ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವಣ್ಣ, ಶಿವಕುಮಾರ್ ಕಮಿಷನ್ ಏಜೆಂಟ್‌ಗಳು; ಯಡಿಯೂರಪ್ಪ ಆರೋಪ

Last Updated 19 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: 'ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕಮಿಷನ್‌ ಏಜೆಂಟ್‌ಗಳು' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು.

ಅರಮನೆ ಮೈದಾನದಲ್ಲಿ ಬುಧವಾರ ನಡೆದ ಬಿಜೆಪಿ ರಾಜ್ಯ ಘಟಕದ ವಿಶೇಷ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಕಾಮಗಾರಿಗಳಿಗೂ ಈಗ ಶೇ 8ರಿಂದ 10ರಷ್ಟು ಕಮಿಷನ್‌ ನೀಡಬೇಕು ಎಂದು ಈ ಸಚಿವರು ಒತ್ತಡ ಹೇರುತ್ತಿದ್ದಾರೆ. ಇಲ್ಲದಿದ್ದರೆ ಹಣ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದೊಂದು ಕಮಿಷನ್‌ ಸರ್ಕಾರ’ ಎಂದು ಜರಿದರು.

‘ಇದೊಂದು ತುಘಲಕ್‌ ಸರ್ಕಾರ. ಜನಹಿತವನ್ನು ಸಂಪೂರ್ಣ ಮರೆತಿದೆ. ನಾಲ್ಕು ತಿಂಗಳಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ. 15–20 ದಿನಗಳು ಬಿಟ್ಟು ಬಿಜೆಪಿ ಮುಖಂಡರು ರಾಜ್ಯ ಪ್ರವಾಸ ಮಾಡಿ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲಿದ್ದಾರೆ’ ಎಂದರು.

‘ಎಚ್.ಡಿ.ರೇವಣ್ಣ ಭೂಕಬಳಿಕೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಎ.ಮಂಜು ಆರೋಪ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

‘ದೇವೇಗೌಡರ ಕುಟುಂಬದ ಭೂಕಬಳಿಕೆ ವಿರುದ್ಧ ಬಿಜೆಪಿ ಈ ಹಿಂದೆ ಪುಸ್ತಕವೊಂದನ್ನು ಪ್ರಕಟಿಸಿತ್ತು. ಗೌಡರ ಕುಟುಂಬ ಅನೇಕ ಹಗರಣಗಳಲ್ಲಿ ಭಾಗಿಯಾಗಿದೆ. ಅದರ ಬಗ್ಗೆಯೂ ಪಕ್ಷ ಬೆಳಕು ಚೆಲ್ಲಲಿದೆ’ ಎಂದರು.

‘ರೈತರ ಸಾಲ ಮನ್ನಾ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ರೈತರ ಆತ್ಮಹತ್ಯೆ ನಿಂತಿಲ್ಲ. ಸಹಕಾರ ಸಂಘಗಳಿಗೆ ಸಾಲ ಮನ್ನಾದ ಕಂತಿನ ಹಣ ತಲುಪಿಲ್ಲ. ರೈತರಿಗೆ ನೋಟಿಸ್‌ ನೀಡುವುದನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು ನಿಲ್ಲಿಸಿಲ್ಲ. ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದರೆ ಕುಮಾರಸ್ವಾಮಿ ಉಡಾಫೆ ಉತ್ತರ ನೀಡುತ್ತಾರೆ’ ಎಂದು ಅವರು ಕಿಡಿಕಾರಿದರು.

ಮುಸ್ಲಿಮರ ಬಗ್ಗೆ ಹಗುರ ಮಾತು ಸಲ್ಲ

‘ನಾವು ಮುಸ್ಲಿಮರನ್ನು ಒಪ್ಪಿಕೊಳ್ಳದಿದ್ದರೆ ಅದು ಹಿಂದುತ್ವವೇ ಅಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ನಾವು ಹಿಂದೂ, ಮುಸ್ಲಿಂ, ಕ್ರೈಸ್ತರನ್ನು ಸಮಾನವಾಗಿ ನೋಡಬೇಕು. ಅಲ್ಪಸಂಖ್ಯಾತರ ಬಗ್ಗೆ ಹಗುರವಾಗಿ ಮಾತನಾಡಬಾರದು’ ಎಂದು ಯಡಿಯೂರಪ್ಪ ಕಾರ್ಯಕರ್ತರಿಗೆ ಸೂಚಿಸಿದರು.

‘ಬಿಜೆಪಿ ಶಾಸಕರಿಗೆ ಸಚಿವ ಸ್ಥಾನದ ಆಮಿಷ’

‘ಸರ್ಕಾರ ಉಳಿಸಿಕೊಳ್ಳಲು ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಶಾಸಕರಿಗೆ ಸಚಿವ ಸ್ಥಾನದ ಆಮಿಷ ಒಡ್ಡುತ್ತಿದ್ದಾರೆ’ ಎಂದು ಯಡಿಯೂರಪ್ಪ ಆರೋಪಿಸಿದರು. ‘ಮುಖ್ಯಮಂತ್ರಿ ಆಮಿಷ ಒಡ್ಡಿದ್ದನ್ನು ಶಾಸಕ ಸುಭಾಷ್‌ ಗುತ್ತೇದಾರ್‌ ಬಹಿರಂಗಪಡಿಸಿದ್ದಾರೆ. ಅನೇಕ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ನಮ್ಮ ಶಾಸಕರ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದರು.

*ಯುವಮೋರ್ಚಾ, ಮಹಿಳಾ ಮೋರ್ಚಾ ಹಾಗೂ ಹಿಂದುಳಿದ ಮೋರ್ಚಾಗಳು ಇನ್ನಷ್ಟು ಸಕ್ರಿಯವಾಗಿ ಮುಖ್ಯ ವಾಹಿನಿಯಲ್ಲಿ ಕೆಲಸ ಮಾಡಬೇಕು.

–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT