ಬುಧವಾರ, ನವೆಂಬರ್ 20, 2019
21 °C
ಗಡಿ ತಾಲ್ಲೂಕು ಜೊಯಿಡಾ

ಗಡಿ ತಾಲ್ಲೂಕು ಜೊಯಿಡಾ: ಪ್ರವಾಸೋದ್ಯಮದ ತವರಿನಲ್ಲಿ ಕನ್ನಡದ ಕಂಪು

Published:
Updated:
Prajavani

ಶಿರಸಿ: ನೆರೆಯ ಗೋವಾ ರಾಜ್ಯದ ಗಾಢ ಪ್ರಭಾವ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಗಡಿ ತಾಲ್ಲೂಕು ಜೊಯಿಡಾ. ಪ್ರವಾಸೋದ್ಯಮದ ತವರಾಗಿರುವ ಇಲ್ಲಿ ಕೊಂಕಣಿಯ ಛಾಯೆ ಮಾಸಲಾಗಿ, ಕನ್ನಡದ ಕಂಪು ಪಸರಿಸಿದೆ.

ಅತ್ಯಂತ ಹಿಂದುಳಿದ ತಾಲ್ಲೂಕೆಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವ ದಾರಿಯಲ್ಲಿ ಜೊಯಿಡಾ ಸಾಗಿದೆ. ‘ಗಡಿನಾಡು’ ಹಾಗೂ ‘ಹಿಂದುಳಿದ ತಾಲ್ಲೂಕು’ ಎಂಬ ಸಹಾನುಭೂತಿಯಿಂದಾಗಿ ಇಲ್ಲಿನ ಜನರು ಕಾಂಕ್ರೀಟ್ ರಸ್ತೆ, ಸೇತುವೆಗಳನ್ನು ಕಾಣಲು ಸಾಧ್ಯವಾಗಿದೆ.

ದಶಕಗಳ ಹಿಂದೆ ಜೊಯಿಡಾ ಎಂದರೆ ಅದೊಂದು ಕಾಡು ಪ್ರದೇಶವೆಂದೇ ಹೊರಜಗತ್ತಿಗೆ ಪರಿಚಿತವಾಗಿತ್ತು. ಈಗಲೂ ಅಲ್ಲಿ ಕಾಡಿದೆ. ಆದರೆ, ಈ ಕಾಡು ಅವರಿಗೆ ಬದುಕಿಗೆ ನೆಲೆ ಕಲ್ಪಿಸಿದೆ. ಪ್ರವಾಸೋದ್ಯಮದ ಮೂಲಕ ನಾಡಿನೆಲ್ಲೆಡೆಯ ಜನರಿಗೆ ಜೊಯಿಡಾ ಪರಿಚಿತವಾಗಿದೆ. ವಾರದ ಕೊನೆಯ ರಜೆ ಕಳೆಯಲು, ಕಾಡಿನ ಸೌಂದರ್ಯ ಅನುಭವಿಸಲು ಪಟ್ಟಣಿಗರಿಗೆ ಹೆಚ್ಚು ಆಪ್ತವಾಗುವುದು ಜೊಯಿಡಾ ತಾಲ್ಲೂಕು.

ಇಲ್ಲಿಗೆ ರಾಜ್ಯ, ಹೊರರಾಜ್ಯಗಳ ಪ್ರವಾಸಿಗರು ಬರುವರಾದರೂ, ಬರುವವರಲ್ಲಿ ಹೆಚ್ಚಿನವರು ಕನ್ನಡಿಗರು. ಹಾಗೆ ಬೆಳೆದ ಸಂವಹನ ಕನ್ನಡವನ್ನು ಮೇಲೆತ್ತಿ, ಕೊಂಕಣಿ, ಮರಾಠಿಯನ್ನು ಪಕ್ಕಕ್ಕೆ ಸರಿಸಿದೆ.

ಗೋವಾದಲ್ಲಿ ಪೋರ್ಚುಗೀಸರ ಆಡಳಿತವಿದ್ದಾಗ ಮತಾಂತರ, ಅತ್ಯಾಚಾರದಂತಹ ಘಟನೆಗಳು ಹೆಚ್ಚಾದಾಗ, ಸಹಿಸಿಕೊಳ್ಳಲಾಗದೇ ಜೊಯಿಡಾಕ್ಕೆ ಬಂದು ನೆಲೆಸಿದವರು ಕುಣಬಿಗರು. ಮೂರು ಶತಮಾನಗಳ ಹಿಂದೆ ಇಲ್ಲಿ ಬಂದು ನೆಲೆಸಿದರೂ, ಅವರಿಗೆ ಭಾಷೆಯ ನಂಟು ಬಿಟ್ಟಿಲ್ಲ. ಅನೇಕರು ಈಗಲೂ ಕೊಂಕಣಿ ಮಾತನಾಡುತ್ತಾರೆ. ಮರಾಠಿಗರೂ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿದ್ದಾರೆ.

’ನಾವು ಶಾಲೆಗೆ ಹೋಗುವ ವೇಳೆ ಶಾಲೆಯಲ್ಲಿ ಕೊಂಕಣಿ ಅಥವಾ ಮರಾಠಿಯಲ್ಲೇ ಪಾಠ ಮಾಡುತ್ತಿದ್ದರು. ಅದನ್ನು ಅರ್ಥೈಸಿಕೊಂಡು ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯಬೇಕಾಗಿತ್ತು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಕನ್ನಡಿಗ ಶಿಕ್ಷಕರು ತಾಲ್ಲೂಕಿನಲ್ಲಿದ್ದಾರೆ. ಕನ್ನಡದಲ್ಲೇ ಪಾಠ ಮಾಡುವುದರಿಂದ ಮಕ್ಕಳಿಗೆ ಕನ್ನಡ ಸರಾಗವಾಗಿ ಬರುತ್ತದೆ’ ಎನ್ನುತ್ತಾರೆ ಸ್ಥಳೀಯ ನರಸಿಂಹ ಛಾಪಖಂಡ.

ಜೊಯಿಡಾದಲ್ಲಿ ಹಿಂದೆ ಮರಾಠಿ ಶಾಲೆಗಳು ಸಾಕಷ್ಟಿದ್ದವು. ಕ್ರಮೇಣ ಅವರು ಕಡಿಮೆಯಾಗಿ ಕನ್ನಡ ಫಲಕಗಳಿರುವ ಶಾಲೆಗಳು ಎಲ್ಲ ಊರುಗಳಲ್ಲೂ ಕಾಣುತ್ತಿವೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.

ಅಭಯಾರಣ್ಯ ರಕ್ಷಣೆ, ಅಕ್ರಮ ಮರ ಕಡಿತ ವಿಷಯದಲ್ಲಿ ಕಾನೂನು ಕ್ರಮ ಅನಿವಾರ್ಯ. ಆದರೆ, ಇಂತಹ ಸಂದರ್ಭ ಬಂದಾಗಲೆಲ್ಲ ‘ನಮ್ಮನ್ನು ಗೋವಾಕ್ಕೆ ಸೇರಿಸಿಬಿಡಿ’ ಎನ್ನುವ ಕೂಗು ಜೋರಾಗುತ್ತದೆ. ಗಡಿಯಲ್ಲಿರುವ ಡಿಗ್ಗಿ, ಮಾಹಿರೆ, ಬೊಂಡೋಲಿ, ಬಜಾರ್‌ಕುಣಾಂಗ್ ಮೊದಲಾದ ಹಳ್ಳಿಗಳಲ್ಲಿ ಈಗಲೂ ಗೋವಾ ಪ್ರಭಾವ ಇದೆ ಎನ್ನುತ್ತಾರೆ ಸ್ಥಳೀಯರೊಬ್ಬರು.

‘ಈಗಲೂ ನಮ್ಮ ಭಾಗದ ಶೇ 50ರಷ್ಟು ಯುವಕ–ಯುವತಿಯರು ಉದ್ಯೋಗಕ್ಕಾಗಿ ಗೋವಾಕ್ಕೆ ಹೋಗುತ್ತಾರೆ. ಅಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ತೆಂಗಿನಕಾಯಿ ಕೊಯ್ಲು, ಗದ್ದೆ ನಾಟಿ, ಗೇರು ಬೀಜ ಸಂಸ್ಕರಣೆ ಇಂತಹ ಕೃಷಿ ಒಡನಾಟ ಮೊದಲಿನಿಂದಲೂ ಇದೆ. ಈಗಲೂ ಮುಂದುವರಿದಿದೆ. ಇದರೊಟ್ಟಿಗೆ ಗೋವಾದ ಸ್ವಚ್ಛಂದ ಜೀವನ ಕ್ರಮಕ್ಕೆ ಯುವಜನತೆ ತೆರೆದುಕೊಳ್ಳುತ್ತಿರುವ ಅಪಾಯವೂ ಅರಿವಿಗೆ ಬರುತ್ತಿದೆ’ ಎನ್ನುತ್ತಾರೆ ರವಿ ಡೇರೆಕರ.

ಅಂಕಿ–ಅಂಶ

ಜೊಯಡಾ ತಾಲ್ಲೂಕಿನ ವಿಸ್ತಾರ –1882 ಕಿ.ಮೀ

ಜನಸಂಖ್ಯೆ –53ಸಾವಿರ

ಜನಸಾಂದ್ರತೆ ಕಿ.ಮೀಗೆ –26

ಶಾಲೆಗಳು

ಕನ್ನಡ ಮಾಧ್ಯಮ ಶಾಲೆ – 171

ಮರಾಠಿ ಶಾಲೆಗಳು – 05

ಕನ್ನಡ ಮರಾಠಿ ಶಾಲೆಗಳು– 13

ಕನ್ನಡ ಮರಾಠಿ ಇಂಗ್ಲಿಷ್ ಮಾಧ್ಯಮ ಶಾಲೆ –01

ಪ್ರತಿಕ್ರಿಯಿಸಿ (+)