164 ಕಡೆ ಕಾಲುಸಂಕದ ಬದಲು ಸೇತುವೆ

7
ಸ್ಥಳ ಗುರುತಿಸಿದ ಲೋಕೋಪಯೋಗಿ ಇಲಾಖೆ

164 ಕಡೆ ಕಾಲುಸಂಕದ ಬದಲು ಸೇತುವೆ

Published:
Updated:
Deccan Herald

ಬೆಂಗಳೂರು: ರಾಜ್ಯದ 164 ಕಡೆಗಳಲ್ಲಿ ಕಾಲುಸಂಕ ಬದಲು ಸೇತುವೆಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಸ್ಥಳ ಗುರುತಿಸಿದೆ.

ಜುಲೈ ತಿಂಗಳಲ್ಲಿ ಮುಂಗಾರಿನ ಅಬ್ಬರಕ್ಕೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಬಳಿ ಹಳ್ಳದಲ್ಲಿ ವಿದ್ಯಾರ್ಥಿನಿಯೊಬ್ಬಳು ಕೊಚ್ಚಿ ಹೋಗಿದ್ದಳು. ಕಾಲುಸಂಕಗಳ ದಯನೀಯ ಸ್ಥಿತಿ ಬಗ್ಗೆ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು. ಮಲೆನಾಡಿನ ಕಾಲುಸಂಕಗಳನ್ನು ತುರ್ತಾಗಿ ದುರಸ್ತಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದರು. ಮಲೆನಾಡು ಭಾಗದಲ್ಲಿ ಎರಡು ದಿನ ವಾಸ್ತವ್ಯ ಮಾಡುವುದಾಗಿ ತಿಳಿಸಿದ್ದರು. ಅದರ ಬೆನ್ನಲ್ಲೇ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಇಲಾಖೆ ಮುಂದಾಗಿದೆ.

ಕಾಲುಸಂಕಗಳ ಬದಲು 2 ಮೀಟರ್‌ನಿಂದ 5 ಮೀಟರ್‌ ಅಗಲದ ರಸ್ತೆ ನಿರ್ಮಾಣ ಮಾಡಲು ಇಲಾಖೆ ಯೋಜಿಸಿದೆ. ಪ್ರತಿ ಜಿಲ್ಲೆಯಲ್ಲಿ ಎಷ್ಟು ಸೇತುವೆಗಳ ಅಗತ್ಯ ಇದೆ ಎಂಬ ಕುರಿತು ಆರಂಭದಲ್ಲಿ ಎಂಜಿನಿಯರ್‌ಗಳಿಂದ ವರದಿ ಪಡೆಯಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಈ ಸಂಬಂಧ ಎಂಜಿನಿಯರ್‌ಗಳು ಬುಧವಾರ ವರದಿ ಸಲ್ಲಿಸಿದ್ದಾರೆ.

‘ಸೇತುವೆಯ ಉದ್ದ ನೋಡಿಕೊಂಡು ₹2 ಲಕ್ಷದಿಂದ ₹5 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಯೋಜಿಸಲಾಗಿದೆ. ದ್ವಿಚಕ್ರವಾಹನಗಳು ಹಾಗೂ ಆಟೊ ರಿಕ್ಷಾಗಳು ತೆರಳುವಷ್ಟು ದೊಡ್ಡ ಸೇತುವೆಗಳನ್ನು ನಿರ್ಮಿಸಲಾಗುತ್ತದೆ. ಆರೇಳು ಮೀಟರ್‌ನ ಸೇತುವೆಗೆ ಭೂಸ್ವಾಧೀನ ಮಾಡಬೇಕಾಗುತ್ತದೆ. ಆಗ ಸ್ಥಳೀಯರು ತಕರಾರು ಮಾಡುತ್ತಾರೆ. ಕೆಲವು ಕಡೆಗಳಲ್ಲಿ ಕಾಂಕ್ರಿಟ್‌ ಸೇತುವೆಗಳನ್ನು ನಿರ್ಮಿಸಲಿದ್ದೇವೆ. ಮುಂದಿನ ಮಳೆಗಾಲದ ಒಳಗೆ ಸೇತುವೆಗಳು ನಿರ್ಮಾಣವಾಗಲಿವೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸೇತುವೆಗಳ ಪಟ್ಟಿಯನ್ನು ಆರ್ಥಿಕ ಇಲಾಖೆಗೆ ಕಳುಹಿಸಿ ಒಪ್ಪಿಗೆ ಪಡೆಯಬೇಕಿದೆ. ನೈಸರ್ಗಿಕ ವಿಕೋ‍ಪ ನಿಧಿ ಹಾಗೂ ಜಿಲ್ಲಾ ಪಂಚಾಯಿತಿ ನಿಧಿಯನ್ನು ಬಳಸಿಕೊಳ್ಳುತ್ತೇವೆ. ಉಳಿದ ಮೊತ್ತವನ್ನು ಇಲಾಖೆಯಿಂದ ಭರಿಸುತ್ತೇವೆ. ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಬಹುತೇಕ ಸೇತುವೆಗಳು ನಿರ್ಮಾಣವಾಗಲಿವೆ. ಬೆಳಗಾವಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ತಲಾ ಎರಡು ಸೇತುವೆಗಳ ಅಗತ್ಯ ಇವೆ’ ಎಂದು ಅವರು ಹೇಳಿದರು.

ಎಲ್ಲೆಲ್ಲಿ ಸೇತುವೆಗಳು

*ಉಡುಪಿ

*ದಕ್ಷಿಣ ಕನ್ನಡ

*ಕೊಡಗು

*ಉತ್ತರ ಕನ್ನಡ

*ಚಿಕ್ಕಮಗಳೂರು

*ಶಿವಮೊಗ್ಗ

*ಬೆಳಗಾವಿ

*ಹಾವೇರಿ

 

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !