ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಣ ಕೊಡಿಸುವುದು ನನ್ನ ಜವಾಬ್ದಾರಿ’

ಸಂತ್ರಸ್ತರಿಗೆ ಯಡಿಯೂರಪ್ಪ ಭರವಸೆ
Last Updated 16 ಜೂನ್ 2019, 6:25 IST
ಅಕ್ಷರ ಗಾತ್ರ

ಬೆಂಗಳೂರು: ‘ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರಿಗೆ ಅದನ್ನು ವಾಪಸ್‌ ಕೊಡಿಸುವುದು ನನ್ನ ಜಬಾಬ್ದಾರಿ. ಪ್ರಮುಖ ಆರೋಪಿ ಮನ್ಸೂರ್ ಎಲ್ಲಿದ್ದರೂ ಕೇಂದ್ರ ಸರ್ಕಾರ ಹುಡುಕಿ ಕೊಡಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಜಿಂದಾಲ್‌ ಕಂಪನಿಗೆ ಜಮೀನು ನೀಡಿಕೆ ಮತ್ತು ಬರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಪಕ್ಷದ ವತಿಯಿಂದ ಇಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶನಿವಾರ ಬಂದ ಐಎಂಎ ಸಂತ್ರಸ್ತರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಗೆ ಕ್ರಮ ಕೈಗೊಳ್ಳಲಿದ್ದಾರೆ. ಸಿಬಿಐ ತನಿಖೆಯಿಂದಷ್ಟೇ ಅಮಾಯಕರಿಗೆ ನ್ಯಾಯ ಸಿಗಲು ಸಾಧ್ಯ’ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

‘ಕೇಂದ್ರ ಸರ್ಕಾರ ಕಳೆದ ಫೆಬ್ರುವರಿಯಲ್ಲೇ ಇಂತಹ ವಂಚಕ ಕಂಪನಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈಗ ಅಮಾಯಕರಿಗೆ ಮೋಸ ಆಗಿರುವುದಕ್ಕೆ ರಾಜ್ಯವೇ ನೇರ ಹೊಣೆಯಾಗುತ್ತದೆ’ ಎಂದು ಹೇಳಿದರು.

ವಿಜಯಪುರದಲ್ಲೂ ₹18 ಲಕ್ಷ ಹೂಡಿಕೆ

(ವಿಜಯಪುರ ವರದಿ): ಐಎಂಎ (ಐ ಮಾನಿಟರಿ ಅಡ್ವೈಸರಿ) ಜ್ಯವೆಲ್ಲರಿ ಕಂಪನಿಯಲ್ಲಿ ವಿಜಯಪುರದ ನಾಲ್ಕು ಜನರು ₹18 ಲಕ್ಷ ಹೂಡಿಕೆ ಮಾಡಿರುವುದಾಗಿ ಶನಿವಾರ ಇಲ್ಲಿಯ ಗಾಂಧಿಚೌಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ‘ಮೆಹಬೂಬ್ ಮುರ್ತುಜಸಾಬ್ಕುಂ ಟೋಜಿ,
ಇವರ ಪತ್ನಿ ಕೌಸರ್‌ಬಾನು ಅವರು ತಲಾ ₹2 ಲಕ್ಷ, ಸೈಯ್ಯದ್ ಮುಕ್ತಾರ್ಜಾ ಗೀರದಾರ್, ಇವರ ಪತ್ನಿ ಸಯೀದಾ ಸಲ್ಮಾ ಅವರು ಕ್ರಮವಾಗಿ ₹8 ಲಕ್ಷ ಮತ್ತು ₹6 ಲಕ್ಷಹೂಡಿಕೆ ಮಾಡಿ ಮೋಸ ಹೋಗಿರುವುದಾಗಿ ತಿಳಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ತಿಳಿಸಿದ್ದಾರೆ.

ಮನ್ಸೂರ್ ಸೆರೆಗೆ ಬಲೆ: ಗೃಹ ಸಚಿವ ಎಂ.ಬಿ. ಪಾಟೀಲ

ಬೆಂಗಳೂರು: ‘ಐಎಂಎ ಮಾಲೀಕ ಮನ್ಸೂರ್ ಖಾನ್ ಬಂಧನಕ್ಕೆ ಬಲೆ ಹೆಣೆದಿದ್ದು, ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಐಎಂಎಗೆ ಸೇರಿದ ಹಾಗೂ ನಿರ್ದೇಶಕರ ಹೆಸರಿನಲ್ಲಿರುವ ಆಸ್ತಿಯನ್ನು ಜಪ್ತಿ ಮಾಡುತ್ತಿದ್ದೇವೆ. ಎಸ್ಐಟಿ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಹಣಕಾಸು ವಿಚಾರಗಳು ಪೊಲೀಸ್ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಇಂತಹ ವಂಚನೆಗಳು ನಡೆದಾಗ ಮಾತ್ರ ಪೊಲೀಸರು ಕ್ರಮ ಜರುಗಿಸಬಹುದು. ತಮಿಳುನಾಡಿನಲ್ಲಿ ಹಣಕಾಸು ವಂಚನೆ ಸಂದರ್ಭದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಪೊಲೀಸ್ ಇಲಾಖೆಗೆ ಇದೆ. ಅದೇ ಮಾದರಿಯ ಕಾನೂನನ್ನು ಜಾರಿಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಮುಖ್ಯ ಕಾರ್ಯದರ್ಶಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT