ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಹವು ಆತ್ಮಕ್ಕೆ ಸಿಗುವ ಖುಷಿ

ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದ ಕವಿ ಅಬ್ದುಲ್ ರಶೀದ್ ಅಭಿಮತ
Last Updated 24 ಏಪ್ರಿಲ್ 2019, 15:45 IST
ಅಕ್ಷರ ಗಾತ್ರ

ಶಿರಸಿ: ಒಳ್ಳೆಯ ಕೃತಿಗಳ ಓದು ಬರಹಗಾರನೊಳಗಿನ ಅಹಂಕಾರದ ಪೊರೆ ಕಳಚಿ, ಜ್ಞಾನ ಸಂಪಾದನೆಯ ಮಾರ್ಗಕ್ಕೆ ತೆರೆದುಕೊಳ್ಳುತ್ತದೆ ಎಂದು ಕವಿ ಅಬ್ದುಲ್ ರಶೀದ್ ಹೇಳಿದರು.

ಬುಧವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಎಚ್.ಶ್ರೀಧರರ ಸ್ಮರಣೆಯಲ್ಲಿ ನೀಡುವ ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಬರಹಗಾರನಿಗೆ ತಾನು ಬರೆದಿದ್ದು ತನಗೇ ಅರ್ಥವಾದಾಗ ಅಹಂ ಇರುವುದಿಲ್ಲ. ಬರಹದ ಬಗ್ಗೆ ಅತೃಪ್ತಿ ಇದ್ದಷ್ಟೂ ಲೇಖಕ ಮೌನಿಯಾಗುತ್ತಾನೆ. ಆ ಮೂಲಕ ಒಳ್ಳೆಯ ಕೃತಿಗಳ ಓದು ಸಾಧ್ಯವಾಗುತ್ತದೆ ಎಂದರು.

ಸಾಹಿತಿಗಳು ಭ್ರಮೆಯಲ್ಲಿ ಬದುಕಬಾರದು. ಬದುಕು ಯಾವುದೇ ಪುಸ್ತಕ, ಗ್ರಂಥಾಲಯಗಳಲ್ಲಿ ಇರುವುದಿಲ್ಲ. ಕಂಡ ಪ್ರಪಂಚವನ್ನು ಮುಚ್ಚುಮರೆಯಿಲ್ಲದೇ, ಪಾರದರ್ಶಕವಾಗಿ ತೆರೆದಿಡುವ ಕಾರ್ಯ ಸಾಹಿತಿಗಳಿಂದ ಆಗಬೇಕು. ಹಾಗಾದಾಗ ಮಾತ್ರ ಒಳ್ಳೆಯ ಕಥೆ ಹುಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

‘ಬರಹ ನಮ್ಮ ಅಲೆದಾಟದಲ್ಲಿ ಸಿಗುವ ಖುಷಿ. ಬರಹವು ಆತ್ಮ, ದೇಹಕ್ಕೆ ಸಿಗುವ ಖುಷಿ. ಬರವಣಿಗೆಯೆನ್ನುವುದು ಜಾದೂ ಇದ್ದ ಹಾಗೆ. ಅದಕ್ಕೆ ಬರಹಗಾರ, ಓದುಗರು ಯಾರೂ ಕಾರಣರಲ್ಲ. ಸಾಹಿತಿಗಳು ಈ ಕ್ಷೇತ್ರದಲ್ಲಿ ಜಾದೂಗಾರನ ಪಾತ್ರ ನಿರ್ವಹಿಸುತ್ತಾರೆ. ನಾವು ಕಂಡ ಪ್ರಪಂಚವನ್ನು ಯಾವುದೇ ಮುಚ್ಚುಮರೆಯಿಲ್ಲದೇ, ಯಾವುದೇ ತಿರುವುಗಳಿಲ್ಲದೇ ಅದನ್ನ ಲವಲವಿಕೆಯಿಂದ ಬಿಚ್ಚಿಡುತ್ತಾ ಹೋದರೆ ಒಳ್ಳೆಯ ಬರಹಗಾರರಾಗಬಹುದು’ ಎಂದು ಹೇಳಿದರು.

ವಿಮರ್ಶಕ ರಾಜೇಂದ್ರ ಚೆನ್ನಿ ಮಾತನಾಡಿ, ‘ಸಾಂಸ್ಕೃತಿಕವಾಗಿ ಮುಖ್ಯವಾಗಿರುವ ಸಾಹಿತಿ ಬಿ.ಎಚ್.ಶ್ರೀಧರರು. ಅವರಂತಹ ಅನೇಕ ಸಾಹಿತಿಗಳು ಆಧುನಿಕ ಶಿಕ್ಷಣದ ನಡುವೆಯೂ ಕನ್ನಡದ ಸಮುದಾಯ ಕಟ್ಟಿದವರು’ ಎಂದರು. ಬರಹಗಾರ ಡಾ.ಎಂ.ಜಿ.ಹೆಗಡೆ ಅಬ್ದುಲ್ ರಶೀದ್ ಅವರ ಕೃತಿ ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT