ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧಿಗಳ ವೈಫಲ್ಯವೇ ನನ್ನ ಗೆಲುವು: ಬಚ್ಚೇಗೌಡ

‘ಕಮಲ’ ಖಾತೆ ತೆರೆಯುವ ತವಕದಲ್ಲಿ ಬಿಜೆಪಿ ಅಭ್ಯರ್ಥಿ
Last Updated 2 ಮೇ 2019, 16:41 IST
ಅಕ್ಷರ ಗಾತ್ರ

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ರೋಚಕ ಪೈಪೋಟಿ ನಡೆಸಿ ಪರಾಭವಗೊಂಡಿದ್ದ ಬಿ.ಎನ್.ಬಚ್ಚೇಗೌಡರು ಈ ಬಾರಿಯೂ ಬಿಜೆಪಿಯಿಂದಲೇ ಹುರಿಯಾಳು ಆಗಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ, ಸಂಸದ ವೀರಪ್ಪ ಮೊಯಿಲಿ ಅವರ ವಿರುದ್ಧ ಎರಡನೇ ಸುತ್ತಿನಲ್ಲಿ ತೊಡೆ ತಟ್ಟಿದ್ದಾರೆ.

‘ಪ್ರಧಾನಿ ಮೋದಿ ಅವರ ಜನಪ್ರಿಯತೆಯ ಅಲೆ, ಮೊಯಿಲಿ ಅವರ ವೈಫಲ್ಯಗಳು, ಕಳೆದ ಸೋಲಿನ ಅನುಕಂಪ ಈ ಬಾರಿ ನನ್ನನ್ನು ಗೆಲುವಿನ ದಡ ಸೇರಿಸಲಿದೆ’ ಎನ್ನುವುದು ಅವರ ಆಶಯ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ...

* ಬಚ್ಚೇಗೌಡರು ಸರ್ವಾಧಿಕಾರಿ, ಅವರನ್ನು ಗೆಲ್ಲಿಸಿದರೆ ದುರಾಡಳಿತ ನೋಡಬೇಕಾಗುತ್ತದೆ ಎನ್ನುವುದು ನಿಮ್ಮ ಪ್ರತಿಸ್ಪರ್ಧಿಗಳ ಆರೋಪ.
ನಾನು 40 ವರ್ಷಗಳಿಂದ ಸಾರ್ವಜನಿಕ ಸೇವೆ ಮಾಡಿಕೊಂಡು ಬಂದಿರುವೆ. ನಾನೇನಾದರೂ ದಬ್ಬಾಳಿಕೆ, ದೌರ್ಜನ್ಯ, ದುರಾಡಳಿತ ನಡೆಸುತ್ತ ಬಂದಿದ್ದರೆ ಐದು ಬಾರಿ ಶಾಸಕ, ಎರಡು ಬಾರಿ ಸಚಿವನಾಗಿ ಆಯ್ಕೆ ಆಗಬಹುದೆ? ವಿರೋಧಿಗಳ ಆರೋಪ ನಿಜವಾಗಿದ್ದರೆ ನಾನು ಎರಡು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಆಗುತ್ತಿರಲಿಲ್ಲ. ಬದಲು ಕಂಬಿಗಳ ಹಿಂದೆ ಇರಬೇಕಿತ್ತು. ಜನರಿಗೆ ವಾಸ್ತವ ಗೊತ್ತು. ಇಂತಹ ಅಪಪ್ರಚಾರಕ್ಕೆ ಜನ ಕಿವಿ ಗೊಡುವುದಿಲ್ಲ.

* ನಿಮಗೇ ಏಕೆ ಮತ ನೀಡಬೇಕು?
ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾರದರ್ಶಕವಾದ ಪ್ರಗತಿಪರ ಆಡಳಿತ ನೀಡಿದ್ದಾರೆ. ಉಜ್ವಲ್, ಆಯುಷ್ಮಾನ್ ಭಾರತ್, ಸ್ಕಿಲ್ ಇಂಡಿಯಾ, ರೈತರಿಗೆ ಆರ್ಥಿಕ ನೆರವು.. ಹೀಗೆ ಅನೇಕ ಜನಪರ ಯೋಜನೆಗಳನ್ನು ಬಿಜೆಪಿ ನೀಡಿದೆ. ಅವು ಮುಂದುವರಿಯಬೇಕು. ಜತೆಗೆ ನಾನು ಈ ಹಿಂದೆ ಪಶುಸಂಗೋಪನಾ ಸಚಿವನಾಗಿದ್ದಾಗ ವಿದೇಶಗಳಿಂದ ಹೈಬ್ರಿಡ್‌ ಹಸುಗಳನ್ನು ತರಿಸಿ ಈ ಭಾಗದಲ್ಲಿ ಹಾಲಿನ ಉತ್ಪಾದನೆ ಹೆಚ್ಚಳಕ್ಕೆ ಶ್ರಮಿಸಿರುವೆ.

ರೇಷ್ಮೆ ಸಚಿವನಾಗಿದ್ದ ವೇಳೆ ಚೀನಾ ರೇಷ್ಮೆ ಆಮದಿನಿಂದ ಸ್ಥಳೀಯ ರೈತರು ಕಂಗಾಲಾಗಿದ್ದರು. ಆಗ ಸಹಾಯಧನ ನೀಡುವ ಜತೆಗೆ ಪ್ರಧಾನಿ ಅವರನ್ನು ಭೇಟಿ ಮಾಡಿ ಆಮದು ಸುಂಕ ಹೆಚ್ಚಳ ಮಾಡಿಸಿ, ಸ್ಥಳೀಯ ರೇಷ್ಮೆ ಬೆಳೆಗಾರರ ಹಿತ ಕಾಯುವ ಕೆಲಸ ಮಾಡಿರುವೆ. ಹೊಸಕೋಟೆಯಲ್ಲಿದ್ದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿರುವೆ. ನಾನು ಮಾಡಿರುವಷ್ಟು ಉದ್ಯೋಗ ಸೃಷ್ಟಿ ಬೇರೆ ಯಾವ ಕ್ಷೇತ್ರದಲ್ಲೂ ಆಗಿಲ್ಲ. ಹೀಗಾಗಿ ಮತದಾರ ನನ್ನ ಕೈ ಹಿಡಿಯಬೇಕು.

* ಹಿಂದೆಲ್ಲ ದೇವೇಗೌಡರ ಬಗ್ಗೆ ಗುಡುಗುತ್ತಿದ್ದ ಬಚ್ಚೇಗೌಡರು ಈ ಚುನಾವಣೆಯಲ್ಲಿ ದೊಡ್ಡ ಗೌಡರ ಜತೆ ಹೊಂದಾಣಿಕೆ ಮಾಡಿಕೊಂಡು ಅವರ ವಿಚಾರದಲ್ಲಿ ಮೆತ್ತಗಾಗಿದ್ದಾರೆ ಎನ್ನುತ್ತಿದ್ದಾರೆ. ನಿಜವೆ?
ಅದೆಲ್ಲ ಸುಳ್ಳು. ಈ ಚುನಾವಣೆ ನಡೆಯುತ್ತಿರುವುದು ನನ್ನ ಮತ್ತು ಮೊಯಿಲಿ ಅವರ ನಡುವೆ. ಜೆಡಿಎಸ್‌ನಿಂದ ಈ ಬಾರಿ ಅಭ್ಯರ್ಥಿ ಹಾಕಿಲ್ಲ. ಆದ್ದರಿಂದ ನಾವು ಏನೇ ಆಪಾದನೆ ಮಾಡಿದರೂ ನಮ್ಮ ಎದುರಾಳಿ ಬಗ್ಗೆ ಮಾತನಾಡುತ್ತಿದ್ದೇವೆ ವಿನಾ ಈ ಚುನಾವಣೆಯಲ್ಲಿ ಮೂರನೇ ವ್ಯಕ್ತಿ ಬಗ್ಗೆ ಮಾತನಾಡುವ ಅಗತ್ಯವೇ ಇಲ್ಲ.

* ಕಾಂಗ್ರೆಸ್‌, ಜೆಡಿಎಸ್‌ ಎರಡೂ ಪಕ್ಷಗಳನ್ನು ಒಬ್ಬಂಟಿಯಾಗಿ ಎದುರಿಸಿ ಗೆಲ್ಲುವುದು ಸುಲಭ ಇದೆಯಾ?
ಮತದಾರರು ತುಂಬಾ ಬುದ್ಧಿವಂತರು. ಯಾವ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಮತ ಚಲಾಯಿಸಬೇಕು ಎಂದು ಅವರಿಗೆ ಗೊತ್ತು. ಹೀಗಾಗಿ ರಾಜಕೀಯ ಸಮೀಕರಣ ಅಷ್ಟು ಸುಲಭ ಅಲ್ಲ. ಎಣಿಕೆಗೆ ನಿಲುಕುವುದಿಲ್ಲ.

*ಮೋದಿ ಮಹಾನ್ ಸುಳ್ಳುಗಾರ. ಹಾಗಾಗಿ ಬಿಜೆಪಿಗೆ ಮತ ನೀಡಬೇಡಿ ಎನ್ನುತ್ತಿದ್ದಾರೆ ನಿಮ್ಮ ಎದುರಾಳಿಗಳು.
ಭ್ರಷ್ಟಾಚಾರ, ಕಪ್ಪು ಚುಕ್ಕೆ ಇಲ್ಲದ ಆಡಳಿತವನ್ನು ಮೋದಿ ಅವರು ಕೊಟ್ಟಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಮ್ಮೆ ಬೆಳೆಸಿ, ಎಲ್ಲರೂ ಭಾರತದತ್ತ ನೋಡುವಂತಹ ವಾತಾವರಣ ಸೃಷ್ಟಿಸಿದೆ. ಹಾಗಿರುವಾಗ ಮೋದಿ ಅವರು ಸುಳ್ಳುಗಾರ ಎನ್ನುವುದರಲ್ಲಿ ಅರ್ಥವೇ ಇಲ್ಲ. ನಮ್ಮದು ಚೀನಾಗಿಂತಲೂ ಹೆಚ್ಚಿನ ಜಿಡಿಪಿ ಇದೆ. ಪ್ರಗತಿ ಇಲ್ಲದಿದ್ದರೆ ಜಿಡಿಪಿ ಹೇಗೆ ವೃದ್ಧಿಸುತ್ತದೆ?

* ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಷ್ಟೇ ಬಿಜೆಪಿ ಗೆದ್ದಿದೆ. ನಿಮಗೆ ಕಷ್ಟ ಎನಿಸುವುದಿಲ್ಲವೆ?
ಗೆಲುವು ಯಾವತ್ತೂ ಅಷ್ಟು ಸುಲಭ ಇರುವುದಿಲ್ಲ. ಸುಲಭವಾದುದು ಎಂದರೆ ಚುನಾವಣೆಗೆ ಅರ್ಥವೇ ಇರುವುದಿಲ್ಲ. ಬಿಜೆಪಿಗೆ ಮತ ಹಾಕಬೇಕು ಎನ್ನುವ ಭಾವನೆ ಇವತ್ತು ಪಕ್ಷಾತೀತವಾಗಿದೆ. ಆ ಆಸೆಯನ್ನು ಮತವಾಗಿ ಪರಿವರ್ತಿಸುವ ಕೆಲಸ ನಮ್ಮ ಕಾರ್ಯಕರ್ತರು ಮಾಡುತ್ತಿದ್ದಾರೆ. ಮೋದಿ ಅವರ ಮೇಲಿನ ಅಭಿಮಾನ, ಬಚ್ಚೇಗೌಡರ ಮೇಲಿನ ನಂಬಿಕೆ, ಅನುಕಂಪ. ಈ ಬಾರಿ ಗೆಲುವಿನ ದಡ ಸೇರಿಸುವ ವಿಶ್ವಾಸವಿದೆ.

* ಬಚ್ಚೇಗೌಡರಿಗೆ ಒಕ್ಕಲಿಗರು ಮತ ನೀಡಿದರೆ ಕುಮಾರಸ್ವಾಮಿ ಸರ್ಕಾರಕ್ಕೆ ಧಕ್ಕೆ ಆಗುತ್ತದೆ ಎಂದು ಮೊಯಿಲಿ ಅವರು ಹೇಳುತ್ತಿದ್ದಾರಲ್ಲ?
ಜಿಲ್ಲೆಯಲ್ಲಿ 17 ಲಕ್ಷಕ್ಕೂ ಅಧಿಕ ಮತದಾರರು, ನೂರಾರು ಜಾತಿ, ಉಪಜಾತಿಗಳ ಜನರಿದ್ದಾರೆ. ನಾವು ಯಾವುದೇ ಒಂದು ಜಾತಿ, ಧರ್ಮದ ಮತದಿಂದಲೇ ಗೆಲ್ಲಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ನಮ್ಮ ಧರ್ಮ ಎಂದು ನಾವು ಒಪ್ಪಿಕೊಂಡಿದ್ದೇವೆ. ಅದಕ್ಕೆ ಬದ್ಧರಾಗಿ ನಾವು ಎಲ್ಲರ ಮತಗಳನ್ನು ಪಡೆಯಬೇಕಾಗಿದೆ. ನಾನು ಯಾವುದೇ ಒಂದು ಸಮುದಾಯಕ್ಕೆ ಸೀಮಿತನಾಗಿಲ್ಲ. ಎಲ್ಲರೂ ನನಗೆ ಮತ ಕೊಟ್ಟಿದ್ದಾರೆ. ಇದೊಂದು ಜಾತಿಯ ವಿಷ ಬೀಜ ಬಿತ್ತುವ ಪ್ರಯತ್ನ. ಮೊಯಿಲಿ ಅಂತಹ ಹಿರಿಯ ರಾಜಕಾರಣಿ ಇಂತಹ ಕೆಲಸ ಮಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT