ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು: ಸರ್ಕಾರ–ರೈತರ ಸಂಘರ್ಷ

ಸುವರ್ಣಸೌಧ ಆವರಣಕ್ಕೆ ಕಬ್ಬಿನ ಲಾರಿ ನುಗ್ಗಿಸಿ ಆಕ್ರೋಶ l ಗೂಂಡಾಗಳ ಕೃತ್ಯ: ಸಿ.ಎಂ ಕಿಡಿ
Last Updated 18 ನವೆಂಬರ್ 2018, 19:33 IST
ಅಕ್ಷರ ಗಾತ್ರ

ಬೆಂಗಳೂರು/ಬೆಳಗಾವಿ: ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಸರ್ಕಾರ ಹಾಗೂ ಕಬ್ಬು ಬೆಳೆಗಾರರ ನಡುವಿನ ಸಂಘರ್ಷ ತಾರಕಕ್ಕೆ ಏರಿದೆ.

ತಮ್ಮ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬೆಳಗಾವಿಗೇ ಬಂದು ಸಭೆ ನಡೆಸಬೇಕು ಎಂದು ಆಗ್ರಹಿಸಿ ರೈತರು ಬೆಳಗಾವಿಯ ಸುವರ್ಣಸೌಧದ ಆವರಣಕ್ಕೆ ಕಬ್ಬು ತುಂಬಿದ ಲಾರಿಗಳನ್ನು ಭಾನುವಾರ ನುಗ್ಗಿಸಿದರು.

ಇದಕ್ಕೆ ಬೆಂಗಳೂರಿನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ‘ಗೇಟು ಮುರಿಯಲು ಮುಂದಾದವರು ರೈತರ ಕುಲಕ್ಕೆ ಅವಮಾನಿಸುವ ಗೂಂಡಾಗಳು’ ಎಂದು ಕಿಡಿಕಾರಿದರು. ಪ್ರತಿಭಟನಕಾರರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ‘ಇಂಥವರ ವರ್ತನೆಗೆ ಕ್ರಮ ತೆಗೆದುಕೊಳ್ಳದೆ ಸುಮ್ಮನೆ ಬಿಡಬೇಕೇ’ ಎಂದು ಗುಡುಗಿದರು.

‘ನಾಲ್ಕೂವರೆ ವರ್ಷಗಳ ಹಿಂದೆ ಯಾರಿಗೋ ಮತ ಹಾಕಿದ್ದೀರಿ. ಅಂದು ಆಯ್ಕೆಯಾದವರು ನಿಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ನಾನು ಹೊಣೆಯೇ. ಜಿಲ್ಲಾಮಟ್ಟದ ಅಧಿಕಾರಿಗಳ ಮೂಲಕ ಸಭೆ ನಡೆಸಿ ನಿಮಗೆ ನ್ಯಾಯಯುತ ಬೆಲೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು.

ನಾಳೆ ಸಭೆ: ಇದರ ಬೆನ್ನಲ್ಲೇ, ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ಇದೇ 20 ರಂದು ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿ ರೈತ ಮುಖಂಡರು, ಸಕ್ಕರೆ ಕಾರ್ಖಾನೆ ಮಾಲೀಕರು, ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸುವ ತೀರ್ಮಾನವನ್ನು ಮುಖ್ಯಮಂತ್ರಿ ಪ್ರಕಟಿಸಿದರು.

ಕಾರಣ ಏನು?: ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದ ಕಬ್ಬು ಬೆಳೆಗಾರರು, ಕುಮಾರಸ್ವಾಮಿ ಅವರ ಭರವಸೆ ಮೇರೆಗೆ ಧರಣಿ ಕೈಬಿಟ್ಟಿದ್ದರು. ಬೆಂಗಳೂರಿನಲ್ಲೇ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಶನಿವಾರ ಹೇಳಿಕೆ ನೀಡಿದ್ದರು. ಇದು ‌ರೈತರ ಆಕ್ರೋಶಕ್ಕೆ ಕಾರಣವಾಯಿತು.

ರೈತರು ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು. ಪುಣೆ–ಬೆಂಗಳೂರು ರಸ್ತೆಯಲ್ಲಿ ಹೋಗುತ್ತಿದ್ದ ಕಬ್ಬು ತುಂಬಿದ 5 ಲಾರಿಗಳನ್ನು ತಡೆದು, ಸುವರ್ಣ ವಿಧಾನಸೌಧದ ಆವರಣಕ್ಕೆ ನುಗ್ಗಿಸಿದರು. ಕೆಲವರು ಲಾರಿಯಲ್ಲಿದ್ದ ಕಬ್ಬುಗಳನ್ನು ಕೆಳಕ್ಕೆಸೆದು ಆಕ್ರೋಶ
ವ್ಯಕ್ತಪಡಿಸಿದರು.

ಸಭೆಯಲ್ಲಿ ಸಂಧಾನ: ರೈತ ಮುಖಂಡ
ರನ್ನು ಪೊಲೀಸರು ವಶಕ್ಕೆ ಪಡೆದರು. ಈ ಕ್ರಮ ಖಂಡಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಂಜೆ ಮತ್ತೆ ಪ್ರತಿಭಟನೆ ನಡೆಸಿದರು. ಅವರೊಂದಿಗೆ ಪೊಲೀಸ್ ಅಧಿಕಾರಿಗಳು ಸಂಧಾನ ಸಭೆ ನಡೆಸಿದರು. ವಶಕ್ಕೆ ಪಡೆಯಲಾಗಿದ್ದ 10 ರೈತ ಮುಖಂಡರನ್ನು ಬಿಡುಗಡೆ ಮಾಡಲಾಯಿತು. ಅವರ ವಿರುದ್ಧ ಹಾನಿ, ಗುಂಪುಗಾರಿಕೆ, ಗಲಭೆ ಸೃಷ್ಟಿ ಪ್ರಕರಣ ದಾಖಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದರು. ಪ್ರಕರಣ ದಾಖಲಿಸುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದರು. ಮುಖ್ಯಮಂತ್ರಿ 20ರಂದು ಬೆಂಗಳೂರಿನಲ್ಲಿ ಏರ್ಪಡಿಸಿರುವ ಸಭೆಯಲ್ಲಿ ಭಾಗವಹಿಸಲು ರೈತರುಒಪ್ಪಿದರು.

ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ: ಕಬ್ಬಿಗೆ ಸಮರ್ಪಕ ಬೆಲೆ ನಿಗದಿ ಪಡಿಸಬೇಕು ಎಂದು ಆಗ್ರಹಿಸಿ ಮುಧೋಳದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದ ಎರಡು ಟ್ರ್ಯಾಕ್ಟರ್‌ಗಳಿಗೆ ಪ್ರತಿಭಟನಾಕಾರರು ಶನಿವಾರ ತಡರಾತ್ರಿ ಬೆಂಕಿ ಹಚ್ಚಿದರು. ಮತ್ತೆರಡು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲು ಯತ್ನಿಸಿದರು. 15 ವಾಹನಗಳಲ್ಲಿದ್ದ ಕಬ್ಬುಗಳನ್ನು ಭಾನುವಾರ ನೆಲಕ್ಕೆ ಸುರಿದರು. 12ಕ್ಕೂ ಹೆಚ್ಚು ವಾಹನಗಳ ಗಾಳಿ ತೆಗೆದರು.

ನಾಲ್ಕು ವರ್ಷಗಳ ಕಾಲ ಎಲ್ಲಿ ಮಲಗಿದ್ದೆ ನೀನು

‘ಆಡಳಿತ ನಡೆಸಲು ಕುಮಾರಸ್ವಾಮಿ ನಾಲಾಯಕ್‌ ಎಂದು ಮಹಿಳೆಯೊಬ್ಬಳು ನನ್ನನ್ನು ನಿಂದಿಸಿದ್ದಾಳೆ. ನಾಲ್ಕೂವರೆ ವರ್ಷಗಳ ಹಿಂದೆ ಯಾವುದೋ ಕಂಪನಿಯವರು ಕಬ್ಬಿಗೆ ಸರಿಯಾದ ದರ ನೀಡಿಲ್ಲ ಎಂಬ ಕಾರಣಕ್ಕೆ ನಾನು ಹೇಗೆ ನಾಲಾಯಕ್‌ ಆಗುತ್ತೇನೆ? ಇದಕ್ಕೂ ನನಗೂ ಏನು ಸಂಬಂಧ? ನಾಲ್ಕು ವರ್ಷಗಳ ಕಾಲ ಎಲ್ಲಿ ಮಲಗಿದ್ದೆ ನೀನು’ ಎಂದು ಕುಮಾರಸ್ವಾಮಿ ಅವರು ರೈತ ಹೋರಾಟಗಾರ್ತಿ ಜಯಶ್ರೀ ಗುರಣ್ಣವರ ಅವರನ್ನು ಕಟು ಮಾತುಗಳಲ್ಲಿ ಜರಿದರು.

ಇಂಥ ಮಾತು ನಿರೀಕ್ಷಿಸಿರಲಿಲ್ಲ: ‘ಗೇಟಿಗೆ ಬೀಗ ಹಾಕಲು ಬಂದ ಪೊಲೀಸರು, ನನ್ನ ಕೊರಳಿಗೆ ಸರಪಳಿ ಹಾಕಿದ್ದಾರೆ. ನಾನು ರೈತ ಮಹಿಳೆ. ರಕ್ತ ಬೇಕಾದರೂ ಕೊಡುತ್ತೇನೆ. ಮುಖ್ಯಮಂತ್ರಿ ಮಾತು ತಪ್ಪಿದ್ದಾರೆ’ ಎಂದು ಜಯಶ್ರೀ ಆಕ್ರೋಶ ವ್ಯಕ್ತಪಡಿಸಿದರು.

‘ನನಗೆ ತಾಯಿ ಹಾಗೂ ಪತಿಯ ಮನೆ ಎರಡು ಕಡೆಗಳಲ್ಲೂ ಜಮೀನಿದೆ. ನಾನೂ ಜಮೀನಿನಲ್ಲಿ ಕೆಲಸ ಮಾಡುತ್ತೇನೆ. ಕಬ್ಬು ಬೆಳೆಗಾರರ ‍ಪರವಾಗಿ ದನಿ ಎತ್ತಿರುವ ನನ್ನನ್ನು ಅವಮಾನಿಸಿದ್ದಾರೆ' ಎಂದರು.

ಕುಮಾರಸ್ವಾಮಿ ಅವರು ರಾಜ್ಯದ ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ‍ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರೈತರ ಬೇಡಿಕೆಗಳೇನು

* ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದವರ ಬಾಕಿ ಕೊಡಿಸಬೇಕು.

* ಈ ಬಾರಿಯ ಕಬ್ಬು ದರ ನಿಗದಿಪಡಿಸಿದ ನಂತರವಷ್ಟೇ ಕಬ್ಬು ಅರೆಯಲು ಅವಕಾಶ ನೀಡಬೇಕು.

* ಅಲ್ಲಿಯವರೆಗೂ ಸಕ್ಕರೆ ಕಾರ್ಖಾನೆಗಳನ್ನು ಬಂದ್ ಮಾಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT