ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರಲ್ಲಿ 12 ಮಂದಿಗೆ ಸಚಿವ ಸ್ಥಾನ: ಎರಡು ಹಂತಗಳಲ್ಲಿ ಸಂಪುಟ ವಿಸ್ತರಣೆ?

Last Updated 30 ಜುಲೈ 2019, 19:06 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಎರಡು ಅಥವಾ ಮೂರು ಹಂತಗಳಲ್ಲಿ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ.

ಮೊದಲ ಹಂತದಲ್ಲಿ ಪ್ರಮುಖ 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜೀನಾಮೆ ನೀಡಿರುವ ಅತೃಪ್ತರಿಗೆ 12 ಸಚಿವ ಸ್ಥಾನ ಕಾಯ್ದಿರಿಸಿ, ಇನ್ನೊಂದು ಹಂತದಲ್ಲಿ ಉಳಿದವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಅತೃಪ್ತರಲ್ಲಿ ಕನಿಷ್ಠ 12 ಜನರಿಗೆ ಸಚಿವ ಸ್ಥಾನ ನೀಡಲು ಉದ್ದೇಶಿಸಿದ್ದು, ಕೋರ್ಟ್‌ ತೀರ್ಮಾನ ಬರುವವರೆಗೆ ಆ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ ಮೂಲಗಳು ಹೇಳಿವೆ.

ಈ ಮಧ್ಯೆ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸಂಭಾವ್ಯ ಸಚಿವರ ಪಟ್ಟಿಯನ್ನು ತಕ್ಷಣವೇ ಸಲ್ಲಿಸುವಂತೆ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರರಾವ್‌ ಅವರಿಗೆ ಸೋಮವಾರ ರಾತ್ರಿ ಸೂಚಿಸಿದರು. ಅತೃಪ್ತರ ಶಾಸಕರ ಹೆಸರುಗಳು ಸೇರಿ ಒಟ್ಟು 50ಕ್ಕೂ ಹೆಚ್ಚು ಶಾಸಕರ ಹೆಸರುಗಳನ್ನು ಹೊಂದಿರುವ ಪಟ್ಟಿಯನ್ನು ಕಳುಹಿಸಲಾಗಿದೆ.

ಸಚಿವರ ಆಯ್ಕೆ ಸ್ವಾತಂತ್ರ್ಯ ಸಂಪೂರ್ಣ ವರಿಷ್ಠರ ಕೈಯಲ್ಲೇ ಇರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದಿಬ್ಬರು ಶಾಸಕರ ಹೆಸರುಗಳನ್ನು ಹೇಳಿದರೆ ಮನ್ನಣೆ ನೀಡಬಹುದೇ ಹೊರತು ಅದಕ್ಕಿಂತ ಹೆಚ್ಚಿನ ಶಾಸಕರಿಗೆ ಆದ್ಯತೆ ನೀಡುವ ಸಾಧ್ಯತೆ ಇಲ್ಲ. ಹೀಗಾಗಿ ಯಡಿಯೂರಪ್ಪ ಸೇರಿದಂತೆ ಯಾವುದೇ ಮುಖಂಡರು ಯಾವ ಶಾಸಕರಿಗೂ ಭರವಸೆ ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ಮೂಲಗಳು ಹೇಳಿವೆ.

‘ಕೆಲವು ಶಾಸಕರು ಪ್ರಭಾವಿಗಳಿಂದ ಹೇಳಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ವರಿಷ್ಠರು ಸೊಪ್ಪು ಹಾಕುವುದಿಲ್ಲ. ನಮ್ಮ ಭವಿಷ್ಯ ಏನೆಂಬುದೇ ನಮಗೆ ಗೊತ್ತಿಲ್ಲ. ನಿಮಗೆ ನಾವು ಹೇಗೆ ಭರವಸೆ ನೀಡಲು ಸಾಧ್ಯ. ಮೊದಲ ಬಾರಿ ಆಯ್ಕೆ ಆದವರು ಸಚಿವ ಸ್ಥಾನದ ಆಕಾಂಕ್ಷೆ ಬಿಟ್ಟು, ನಿಗಮ–ಮಂಡಳಿಗಳಿಗೆ ಪ್ರಯತ್ನಿಸುವುದು ಸೂಕ್ತ ಎಂಬ ಸಲಹೆ ನೀಡಬೇಕಾಗಿದೆ’ ಎಂದು ಹೆಸರು ಹೇಳಲು ಬಯಸದ ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಪರಿಷತ್ತಿನಲ್ಲಿ ಪೈಪೋಟಿ
ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಸಂಪುಟದಲ್ಲಿ ವಿಧಾನ ಪರಿಷತ್‌ನ ಸದಸ್ಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವುದಿಲ್ಲ ಎಂದು ಮೂಲಗಳು ಹೇಳಿವೆ.

ಈವರೆಗೆ ವಿರೋಧ ಪಕ್ಷದ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ, ಹಿರಿಯ ನಾಯಕ ಆಯನೂರು ಮಂಜುನಾಥ್‌ ಸಹಜವಾಗಿ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೆಸರೂ ಕೇಳಿ ಬಂದಿದೆ. ಆದರೆ, ಒಬ್ಬರು ತಪ್ಪಿದರೆ, ಇಬ್ಬರಿಗೆ ಮಾತ್ರ ಸಚಿವರಾಗುವ ಭಾಗ್ಯ ಸಿಗಬಹುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT