ಭಾನುವಾರ, ಮೇ 9, 2021
25 °C

ಎಚ್‌ಡಿಕೆಗಿಂತ ನಿಖಿಲ್‌ ನೀತಿ,ನಡತೆ ಚೆನ್ನ: ಹೊರಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗಿಂತ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿಯ ನೀತಿ, ನಡತೆ ಚೆನ್ನಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಶ್ಲಾಘಿಸಿದರು.

ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ಸೋಮವಾರ ಇಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್‌ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್‌ ಬಗ್ಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದರು.

‘ಒಳ್ಳೆಯ ಗುಣಗಳು ಆತನಲ್ಲಿವೆ. ಬಹಳ ಪ್ರಬುದ್ಧನಾಗಿದ್ದಾನೆ. ರಾಜಕೀಯದಲ್ಲಿ ಅಪ್ಪನಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಸಾಮರ್ಥ್ಯ ಆತನಲ್ಲಿದೆ’ ಎಂದು ಹೊಗಳಿದರು.

‘ಕೆಲ ಬುದ್ದಿಗೇಡಿಗಳು ಸುಮಲತಾ ಅಂಬರೀಷ್‌ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದರು. ಆದರೆ, ತಾಯಿ ಮತ್ತು ಮಗ (ಅನಿತಾ ಕುಮಾರಸ್ವಾಮಿ, ನಿಖಿಲ್‌) ಎಲ್ಲಿಯೂ ಯಾವುದೇ ಹೇಳಿಕೆ ನೀಡದೇ ಗೌರವದಿಂದ ನಡೆದುಕೊಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಮಲತಾ ತಂಟೆ ಬೇಡ

ಸುಮಲತಾ ಒಳ್ಳೆಯ ಹೆಣ್ಣು ಮಗಳು. ಅವರ ತಂಟೆಗೆ ಹೋಗುವುದು ಬೇಡ. ಅವರನ್ನು ನಮ್ಮ ಅಕ್ಕ, ತಂಗಿ ಎಂದು ತಿಳಿದುಕೊಳ್ಳಬೇಕು. ಅವರ ವಿರುದ್ಧ ಅನಗತ್ಯ ಹೇಳಿಕೆ ನೀಡಿ ಮೈಮೇಲೆ ಎಳೆದುಕೊಂಡಿರುವುದು ಸರಿಯಲ್ಲ. ಇದರಿಂದ ಅವರ ಪರ ಮತ್ತಷ್ಟು ಅನುಕಂಪ ಹೆಚ್ಚಾಗಲು ನಾವೇ ಅವಕಾಶ ಮಾಡಿಕೊಟ್ಟಂತಾಗಿದೆ’ ಎಂದು ಹೇಳಿದರು.

‘ವಿಧಾನ ಪರಿಷತ್‌ ಸಭಾಪತಿ ಸ್ಥಾನದಿಂದ ನನ್ನನ್ನು ಕೆಳಗಿಳಿಸಲಾಯಿತು. ಸಚಿವ ಸ್ಥಾನವನ್ನೂ ನೀಡಲಿಲ್ಲ. ಕಾರಣ ಏನೆಂದು ಗೊತ್ತಿಲ್ಲ. ಈ ನೋವನ್ನು ಮನಸ್ಸಿನಲ್ಲಿ ಹಿಡಿದಿಟ್ಟುಕೊಂಡಿದ್ದೇನೆ’ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು