ನಾಳೆಯಿಂದ ಭದ್ರಾ ನಾಲೆಗೆ ನೀರು

7
ನಿರಂತರ 100 ದಿನ ಹರಿಸಲು ನೀರಾವರಿ ಸಲಹಾ ಸಮಿತಿ ಸಭೆ ನಿರ್ಧಾರ

ನಾಳೆಯಿಂದ ಭದ್ರಾ ನಾಲೆಗೆ ನೀರು

Published:
Updated:
ಭದ್ರಾ ಜಲಾಶಯ

ಶಿವಮೊಗ್ಗ: ಭದ್ರಾ ಬಲ ಹಾಗೂ ಎಡ ನಾಲೆಗಳಿಗೆ ಜುಲೈ 12ರಿಂದ ನಿರಂತರವಾಗಿ 100 ದಿನ ನೀರು ಹರಿಸಲು ಬೆಂಗಳೂರಿನ ವಿಕಾಸಸೌಧದಲ್ಲಿ ಮಂಗಳವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಲ ಹಾಗೂ ಕೆಲವು ಸದಸ್ಯರು 120 ದಿನ ಹರಿಸಲು ಮಾಡಿದ ಮನವಿ ತಿರಸ್ಕರಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯ ಸಮಿತಿ, ಅಂತಿಮವಾಗಿ ಎರಡೂ ನಾಲೆಗಳಿಗೆ 100 ದಿನ ನೀರು ಹರಿಸಲು ಸಮ್ಮತಿ ಸೂಚಿಸಿತು.

71.53 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 39.086 ಟಿಎಂಸಿ ಅಡಿ ನೀರಿದೆ. ಡೆಡ್‌ ಸ್ಟೋರೇಜ್ 13.832 ಟಿಎಂಸಿ ಹೊರತುಪಡಿಸಿದರೆ ಬಳಕೆಗೆ ಉಳಿಯುವ ನೀರು 25.254 ಟಿಎಂಸಿ ಅಡಿ. ಅದರಲ್ಲಿ 7 ಟಿಎಂಸಿ ಅಡಿ ಕುಡಿಯುವ ನೀರಿಬ ಯೋಜನೆಗಳಿಗೆ ಮೀಸಲು. ಬಲ ನಾಲೆಗೆ 2,650 ಕ್ಯುಸೆಕ್‌, ಎಡ ನಾಲೆಗೆ 300 ಕ್ಯುಸೆಕ್‌ ನೀರು ಹರಿಸಲಾಗುತ್ತದೆ. 

ಬಲ ನಾಲೆಯ ಅಚ್ಚುಕಟ್ಟಿನ ಕೊನೆಯ ಭಾಗದ ರೈತರಿಗೆ ಈಗ ಭತ್ತದ ಸಸಿ ಮಾಡಲು ನೀರಿನ ಅಗತ್ಯವಿದೆ. ನಾಟಿ ಕಾರ್ಯ ಮುಗಿದ ನಂತರ ನಾಲೆಗಳಿಗೆ ಹರಿಸುವ ನೀರಿನ ಪ್ರಮಾಣ ಕಡಿಮೆ ಮಾಡಬೇಕು. 1,900 ಕ್ಯುಸೆಕ್‌ನಿಂದ 2000 ಕ್ಯುಸೆಕ್‌ ಹರಿಸಿದರೆ ಸಾಕು. ಹೀಗೆ 120 ದಿನ ನೀರು ಹರಿಸಿದರೆ ಕೊನೆಯ ಭಾಗದ ರೈತರು ಭತ್ತದ ಬೆಳೆ ಪಡೆಯಬಹುದು ಎಂದು ಸಲಹಾ ಸಮಿತಿ ಸದಸ್ಯ ತೇಜಸ್ವಿ ವಿ ಪಟೇಲ್, ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಲದ ಅಧ್ಯಕ್ಷ ದ್ಯಾಮಪ್ಪ ರೆಡ್ಡಿ ಸಲಹೆಗೆ ಸಭೆ ಮನ್ನಣೆ ನೀಡಲಿಲ್ಲ.

ಉತ್ತಮ ಮಳೆಯಾಗುತ್ತಿರುವ ಕಾರಣ ಸ್ವಲ್ಪ ವಿಳಂಬವಾಗಿ ನೀರು ಹರಿಸಿದರೆ ಬೇಸಿಗೆ ಬೆಳೆಗೂ ಅನುಕೂಲವಾಗುತ್ತದೆ ಎಂದು ಭದ್ರಾವತಿ ಶಾಸಕ ಎಂ.ಜೆ. ಅಪ್ಪಾಜಿ ಸಲಹೆ ನೀಡಿದರು. ಅವರ ಸಲಹೆಗೂ ಸಹಮತ ಸಿಗಲಿಲ್ಲ. ಅಚ್ಚುಕಟ್ಟು ಭಾಗದ ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್‌.ಎ. ರವೀಂದ್ರನಾಥ್, ಕರುಣಾಕರ ರೆಡ್ಡಿ,  ಎಂ.ಪಿ. ರೇಣುಕಾಚಾರ್ಯ, ರಾಮಪ್ಪ, ಪ್ರೊ.ಲಿಂಗಪ್ಪ, ಮಾಡಾಳ್‌ ವಿರೂಪಾಕ್ಷಪ್ಪ, ಎಸ್‌.ವಿ. ರಾಮಚಂದ್ರ, ಡಿ.ಎಸ್. ಸುರೇಶ್ ಭಾಗವಹಿಸಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !