಹೊರಟಿದ್ದರು. ಲಿಂಗರಾಜಪುರ ಬಳಿಯ ಫ್ರೇಜರ್ ಟೌನ್ ಕ್ಲಾರೆನ್ಸ್ ಶಾಲೆ ಮುಂಭಾಗದ ಪಾಟರಿ ರಸ್ತೆಯಲ್ಲಿ ಹಿಂದಿನಿಂದ ಬಂದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿತ್ತು. ಚಾಲಕ ಚಂದ್ರು, ಕಾರು ನಿಲ್ಲಿಸದೇ ಮುಂದಕ್ಕೆ ಹೋಗಿದ್ದರು. ಆದರೆ, ಬೈಕ್ ಸವಾರ ಕಾರನ್ನು ಹಿಂಬಾಲಿಸಿಕೊಂಡು ಬಂದು ಮಾರ್ಗಮಧ್ಯೆಯೇ ಅಡ್ಡಗಟ್ಟಿದ್ದ’ ಎಂದು ಪೊಲೀಸರು ತಿಳಿಸಿದರು. ‘ಚಾಲಕ ಚಂದ್ರು ಕಾರಿನಿಂದ ಇಳಿದು ಸವಾರನ ಬಳಿ ಹೋಗಿ ವಿಚಾರಿಸುತ್ತಿದ್ದರು.

ರಾಕೇಶ್ ಕಾರಿನಲ್ಲೇ ಇದ್ದರು. ಅದೇ ಸಂದರ್ಭದಲ್ಲೇ ಕಾರಿನ ಬಾಗಿಲು ಬಳಿ ಬಂದಿದ್ದ ಇಬ್ಬರು ಆರೋಪಿ ಗಳು, ಚಾಕು ತೋರಿಸಿ ರಾಕೇಶ್‌ ಅವರನ್ನು ಬೆದರಿಸಿದ್ದರು. ಹಣ ವಿದ್ದ ಬಾಕ್ಸ್‌ ತೆಗೆದುಕೊಂಡುಪರಾರಿ ಯಾದರು. ಬೈಕ್ ಸವಾರ ಸಹ ಸ್ಥಳದಿಂದ ಹೊರಟು ಹೋದ. ಈ ಸಂಗತಿಯನ್ನು ರಾಕೇಶ್ ದೂರಿ ನಲ್ಲಿ ತಿಳಿಸಿದ್ದಾರೆ’ ಎಂದರು.

ಬಾಷ್ ಕಂಪನಿ ಲೆಟರ್‌ಹೆಡ್ ಕದ್ದು ವಂಚನೆ

ಬಾಷ್ ಕಂಪನಿ ಲೆಟರ್ ಹೆಡ್ ಕದ್ದು, ವ್ಯವಸ್ಥಾಪಕ ನಿರ್ದೇ ಶಕರ ಸಹಿ ನಕಲಿ ಮಾಡಿ ವಂಚಿಸಿದ ಆರೋಪದಡಿ ಶಿವ ಶಕ್ತಿವೇಲ ಪನ್ನಿಸೆಲ್ವಂ ಎಂಬುವರ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಈ ಸಂಬಂಧ ಬಾಷ್ ಕಂಪನಿ ಪ್ರಧಾನ ವ್ಯವಸ್ಥಾಪಕ ವಿ.ಕೆ.ಕದಮ್ ದೂರು ನೀಡಿದ್ದು, ಶಿವ ಶಕ್ತಿವೇಲ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು. ‘ಐರ್ಲೆಂಡ್‌ನಲ್ಲಿ ವ್ಯಾಪಾರ ವೀಸಾ ಪಡೆಯಲು ಶಿವ ಶಕ್ತಿವೇಲ‌ ಅರ್ಜಿ ಸಲ್ಲಿಸಿದ್ದು, ಬಾಷ್‌ ಕಂಪನಿ ಲೆಟರ್ ಹೆಡ್ ನೀಡಿದ್ದರು. ಪತ್ರದ ಬಗ್ಗೆ ಶಂಕೆಗೊಂಡ ಐರ್ಲೆಂಡ್ ವಲಸೆ ಅಧಿಕಾರಿಗಳು, ಕಂಪನಿಯನ್ನು ಸಂಪರ್ಕಿಸಿದ್ದರು. ಆಗ ಆರೋಪಿ ಕೃತ್ಯ ಬಯಲಾಗಿದೆ’ ಎಂದರು. ‘ಆರೋಪಿ ಬಾಷ್ ಕಂಪನಿ ನೌಕರನಲ್ಲ. ಹೇಗೋ ಲೆಟರ್‌ ಹೆಡ್ ಕದ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು