ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈಗೆ ಸಂಪುಟ ಸಂಕಟ; ಧಾವಂತಕ್ಕೆ ಪಕ್ಷದ ವರಿಷ್ಠರ ತಡೆ

Last Updated 13 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ತಿಂಗಳಿನಿಂದ ನನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬರುವ ಲಕ್ಷಣ ಸದ್ಯಕ್ಕೆ ಕಾಣಿಸುತ್ತಿಲ್ಲ.

‘ತಕ್ಷಣವೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ’ ಎಂಬ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಧಾವಂತಕ್ಕೆ ವರಿಷ್ಠರು ಮತ್ತೊಮ್ಮೆ ತಡೆ ಹಾಕಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ, 10 ನಿಮಿಷದಲ್ಲೇ ಕಾರ್ಯಕ್ರಮ ಮುಗಿಸಿ ದೆಹಲಿಗೆ ಹೋಗುವ ತರಾತುರಿಯಲ್ಲಿ ಬೆಂಗಳೂರಿಗೆ ವಾಪಸ್ ಆದರು.

ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರು ಭೇಟಿಗೆ ಸಮಯ ಕೊಡದೇ ಇದ್ದುದರಿಂದ, ಕೊನೆ ಕ್ಷಣದಲ್ಲಿ ತಮ್ಮ ಪ್ರವಾಸವನ್ನು ಯಡಿಯೂರಪ್ಪ ರದ್ದುಪಡಿಸಿದರು.

‘ಉಪಚುನಾವಣೆಯಲ್ಲಿ ಪಕ್ಷಕ್ಕೆ ಭರ್ಜರಿ ಗೆಲುವು ತಂದುಕೊಟ್ಟಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಮೆಚ್ಚುಗೆ ಸುರಿಸಿದ್ದರು. ಆದರೆ, ಒಂದು ತಿಂಗಳಲ್ಲೇ ಮತ್ತೆ ಯಡಿಯೂರಪ್ಪ ಅವರ ಮೇಲೆ ಮುನಿಸಿಕೊಂಡಿದ್ದಾರೆ.ಈ ಬೆಳವಣಿಗೆಯಿಂದ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲದಿರುವುದು ಇದರಿಂದ ಸ್ಪಷ್ಟ ವಾಗಿದ್ದು, ಯಡಿಯೂರಪ್ಪ ಅವರ ಮೇಲೆ ವರಿಷ್ಠರು ತಮ್ಮ ಲಗಾಮು ಇನ್ನೂ ಬಿಗಿಗೊಳಿಸಿರುವುದರ ಸೂಚನೆ ಇದಾಗಿದೆ’ ಎಂದು ಪಕ್ಷದ ಮೂಲಗಳು ಹೇಳಿವೆ.

‘ಅಮಿತ್ ಶಾ ಜ.17 ರಾತ್ರಿ ಬೆಂಗಳೂರಿಗೆ ಬರಲಿದ್ದು, ಅದೇ ದಿನ ರಾತ್ರಿ ಅಥವಾ ಜ.18ರಂದು ಸಂಪುಟ ವಿಸ್ತರಣೆ ಕುರಿತು ಯಡಿಯೂರಪ್ಪ ಮಾತುಕತೆ ನಡೆಸಲಿದ್ದಾರೆ. ಅಂದು ಒಪ್ಪಿಗೆ ಸಿಕ್ಕರೆ ಜ. 19 ರ ಬೆಳಿಗ್ಗೆ ಸಂಪುಟ ವಿಸ್ತರಣೆ ಆಗಬಹುದು. ಇಲ್ಲವಾದರೆ ಮುಖ್ಯಮಂತ್ರಿ ದಾವೋಸ್‌ನಿಂದ ಮರಳಿದ ಬಳಿಕವೇ ನಡೆಯಬಹುದು’ ಎಂದೂ ಮೂಲಗಳು ತಿಳಿಸಿವೆ.

ಸಂಪುಟ ವಿಸ್ತರಣೆ ಆಗದಿರುವ ಬಗ್ಗೆ ನೂತನ ಶಾಸಕರು ತೀವ್ರ ಅಸಮಾಧಾನಗೊಂಡಿದ್ದು, ಅದನ್ನು ಮುಖ್ಯಮಂತ್ರಿ ಮುಂದೆಯೂ ವ್ಯಕ್ತಪಡಿಸಿದ್ದಾರೆ. ನೂತನ ಶಾಸಕರ ಸಿಟ್ಟು ತಣಿಸಲು ಮುಂದಾಗಿದ್ದ ಯಡಿಯೂರಪ್ಪ, ದೆಹಲಿ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದರು.

******

ಸಚಿವ ಸ್ಥಾನ ಕೇಳುವುದು‌ ನಮ್ಮ ಹಕ್ಕು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ 17 ಜನರು ಒಟ್ಟಾಗಿದ್ದೇವೆ

-ಎಚ್‌.ವಿಶ್ವನಾಥ್‌, ಮಾಜಿ ಶಾಸಕ

ಅಮಿತ್‌ ಶಾ ಬೆಂಗಳೂರಿಗೆ ಬಂದಾಗ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುತ್ತೇನೆ. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಅವಕಾಶ ಕೊಡಿಸುತ್ತೇನೆ
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT