ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಆಪ್ತರಿಗೆ ಕೇಂದ್ರ ಸಂಪುಟದಲ್ಲಿ ದೊರೆಯದ ಸ್ಥಾನ: ತೀವ್ರ ಹಿನ್ನಡೆ

Last Updated 30 ಮೇ 2019, 20:22 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಯಾವೊಬ್ಬ ಸಂಸದರಿಗೂ ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ.

ಉಡುಪಿ–ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಾಗಲಕೋಟೆಯ ಪಿ.ಸಿ. ಗದ್ದಿಗೌಡರ್‌, ಹಾವೇರಿಯ ಶಿವಕುಮಾರ್ ಉದಾಸಿ, ತುಮಕೂರಿನ ಜಿ.ಎಸ್‌. ಬಸವರಾಜ್‌, ಕೊಪ್ಪಳದ ಕರಡಿ ಸಂಗಣ್ಣ ಪೈಕಿ, ಒಬ್ಬಿಬ್ಬರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪ ಅವರಿಗೆ ತೀವ್ರ ಹಿನ್ನಡೆ ಆದಂತಾಗಿದೆ.

ಲೋಕಸಭೆ ಚುನಾವಣೆ ಟಿಕೆಟ್‌ ಹಂಚಿಕೆ ವೇಳೆ ಕೆಲವು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಷಯದಲ್ಲೂ ಯಡಿಯೂರಪ್ಪ ಸಲಹೆಗೆ ಕಿವಿಗೊಡದೆ ಟಿಕೆಟ್‌ ಹಂಚಿಕೆ ಮಾಡಿದ್ದ ವರಿಷ್ಠರು, ಸಚಿವ ಸ್ಥಾನ ಹಂಚಿಕೆಯಲ್ಲೂ ಅವರ ಆಪ್ತರನ್ನು ಕಡೆಗಣಿಸಿದ್ದಾರೆ.

ಬುಧವಾರ ಮಧ್ಯಾಹ್ನವಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದ ಯಡಿಯೂರಪ್ಪ, ಸಂಪುಟಕ್ಕೆ ಸೇರ್ಪಡೆ ಆಗಬಹುದಾದ ಆಪ್ತ ಸಂಸದರ ಪಟ್ಟಿ ನೀಡಿದ್ದರು. ಆದರೆ, ಮೋದಿ–ಶಾ ಜೋಡಿ ಅದಕ್ಕೆ ಸಮ್ಮತಿ ಸೂಚಿಸಿಲ್ಲ.

ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌, ಬೆಂಗಳೂರು (ಉತ್ತರ) ಸಂಸದ ಡಿ.ವಿ. ಸದಾನಂದಗೌಡ ಅವರಿಗೆ ಮೋದಿ ಸರ್ಕಾರದ ಎರಡನೇ ಅವಧಿಯಲ್ಲೂ ಸಚಿವರಾಗಿ ಮುಂದುವರಿಯುವ ಅವಕಾಶ ಲಭಿಸಿದೆ.

ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಮುಂಬೈ ಕರ್ನಾಟಕ ಭಾಗದ ಧಾರವಾಡದ ಪ್ರಹ್ಲಾದ್‌ ಜೋಶಿ, ಬೆಳಗಾವಿಯ ಸುರೇಶ ಅಂಗಡಿ ಅವರಿಗೆ ಈ ಬಾರಿ ಅದೃಷ್ಟ ಒಲಿದುಬಂದಿದೆ.

ಪಕ್ಷಕ್ಕೆ ಸಲ್ಲಿಸಿರುವ ಸೇವೆ ಮತ್ತು ಹಿರಿತನವನ್ನು ಪರಿಗಣಿಸಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೊದಲ ಹಂತದಲ್ಲಿ ಬ್ರಾಹ್ಮಣ ಸಮುದಾಯದ ಇಬ್ಬರು, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ತಲಾ ಒಬ್ಬರು ಸಚಿವರಾಗಿದ್ದು, ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆ ಸಂದರ್ಭ ಇತರ ಸಮುದಾಯಗಳನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದು ರಾಜ್ಯ ಬಿಜೆಪಿ ಮೂಲಗಳು ಹೇಳಿವೆ.

ಅಸಮಾಧಾನ: ರಾಜ್ಯದ ಎಲ್ಲ ಮೀಸಲು ಕ್ಷೇತ್ರಗಳಲ್ಲಿ ಜಯಿಸಿರುವ ಏಳು ಜನ ಸಂಸದರಲ್ಲಿ ಒಬ್ಬರಿಗೂ ಮೊದಲ ಹಂತದಲ್ಲಿ ಸಂಪುಟ ಸೇರುವ ಸೌಭಾಗ್ಯ ದೊರೆಯದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ ಬಾರಿಯ ಸರ್ಕಾರದ ದ್ವಿತೀಯಾರ್ಧದಲ್ಲಿ ರಾಜ್ಯ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದ ವಿಜಯಪುರದ ರಮೇಶ ಜಿಗಜಿಣಗಿ, ಈ ಹಿಂದೆ ಕೇಂದ್ರದ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವಿಯಾದ ಚಾಮರಾಜನಗರದ ಶ್ರೀನಿವಾಸ್‌ ಪ್ರಸಾದ್‌ ಅವರಲ್ಲಿ ಒಬ್ಬರಿಗೆ ಅವಕಾಶ ದೊರೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

‘ರಾಜ್ಯದಿಂದ ದಲಿತ ಸಮುದಾಯದ ಒಬ್ಬರನ್ನಾದರೂ ಸಂಪುಟಕ್ಕೆ ಸೇರಿಸಿಕೊಳ್ಳುವ ಅಗತ್ಯವಿತ್ತು. ವಿಸ್ತರಣೆ ವೇಳೆ ಈ ಅಂಶವನ್ನು ಪರಿಗಣಿಸುವಂತೆ ವರಿಷ್ಠರಲ್ಲಿ ಮನವಿ ಸಲ್ಲಿಸಲಾಗುವುದು’ ಎಂದು ಜಗದೀಶ ಶೆಟ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿವಿಎಸ್‌ಗೆ ಮನ್ನಣೆ: ರಾಷ್ಟ್ರಪತಿ ಭವನದ ಆವರಣದಲ್ಲಿ ಸಂಜೆ ನಡೆದ ಸಮಾರಂಭದಲ್ಲಿ ಐದನೇಯವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸದಾನಂದಗೌಡ ಅವರಿಗೆ ಮಹತ್ವದ ಖಾತೆ ದೊರೆಯುವ ಸಾಧ್ಯತೆ ಇದೆ. ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್‌ ಅವರಿಗೆ ಸದಾನಂದಗೌಡರ ನಂತರ ಪ್ರಮಾಣ ವಚನಕ್ಕೆ ಅವಕಾಶ ದೊರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT