ಮಂಗಳವಾರ, ಜನವರಿ 28, 2020
18 °C

ಈಶ್ವರಪ್ಪಗೆ ಜೀವಬೆದರಿಕೆ ಕರೆ ಬಂದದ್ದು ತಮಿಳುನಾಡಿನಿಂದ: ಗೃಹ ಸಚಿವ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಶುಕ್ರವಾರ ಜೀವಬೆದರಿಕೆ ಕರೆ ಬಂದದ್ದು ನಿಜ. ಆ ಎರಡೂ ಕರೆಗಳನ್ನು ಪರಿಶೀಲಿಸಿದಾಗ, ತಮಿಳುನಾಡಿನಿಂದ ಬಂದದ್ದು ಎಂಬುದು ಗೊತ್ತಾಗಿದೆ’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಪ್ರಗತಿ ಪರಿಶೀಲನಾ ಸಭೆಗೆ ಶನಿವಾರ ಬಂದಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ‘ಮುಂದಿನ ತನಿಖೆಯನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಕೈಗೊಳ್ಳುತ್ತಾರೆ. ಈಶ್ವರಪ್ಪ ಅವರಿಗೆ ಸೂಕ್ತ ಭದ್ರತೆ ಕೊಡಲು ಸೂಚನೆ ನೀಡಿದ್ದೇನೆ’ ಎಂದು ಹೇಳಿದರು. 

ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ತಮಿಳು ಭಾಷೆಯಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದ. ‘ಈಶ್ವರಪ್ಪ ಕೇವಲ ಹಿಂದುತ್ವ ಕುರಿತು ಮಾತನಾಡುತ್ತಾರೆ. ಪರಿಣಾಮ 48 ಗಂಟೆಯೊಳಗೆ ಅವರ ಜೀವಕ್ಕೆ ಅಪಾಯವಾಗಲಿದೆ’ ಎಂದು ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. 

ರಾಜ್ಯಕ್ಕೆ ನೆರೆ ಪರಿಹಾರ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿಲ್ಲವಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ಮುಖ್ಯಮಂತ್ರಿ ಜತೆ ಮೋದಿ ಮಾತನಾಡಿದ್ದಾರೆ. ಮೋದಿ ಅವರಿಗೆ ಕರ್ನಾಟಕದ ಬಗ್ಗೆ ಅಪಾರ ಪ್ರೀತಿ, ವಿಶ್ವಾಸವಿದೆ. ಬರ ಬಂದಾಗ ರಾಜ್ಯಕ್ಕೆ ಹೆಚ್ಚು ಪರಿಹಾರ ನೀಡಿದ್ದಾರೆ. ಈಗಲೂ ಕೊಡುತ್ತಾರೆ. ವಿರೋಧ ಪಕ್ಷದವರು ತಮ್ಮ ಸರ್ಕಾರವಿದ್ದಾಗ ಎಷ್ಟು ಬರ ಪರಿಹಾರ ರಾಜ್ಯಕ್ಕೆ ಬಂದಿತ್ತು. ಕಳೆದ 5 ವರ್ಷಗಳಲ್ಲಿ ಎಷ್ಟು ಬಂದಿದೆ ಎಂಬುದುನ್ನು ತಿಳಿದುಕೊಂಡು ಮಾತನಾಡಲಿ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು