ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಕಿಡಿ ಕಾರಿದ ಯಡಿಯೂರಪ್ಪ

7
‘ಎಲ್ಲ ಇಲಾಖೆಗಳಲ್ಲೂ ರೇವಣ್ಣ ಹಸ್ತಕ್ಷೇಪ’

ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಕಿಡಿ ಕಾರಿದ ಯಡಿಯೂರಪ್ಪ

Published:
Updated:
Deccan Herald

ಬೆಂಗಳೂರು: 'ಎಲ್ಲ ಇಲಾಖೆಗಳಲ್ಲೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದಾಗಿ ಮೈತ್ರಿ ಸರ್ಕಾರ ಗೊಂದಲದ ಗೂಡಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷದ ನಗರ ಜಿಲ್ಲಾ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ‘ರಾಜ್ಯದಲ್ಲಿ ಆರು ತಿಂಗಳಿಂದ ಅಭಿವೃದ್ಧಿ ಸ್ಥಗಿತವಾಗಿದೆ. ಮೈತ್ರಿ ಸರ್ಕಾರ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಹಾಗೂ ವರ್ಗಾವಣೆ ದಂಧೆ ನಡೆಸುತ್ತಿದೆ’ ಎಂದು ಆರೋಪಿಸಿದರು.

‘ಬಹುಸಂಖ್ಯಾತ ಹಿಂದುಗಳಿಗೆ ಅವಮಾನ ಮಾಡುವ ಘಟನೆಗಳು ನಡೆಯುತ್ತಿವೆ. ಧಾರ್ಮಿಕ ಸಂಸ್ಥೆಗಳ ಶಿಕ್ಷಣ ಸಂಸ್ಥೆಗಳ ಅಧಿಕಾರವನ್ನೂ ಕಿತ್ತುಕೊಳ್ಳಲಾಗಿದೆ. ರಾಜ್ಯದಲ್ಲಿ ನಮ್ಮನ್ನು 135 ಕ್ಷೇತ್ರಗಳಲ್ಲಿ ಜನರು ಗೆಲ್ಲಿಸಲು ಸಿದ್ಧ ಇದ್ದರು. ಬೆಂಗಳೂರಿನಲ್ಲಿ 16ರಿಂದ 18 ಸ್ಥಾನ ಗೆಲ್ಲುವ ಸುವರ್ಣಾವಕಾಶ ಇತ್ತು. ನಮ್ಮ ತಪ್ಪಿನಿಂದ ಕಡಿಮೆ ಸ್ಥಾನಗಳು ಬಂದವು. ಅಭಿವೃದ್ಧಿ ಅವಕಾಶದಿಂದ ಜನರು ವಂಚಿತರಾದರು. ಅವರು ಈಗ ಪಶ್ಚಾತಾಪ ಪಡುತ್ತಿದ್ದಾರೆ’ ಎಂದರು.

‘ಬಿಜೆಪಿ ಯಾವತ್ತೂ ಅವಕಾಶವಾದಿ ರಾಜಕಾರಣ ಮಾಡಿಲ್ಲ. ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವ ಇದೆ. ಆದರೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿ ಹಿಂಡಿ ಬುದ್ಧಿ ಹೇಳದೆ ನನ್ನ ಬಗ್ಗೆ ಮಾತನಾಡಿದರು. ಅದಕ್ಕೆ ಅವರಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದೇನೆ. ಅದಕ್ಕೆ ಇಬ್ಬರೂ ಉತ್ತರ ನೀಡಿಲ್ಲ’ ಎಂದರು.

ಶಾಸಕ ಆರ್‌. ಅಶೋಕ, ‘ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬ ಬಗ್ಗೆ ಕುಮಾರಸ್ವಾಮಿಗೇ ಡಬಲ್‌ ಗ್ಯಾರಂಟಿ ಇಲ್ಲ. ಅವರು ಮುಖ್ಯಮಂತ್ರಿಯಾಗಿ 70 ದಿನಗಳು ಕಳೆದವು. ಮಗನ ಸಿನಿಮಾ ಟೀಸರ್‌ ಬಿಡುಗಡೆಗೆ ರಾಮನಗರಕ್ಕೆ ಹೋಗಿದ್ದಾರೆ ಅಷ್ಟೇ. ಬೆಂಗಳೂರು–ರಾಮನಗರಕ್ಕೆ ಸೀಮಿತರಾಗಿದ್ದಾರೆ’ ಎಂದು ಕಿಡಿಕಾರಿದರು.

‘ಯಾವುದೇ ತಯಾರಿ ನಡೆಸದೆ ಬೆಂಗಳೂರಿನಲ್ಲಿ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯನ್ನು ಪ್ರಕಟಿಸಲಾಗಿದೆ. ಈಗ ಯೋಜನೆಯನ್ನು ಕೈಬಿಡಲು ಮುಂದಾಗಿದ್ದಾರೆ. ಎಲ್ಲ ಯೋಜನೆಗಳ ಸ್ಥಿತಿಯೂ ಇದೇ ರೀತಿ ಆಗಲಿದೆ’ ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ‘ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಡೆಯಿಂದಲೂ ಅಪರಾಧವಾಯಿತು. ಸಣ್ಣಪುಟ್ಟ ತಪ್ಪುಗಳು ನಡೆದವು. ಹಾಗಾಗಿ ಗುರಿ ತಲುಪಲು ಸಾಧ್ಯವಾಗಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 4

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !