ಕನ್ನಡ ಶಾಲೆಗೆ ನಿಧಾನ ವಿಷ: ಬರಗೂರು ಆಕ್ರೋಶ

7

ಕನ್ನಡ ಶಾಲೆಗೆ ನಿಧಾನ ವಿಷ: ಬರಗೂರು ಆಕ್ರೋಶ

Published:
Updated:

ಬೆಂಗಳೂರು: ‘ರಾಜ್ಯ ಸರ್ಕಾರವು ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಮಾಧ್ಯಮವನ್ನು ಅಳವಡಿಸುವ ನಿರ್ಧಾರ,  ಕನ್ನಡ ಶಾಲೆಗಳಿಗೆ ನಿಧಾನವಾಗಿ ವಿಷವುಣಿಸುವ ಪ್ರಯತ್ನ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಿರಿಯ ಪ್ರಾಥಮಿಕ ಹಂತದಲ್ಲಿ ಕನ್ನಡ ಅಥವಾ ಮಾತೃ ಭಾಷಾ ಮಾಧ್ಯಮ ಮತ್ತು ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಕಲಿಸುವ ನೀತಿಯು ವೈಜ್ಞಾನಿಕವಾಗಿದ್ದು ಅದನ್ನು ಬದಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸುಮಾರು 25 ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕಾರವು ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಮಾಧ್ಯಮ ಅಳವಡಿಸಿದಾಗ ಮರಾಠಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದವು. ಆಗ 13 ತಜ್ಞರುಳ್ಳ ಸಮಿತಿಯನ್ನು ರಚಿಸಿ ಅಧ್ಯಯನ ಮಾಡಿಸಲಾಯಿತು. ಈ ಸಮಿತಿಯ ಶಿಫಾರಸಿನಂತೆ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸುವ ನೀತಿ ಜಾರಿಗೆ ತರಲಾಯಿತು. ಈಗ ಅಲ್ಲಿ ಮರಾಠಿ ಶಾಲೆಗಳು ಸದೃಢವಾಗಿವೆ ಎಂದು ತಿಳಿಸಿದ್ದಾರೆ.

ಅಧ್ಯಾಪಕರ ಆಸಕ್ತಿಯಿಂದ ಅದ್ಭುತವಾಗಿ ಬೆಳೆದ ಕನ್ನಡ ಶಾಲೆಗಳಿದ್ದು, ಅವುಗಳ ಅಭಿವೃದ್ಧಿ ಅಂಶಗಳನ್ನು ಪರಿಗಣಿಸಬೇಕು. ಯಾವುದೇ ಸಕಾರಾತ್ಮಕ ಅಧ್ಯಯನ ಮಾಡದೇ ಅಧಿಕಾರಿಗಳ ಅಭಿಪ್ರಾಯವೇ ಅಂತಿಮವೆಂದು ತಿಳಿದು ಸಲ್ಲದ ಪ್ರಯೋಗಗಳಿಗೆ ಮುಂದಾಗುವುದು ಪ್ರಜಾಸತ್ತಾತ್ಮಕ ಸರ್ಕಾರದ ಲಕ್ಷಣವಲ್ಲ ಎಂದಿದ್ದಾರೆ.

 ಆಯಾ ರಾಜ್ಯ ಭಾಷೆ ಮತ್ತು ಮಾತೃಭಾಷೆ ಶಾಲೆಗಳನ್ನು ಉಳಿಸಿ ಬೆಳೆಸಿದ ರಾಜ್ಯಗಳ ಅನುಭವನ್ನು ಅರಿಯಬೇಕು. ಇದ್ಯಾವುದನ್ನೂ ಮಾಡದೇ ಪ್ರಾಥಮಿಕ ಶಿಕ್ಷಣವನ್ನು ಪ್ರಯೋಗ ಬಲಿಗಳ ತಾಣವಾಗಿಸಬಾರದು ಎಂದು ಹೇಳಿದ್ದಾರೆ.

ಕನ್ನಡ ಅಥವಾ ಮಾತೃ ಭಾಷಾ ಶಿಕ್ಷಣವು ಕೇವಲ ಶೈಕ್ಷಣಿಕ ಪ್ರಶ್ನೆಯಲ್ಲ. ಸಾಂಸ್ಕೃತಿಕ ಪರಿಣಾಮದ ಪ್ರಶ್ನೆಯೂ ಹೌದು. ಕನ್ನಡ ಅಥವಾ ಮಾತೃಭಾಷಾ ಶಿಕ್ಷಣವನ್ನು ಕಿರಿಯ ಪ್ರಾಥಮಿಕ ಹಂತದಲ್ಲೇ ಕೊಂದು ಹಾಕಿದರೆ ಮುಂದೆ ಕನ್ನಡ ಪತ್ರಿಕೆ, ಪುಸಕ್ತ, ಸಿನಿಮಾ, ನಾಟಕಗಳ ಅಭಿರುಚಿಯನ್ನೇ ಹಾಳು ಮಾಡಿದಂತಾಗುತ್ತದೆ. ಆದ್ದರಿಂದ ಸರ್ಕಾರವು ಕೂಡಲೇ ತನ್ನ ನಿರ್ಧಾರವು ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆದು ಕನ್ನಡ ಶಾಲಾ ಪರವಾದ ಸಕಾರಾತ್ಮಕ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.

ಚಳವಳಿ ಅನಿವಾರ್ಯ:ಕನ್ನಡ ಗೆಳೆಯರ ಬಳಗ

ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಮತ್ತು ಶಾಸಕರ ನಿಧಿಯಿಂದ ಖಾಸಗಿ ಶಾಲೆಗಳಿಗೆ ಅನುದಾನ ನೀಡುವ ಪ್ರಯತ್ನ ಮಾಡಿದರೆ ಗೋಕಾಕ್‌ ಮಾದರಿಯ ಚಳವಳಿ ಅನಿವಾರ್ಯ ಎಂದು ಕನ್ನಡ ಗೆಳೆಯರ ಬಳಗ ಎಚ್ಚರಿಕೆ ನೀಡಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಸಂಬಂಧ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಕನ್ನಡದ ಕುತ್ತಿಗೆ ಹಿಸುಕುವ ನಡೆಯಾಗಿದೆ ಎಂದು ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ ಹೇಳಿದ್ದಾರೆ.

2014 ರಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಬಂದಾಗ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿಮಾನಿಗಳು ಕನ್ನಡ ಮಾಧ್ಯಮದ ಪರವಾಗಿ ನಿಲುವು ತೆಗೆದುಕೊಳ್ಳುವಂತೆ ಒತ್ತಡ ಹೇರಿದ್ದರಿಂದ ರಾಜ್ಯ ಸರ್ಕಾರ 1 ರಿಂದ  4 ನೇ ತರಗತಿವರೆಗೆ ಕನ್ನಡ ಮಾಧ್ಯಮದ ಪರ ಕಾನೂನು ರಚಿಸಿತು. ಅನ್ನು ರಾಜ್ಯಪಾಲರಿಗೆ ಕಳುಹಿಸಿತು. ಕನ್ನಡವನ್ನು ಕಾಪಾಡಬೇಕಾದ ಸರ್ಕಾರವೇ ಕನ್ನಡ ವಿರೋಧಿ ನಿಲುವು ತಳೆದಿರುವುದು ದುರದೃಷ್ಟಕರ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !