ಶನಿವಾರ, ಜನವರಿ 25, 2020
22 °C
ಹೊಸ್ತೋಟ ಮಂಜುನಾಥ ಭಾಗವತ ಅಭಿಮತ

ಯಕ್ಷಗಾನ ವಿಶ್ವವ್ಯಾಪಿಯಾಗಿ ಬೆಳೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಜನಸಾಮಾನ್ಯರನ್ನು ನೇರವಾಗಿ ತಲುಪುವ ಯಕ್ಷಗಾನಕ್ಕೆ ಶಾಸ್ತ್ರೀಯ ರೂಪ ದೊರೆಯುವ ಜೊತೆಗೆ, ಇದು ಭರತನಾಟ್ಯ, ಸಂಗೀತದಂತೆ ಬೃಹದಾಕಾರವಾಗಿ ಬೆಳೆಯಬೇಕು ಎಂದು ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೆರೆಕೊಪ್ಪದಲ್ಲಿ ಭಾನುವಾರ ಆಯೋಜಿಸಿದ್ದ, ತಮ್ಮದೇ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಕ್ಷಗಾನವನ್ನು ಮನರಂಜನೆ ದೃಷ್ಟಿಯಿಂದ ನೋಡದೇ, ಒಳ್ಳೆಯ ಮನಃಸ್ಥಿತಿಯಿಂದ ಆರಾಧಿಸಬೇಕು. ಜನರಲ್ಲಿ ವಿಶ್ವಾಸ ಹುಟ್ಟಿಸುವ, ಮಾನಸಿಕ ನೆಮ್ಮದಿ ನೀಡುವ ಗುಣಗಳಿರುವ ಯಕ್ಷಗಾನ ವಿಶ್ವವ್ಯಾಪಿ ಆಗಬೇಕು. ಈ ಕಲೆಯನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿಯೇ ಪಠ್ಯಕ್ರಮದಲ್ಲಿ ಅಳವಡಿಸಬೇಕು. ವ್ಯವಸ್ಥಿತ ಬೋಧನಾ ಕ್ರಮದ ಮೂಲಕ ನಾಡಿನ ಮೂಲೆಮೂಲೆಗೆ ತಲುಪಿಸಬೇಕು ಎಂದರು.

ಹೊಸ್ತೋಟ ಮಂಜುನಾಥ ಭಾಗವತರ 50 ವರ್ಷಗಳ ಯಕ್ಷಗಾನ ಶಿಕ್ಷಣದ ಸಾರರೂಪವಾದ ‘ಯಕ್ಷಗಾನ ಶಿಕ್ಷಣ-ಲಕ್ಷಣ’ ಗ್ರಂಥವನ್ನು ಸಾಹಿತಿ ಟಿ.ಎಂ.ಸುಬ್ಬರಾಯ ಬಿಡುಗಡೆಗೊಳಿಸಿದರು. ಸಾಗರೋಲ್ಲಂಘನ ಮಾಡಿರುವ ಯಕ್ಷಗಾನಕ್ಕೆ ರಾಜ್ಯದಲ್ಲಿಯೇ ಅಧಿಕೃತ ಮಾನ್ಯತೆ ಸಿಕ್ಕಿಲ್ಲ. ಇದನ್ನು ರಾಜ್ಯದ ಅಧಿಕೃತ ಕಲೆ ಎಂದು ರಾಜ್ಯ ಸರ್ಕಾರ ಘೋಷಿಸಬೇಕು. ರಾಷ್ಟ್ರೀಯ ವಿಚಾರ ಸಂಕಿರಣ, ಸಮ್ಮೇಳನಗಳಲ್ಲಿ ಯಕ್ಷಗಾನ ಸಾಹಿತಿಗೆ ಅವಕಾಶ ನೀಡಬೇಕು ಎಂದರು.

ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆಯ ಪ್ರಮೋದ ಹೆಗಡೆ ಮಾತನಾಡಿ, ‘ಯಕ್ಷಗಾನ ಪ್ರಪಂಚದಲ್ಲಿ ಎಲ್ಲರೂ ಒಪ್ಪಬಹುದಾದ ವ್ಯಕ್ತಿತ್ವವಿದ್ದರೆ ಅದು ಹೊಸ್ತೋಟ ಮಂಜುನಾಥ ಭಾಗವತರದ್ದಾಗಿದೆ. ಸಂಶೋಧನೆ ಮೂಲಕ ಯಕ್ಷ ಪ್ರಪಂಚವನ್ನೇ ತೆರೆದಿಟ್ಟ ಭಾಗವತರ ಜ್ಞಾನ ರಾಶಿ ಪುಸ್ತಕ ರೂಪದಲ್ಲಿ ದಾಖಲಾಗಿದೆ. ಇದು ಯಕ್ಷಗಾನದ ಉಳಿವಿಗೆ ಪೂರಕವಾಗಲಿದೆ’ ಎಂದರು.

ಸಂಘಟಕ ರಾಘು ಕಟ್ಟನಕೆರೆ ಮಾತನಾಡಿ, ‘ಯಕ್ಷಗಾನವನ್ನು ವ್ಯಾಕರಣದ ರೂಪದಲ್ಲಿ ಕಲಿಯಲು ಬರುವಂತೆ, ಆಕೃತಿಯ ನಿಯಮಗಳು, ರಂಗ ರೇಖೆಗಳು, ಚಲನೆಯನ್ನು ಚಿತ್ರ ಸಹಿತ ವಿವರಿಸಿದ್ದಾರೆ. ಲಯವನ್ನು ಲಯಗಣಿತದ ಮೂಲಕ ಕಲಿಸುವುದು ಹೊಸ್ತೋಟ ಭಾಗವತರ ವಿಶೇಷತೆಯಾಗಿದೆ. ಯಕ್ಷಗಾನದ ರಾಗಗಳನ್ನು ಗುರು ಮುಖೇನ ಕಲಿಯಲು ಅನುಕೂಲವಾಗಲಿದೆ’ ಎಂದರು. ಹಿರಿಯ ಚಂಡೆ ವಾದಕ ಕೃಷ್ಣಯಾಜಿ ಇಡಗುಂಜಿ ಇದ್ದರು. ಸುಬ್ರಾಯ ಕೆರೆಕೊಪ್ಪ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)