ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ: ಲಕ್ಷ್ಮಿ ಹೆಬ್ಬಾಳಕರ ಬಣ ಮೇಲುಗೈ

7

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ: ಲಕ್ಷ್ಮಿ ಹೆಬ್ಬಾಳಕರ ಬಣ ಮೇಲುಗೈ

Published:
Updated:

ಬೆಳಗಾವಿ: ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನಡುವೆ ಉಂಟಾಗಿದ್ದ ವೈಮನಸ್ಸು ತಾತ್ಕಲಿಕವಾಗಿ ಶಮನಗೊಂಡಿದ್ದು ತೀವ್ರ ಕುತೂಹಲ ಮೂಡಿಸಿದ್ದ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳಕರ ಬಣ ಮೇಲುಗೈ ಸಾಧಿಸಿದೆ. 

ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳಕರ ನಡುವೆ ಉಂಟಾಗಿದ್ದು ಗೊಂದಲವನ್ನು ಬಗೆಹರಿಸಲು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ ಸೂಚನೆ ಮೇರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬೆಳಗಾವಿಗೆ ಆಗಮಿಸಿದ್ದರು. 

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಂಧಾನ ಸಭೆಯಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯಗಳನ್ನು ಸೌಹಾರ್ದದಿಂದ ಬಗೆಹರಿಸಲಾಗಿದೆ, ಸರ್ಕಾರಕ್ಕೆ ಯಾವುದೇ ಅಪಾಯ ಸಮಸ್ಯೆ ಇಲ್ಲ ಎಂದು ಈಶ್ವರ ಖಂಡ್ರೆ ಹೇಳಿದರು.

ಇದಕ್ಕೆ ಸಹಕರಿಸಿದ ಮುಖಂಡರನ್ನು ಅಭಿನಂದಿಸುತ್ತೇನೆ. ಪೌರಾಡಳಿತ ಸಚಿವರಿಗೂ ಸಹಮತವಿದೆ. ಅವರೊಂದಿಗೂ ಚರ್ಚೆ ಮಾಡಿದ್ದೇನೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಟ್ಟಾಗಿ ಇದ್ದಾರೆ. ಮುಂದೆಯೂ ಒಟ್ಟಾಗಿ ಹೋಗುತ್ತಾರೆ. ಕಾಂಗ್ರೆಸ್ ಗುಂಪು ಮಾತ್ರ ಇಲ್ಲಿದೆ ಎಂದು ಖಂಡ್ರೆ ಹೇಳಿದರು.

ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಕಾರ್ಯಾಧ್ಯಕ್ಷರು ಸಮಸ್ಯೆ ಬಗೆಹರಿಸಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಸಮಸ್ಯೆ ಪರಿಹಾರವಾಗಿದೆ. ಕೆಪಿಸಿಸಿ ಅಧ್ಯಕ್ಷರೂ ಮಾತನಾಡಿದ್ದಾರೆ. ಅವಿರೋಧ ಆಯ್ಕೆಯಾಗಿದೆ. ಎರಡೂ ಕಡೆಗಳಲ್ಲೂ ಸಂಪರ್ಕ ಕೊರತೆ ಉಂಟಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಚರ್ಚಿಸಿದ್ದೇವೆ. ಲಕ್ಷ್ಮಿ ಜೊತೆಯೂ ಚರ್ಚೆ ಮಾಡಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಿಎಲ್ ಡಿ ಬ್ಯಾಂಕ್ ಚುನಾವಣೆ ಸಮಸ್ಯೆ  ಸೌಹಾರ್ದಯುತವಾಗಿ ಬಗೆಹರಿದಿದೆ, ಪಕ್ಷದ ಚಿಹ್ನೆ ಬಂದಾಗ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು. 

ಈ ಹಿಂದೆ ಚುನಾವಣೆ ಮುಂದೂಡಿದ್ದಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಹೆಬ್ಬಾಳಕರ ಬೆಂಬಲಿಗರೊಂದಿಗೆ ಇಲ್ಲಿನ ತಹಶೀಲ್ದಾರ್ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸಿದ್ದರು. ಇದು ವಿವಾದ ಸೃಷ್ಟಿಸಿತ್ತು. ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ನಡುವೆ ಆರೋಪ, ಪ್ರತಿರೋಪಗಳು ಕೇಳಿಬಂದಿದ್ದವು.

ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮಹಾದೇವ ಪಾಟೀಲ ಮರಾಠಾ ಸಮಾಜದವರು ಹಾಗೂ ಉಪಾಧ್ಯಕ್ಷ ಬಾಪುಸಾಬ ಜಮಾದಾರ ಮುಸ್ಲಿಂ ಸಮಾಜದವರು. ಇವರಿಬ್ಬರೂ ಲಕ್ಷ್ಮಿ ಹೆಬ್ಬಾಳಕರ ಕಡೆಯವರು.

ಸತೀಶಗೆ ಅವಮಾನವಾದರೆ ಇಬ್ಬರೂ ಉಗ್ರವಾದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದ ರಮೇಶ ಜಾರಕಿಹೊಳಿ ಚುನಾವಣೆ ವೇಳೆಯಲ್ಲಾಗಲಿ ಅಥವಾ ಈಶ್ವರ ಖಂಡ್ರೆ ಭೇಟಿ ವೇಳೆಯಲ್ಲಾಗಲಿ ಕಾಣಿಸಿಕೊಳ್ಳಲಿಲ್ಲ. ವರಿಷ್ಠರು ಬಂದಾಗಲೂ ದೂರ ಉಳಿದು ಭಿನ್ನಮತ ಜೀವಂತ ಇರುವುದರ ಸಂದೇಶವನ್ನು ರಮೇಶ ಜಾರಕಿಹೊಳಿ ರವಾನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !