ಮಳೆಗೆ ಕುಸಿದಿದ್ದ ಸೇತುವೆಯಿಂದ ಬಿದ್ದು ಬೈಕ್ ಸವಾರರು ಸಾವು

ಕೊಣನೂರು: ರಾಮನಾಥಪುರ ಹೋಬಳಿಯ ಬಸವನಹಳ್ಳಿಯ ಸಮೀಪ, ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಕುಸಿದಿದ್ದ ಸೇತುವೆಯಿಂದ ಬೈಕ್ ಕೆಳಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲ್ಲೂಕಿನ ಸಾಲಿಗ್ರಾಮದ ನವಂಜಿಬಾರೆಯ ರಂಗಸ್ವಾಮಿ (25) ಮತ್ತು ಅಂಬೇಡ್ಕರ್ ನಗರದ ನವೀನ್ ಕುಮಾರ್ (24) ಮೃತಪಟ್ಟವರು. ಗುರುವಾರ ಪಿತೃಪಕ್ಷಕ್ಕೆಂದು ಸ್ನೇಹಿತನ ಮನೆಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ.
ಕಳೆದು ತಿಂಗಳು ಸುರಿದ ಭಾರಿ ಮಳೆಗೆ ಬಸವನಹಳ್ಳಿ- ಕೇರಳಾಪುರ ನಡುವಿನ ಸೇತುವೆಯು ಕುಸಿದಿತ್ತು. ಆದ್ದರಿಂದ ಪಕ್ಕದಲ್ಲೇ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೆ, ಇದರ ಮಾಹಿತಿಯಿಲ್ಲದೇ ಸೇತುವೆ ಮೇಲೆ ಬಂದು ಆಳವಾದ ಕಂದಕಕ್ಕೆ ಬಿದ್ದು ಪ್ರಾಣಕಳೆದುಕೊಂಡಿದ್ದಾರೆ.
ಸಂಬಂಧಿಕರ ಆಕ್ರೋಶ: ಸೇತುವೆ ದುರಸ್ತಿ ಮಾಡಿದ್ದರೆ, ಅಥವಾ ಅಡ್ಡಲಾಗಿ ಮಣ್ಣನ್ನು ಸುರಿದಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅಕ್ರೋಶ ವ್ಯಕ್ತಪಡಿಸಿದರು. ಶವವನ್ನು ತೆಗೆಯಲು ಬಿಡುವುದಿಲ್ಲ ಎಂದು ಪ್ರತಿರೋಧವೊಡ್ಡಿದರು. ನಂತರ ಪೊಲೀಸರು ಮನವೊಲಿಸಿ ಕೊಣನೂರಿನ ಆಸ್ಪತ್ರೆಗೆ ಸಾಗಿಸಿದರು.
ಶುಕ್ರವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎ.ಟಿ.ರಾಮಸ್ವಾಮಿ ಸೇತುವೆ ಬಳಿ ಅಡ್ಡಲಾಗಿ ಮಣ್ಣನ್ನು ಸುರಿಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಗೆ ಬಳಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ, ಆಕಸ್ಮಿಕವಾಗಿ ನಡೆದ ದುರ್ಘಟನೆಯಿಂದ ಅತೀವ ನೋವಾಗಿದೆ. ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಕೊಣನೂರು ಪೊಲೀಸ್ ಪ್ರಕರಣ ದಾಖಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.