ಭಾನುವಾರ, ಸೆಪ್ಟೆಂಬರ್ 19, 2021
29 °C
ಅಂತಿಮ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಬನ್ನೇರುಘಟ್ಟ: ಇಎಸ್‌ಜೆಡ್‌ 100 ಚ.ಕಿ.ಮೀ. ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಗೊತ್ತುಪಡಿಸಿದ್ದ ಪರಿಸರ ಸೂಕ್ಷ್ಮ ವಲಯದ (ಇಎಸ್ಜೆಡ್‌) ವ್ಯಾಪ್ತಿಯನ್ನು 268.96 ಚ.ಕಿ.ಮೀಟರ್‌ಗಳಿಂದ 168.84 ಚದರ ಕಿ.ಮೀಗೆ ಕಡಿತಗೊಳಿಸಿ ಕೇಂದ್ರದ ಪರಿಸರ ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ ಬುಧವಾರ ಅಂತಿಮ ಅಧಿಸೂಚನೆ ಪ್ರಕಟಿಸಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡೆಗೆ ಪರಿಸರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ರಾಜಕಾರಣಿಗಳಿಗೆ ಪರಿಸರದ ಬಗ್ಗೆ ಎಳ್ಳಿನಿತು ಕಾಳಜಿ ಇಲ್ಲ ಎಂಬುದು ಇದರಿಂದ ಸ್ಪಷ್ಟ. ಈ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಪರಿಸರ ಕಾರ್ಯಕರ್ತರು ಪ್ರತಿಕ್ರಿಯಿಸಿದ್ದಾರೆ.

ನಿರ್ಧಾರ ಮರುಪರಿಶೀಲನೆಗೆ ಆಗ್ರಹ
ಈ ನಡುವೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸುತ್ತಮುತ್ತ ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್) ಕುರಿತ ಅಧಿಸೂಚನೆಗೆ ಸಂಬಂಧಿಸಿದ ನಿರ್ಧಾರವನ್ನು ರಾಜ್ಯ ಸರ್ಕಾರ ಮರುಪರಿಶೀಲಿಸಬೇಕು ಎಂದು ರಾಜ್ಯಸಭಾ ಸದಸ್ಯ, ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ರಾಜೀವ್, ಬನ್ನೇರುಘಟ್ಟ ಉದ್ಯಾನದ ಸುತ್ತಲಿನ ಇಎಸ್‌ಝಡ್ ಪ್ರದೇಶವನ್ನು ಕುಗ್ಗಿಸುವ ಸರ್ಕಾರದ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ 2016ರಲ್ಲಿ ಹೊರಡಿಸಿದ್ದ ಕರಡು ಅಧಿಸೂಚನೆಯಲ್ಲಿ 268.96 ಚದರ ಕಿ.ಮೀ ವಿಸ್ತೀರ್ಣದ ಪರಿಸರ ಸೂಕ್ಷ್ಮ ವಲಯವನ್ನು ಗುರುತಿಸಲಾಗಿತ್ತು. ಆದರೆ, ಈ ಕುರಿತು ಅಂತಿಮ ಅಧಿಸೂಚನೆ ಪ್ರಕಟವಾಗಿರಲಿಲ್ಲ. ಈ ನಡುವೆ, ರಾಜ್ಯ ಸರ್ಕಾರದ ಸಂಪುಟ ಉಪಸಮಿತಿಯು ಇಎಸ್‌ಜೆಡ್‌ನ ವ್ಯಾಪ್ತಿಯನ್ನು 168.84 ಚದರ ಕಿ.ಮೀ.ಗೆ ಕಡಿತಗೊಳಿಸುವ ಕುರಿತು 2017ರ ಫೆ. 10ರಂದು ನಿರ್ಣಯ ಕೈಗೊಂಡಿತ್ತು.

ರಾಜ್ಯ ಸರ್ಕಾರದ ಸಂಪುಟ ಉಪ ಸಮಿತಿ ಕೋರಿಕೆ ಮೇರೆಗೆ ಕೋರಿಕೆ ಮೇರೆಗೆ ಇಎಸ್‌ಜೆಡ್‌ ವ್ಯಾಪ್ತಿಯನ್ನು 168.84 ಚದರ ಕಿ.ಮೀ.ಗೆ ಸೀಮಿತಗೊಳಿಸಿ ಕೇಂದ್ರ ಸಚಿವಾಲಯ ಗೆಜೆಟ್‌ನಲ್ಲಿ 2018ರ ಅ.30ರಂದು ಕರಡು ಅಧಿಸೂಚನೆ ಪ್ರಕಟಿಸಿತು. ಇದಕ್ಕೆ ಪರಿಸರ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿರೋಧ ಲೆಕ್ಕಿಸದೆ ಕೇಂದ್ರ ಇಎಸ್‌ಜೆಡ್‌ ತಜ್ಞರ ಸಮಿತಿಯು 2019ರ ಫೆ. 28ರ ಸಭೆಯಲ್ಲಿ ಕರಡು ಅಧಿಸೂಚನೆಗೆ ಅನುಮೋದನೆ ನೀಡಿತ್ತು.

ಇಎಸ್‌ಜೆಡ್‌ ಕಡಿತಕ್ಕೆ ಬಿಜೆಪಿಯು ವಿರೋಧ ಪಕ್ಷದಲ್ಲಿದ್ದ ವೇಳೆ ಬಲವಾಗಿ ಪ್ರತಿಪಾದಿಸಿತ್ತು. ಈ ಕುರಿತು ಪರಿಸರ ಕಾರ್ಯಕರ್ತರ ಹೋರಾಟಕ್ಕೆ ಸಂಸದರಾದ ಪಿ.ಸಿ.ಮೋಹನ್‌, ತೇಜಸ್ವಿಸೂರ್ಯ ಹಾಗೂ ರಾಜೀವ ಚಂದ್ರಶೇಖರ್‌ ಅವರೂ ದನಿಗೂಡಿಸಿದ್ದರು. ಪರಿಸರ ಕಾರ್ಯಕರ್ತರು ಪಿ.ಸಿ.ಮೋಹನ್‌ ಹಾಗೂ ರಾಜೀವ ಚಂದ್ರಶೇಖರ್‌ ನೇತೃತ್ವದಲ್ಲಿ ಆಗಿನ ಕೇಂದ್ರ ಪರಿಸರ ಸಚಿವ ಡಾ.ಹರ್ಷವರ್ಧನ ಅವರನ್ನು ಭೇಟಿ ಮಾಡಿ, ಇಎಸ್‌ಜೆಡ್‌ ಕಡಿತಗೊಳಿಸದಂತೆ ಒತ್ತಾಯಿಸಿದ್ದರು. ಬಳಿಕ ಸಮಿತಿಯ ನಿರ್ಣಯವನ್ನು ಸಚಿವಾಲಯ ತಡೆಹಿಡಿದಿತ್ತು. ಸಚಿವಾಲಯದ ನಿರ್ದೇಶಕ ಡಾ.ಸುಬ್ರತಾ ಬೋಸ್‌ 2019ರ ಆ.20ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಇಎಸ್‌ಜೆಡ್‌ ವ್ಯಾಪ್ತಿಯನ್ನು ಮೂಲದಷ್ಟೇ (268.96 ಚ.ಕಿ.ಮೀ ) ಉಳಿಸಿಕೊಳ್ಳುವ ಸಾಧ್ಯತೆ ಬಗ್ಗೆ ವರದಿ ಕೇಳಿದ್ದರು.

ಅಚ್ಚರಿ ಎಂದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ  ಇಎಸ್‌ಜೆಡ್‌ ಕಡಿತಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಇದೇ ಫೆ.1ರಂದು ಪತ್ರ ಬರೆದಿದ್ದರು.

‘ರಾಜ್ಯ ಸರ್ಕಾರ ಈಗಾಗಲೇ ನಿಲುವನ್ನು ಸ್ಪಷ್ಟಪಡಿಸಿದೆ. ಇಎಸ್‌ಜೆಡ್‌ ಬಗ್ಗೆ ಅಂತಿಮ ಅಧಿಸೂಚನೆ ಪ್ರಕಟವಾಗುವವರೆಗೆ ರಾಷ್ಟ್ರೀಯ ಉದ್ಯಾನದ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಹಮ್ಮಿಕೊಳ್ಳುವುದಿದ್ದರೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿಸಮಿತಿ (ಎಸ್‌ಬಿಡಬ್ಲ್ಯುಎಲ್‌) ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ಇದರಿಂದಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿ ಅನೇಕ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹಾಗಾಗಿ ರಾಜ್ಯ ಸರ್ಕಾರ ಪ್ರಸ್ತಾಪಿಸಿರುವಂತೆಯೇ ಇಎಸ್‌ಜೆಡ್‌ ಕುರಿತ ಅಂತಿಮ ಅಧಿಸೂಚನೆ ಪ್ರಕಟಿಸಬೇಕು’ ಎಂದು ಮುಖ್ಯಮಂತ್ರಿ ಒತ್ತಾಯಿಸಿದ್ದರು.

ಆ ಬಳಿಕ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು, ‘ಇಎಸ್‌ಜೆಡ್‌ ವ್ಯಾಪ್ತಿ ಕಡಿತ ಮಾಡುವುದಿಲ್ಲ’ ಎಂದು ಭರವಸೆ ನೀಡಿದ್ದರು. ಈ ನಡುವೆಯೇ ಸುಮಾರು ವ್ಯಾಪ್ತಿಯನ್ನು 100.12 ಚ.ಕೀ.ಮೀ.ಗಳಷ್ಟು ಕಡಿತ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು