ಶನಿವಾರ, ಅಕ್ಟೋಬರ್ 19, 2019
27 °C
ಅನರ್ಹರಿಗೆ ಅನ್ಯಾಯ ಆಗುವುದಿಲ್ಲ l ನಮ್ಮೊಳಗೆ ಮನಸ್ತಾಪ ಇದೆ ಎನ್ನುವುದು ಮಾಧ್ಯಮಗಳ ಸೃಷ್ಟಿ: ಕಟೀಲ್‌

ನಳಿನ್‌–ಯಡಿಯೂರಪ್ಪ ತಿಕ್ಕಾಟಕ್ಕೆ ಅಲ್ಪವಿರಾಮ

Published:
Updated:
ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ಬಳಿಕ ಹೊರಬರುತ್ತಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರು ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರ ನಿವಾಸಕ್ಕೆ ಬಂದು ಅರ್ಧ ಗಂಟೆ ಮಾತುಕತೆ ನಡೆಸಿದ್ದು, ತಮ್ಮೊಳಗೆ ಯಾವುದೇ ಅಸಮಾಧಾನ ಇಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ.

‘ಉಪಚುನಾವಣೆಗೆ ನಡೆಸಬೇಕಾದ ಸಿದ್ಧತೆ, ಪಕ್ಷದ ಸಂಘಟನೆ, ನೆರೆ ಪರಿಹಾರ ಕಾರ್ಯವನ್ನು ಚುರುಕುಗೊಳಿಸುವುದು ಸಹಿತ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ. ಪಕ್ಷದ ಪದಾಧಿಕಾರಿಗಳ ಆಯ್ಕೆಯನ್ನು ಸಹ ಚರ್ಚಿಸಿಯೇ ಮಾಡಲಾಗುತ್ತಿದೆ. ನಮ್ಮೊಳಗೆ ಮನಸ್ತಾಪ ಇದೆ ಎಂಬುದು ಮಾಧ್ಯಮಗಳ ಸೃಷ್ಟಿಯಷ್ಟೇ’ ಎಂದು ಸಭೆಯ ಬಳಿಕ ನಳಿನ್‌ ಹೇಳಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಸಹ ಬಹುತೇಕ ಇದೇ ರೀತಿಯ ಹೇಳಿಕೆ ನೀಡಿದರು. ಈ ಮೂಲಕ ತಮ್ಮ ನಡುವೆ ಬಿಕ್ಕಟ್ಟೇ ಇಲ್ಲ ಎಂದು ಹೇಳಿಬಿಟ್ಟರು.

ಅನ್ಯಾಯ ಆಗಲ್ಲ: ‘ಸುಪ್ರೀಂ ಕೋರ್ಟ್‌ ತೀರ್ಪು ಏನೇ ಬಂದರೂ, ಅನರ್ಹ ಶಾಸಕರಿಗೆ ಅನ್ಯಾಯ ಆಗುವುದಕ್ಕೆ ಬಿಡುವುದಿಲ್ಲ. ಉಪಚುನಾವಣೆ ಟಿಕೆಟ್ ವಿಚಾರದಲ್ಲಿ ಅಮಿತ್ ಶಾ, ಯಡಿಯೂರಪ್ಪ ಮತ್ತು ನಾನು ಕೂತು ಚರ್ಚಿಸಿ ತೀರ್ಮಾನಿಸುತ್ತೇವೆ’ ಎಂದು ನಳಿನ್‌ ಕುಮಾರ್‌ ಕಟೀಲ್‌ ಸುದ್ದಿಗಾರರಿಗೆ ತಿಳಿಸಿದರು.

‘ನನಗೆ ಯಡಿಯೂರಪ್ಪ ಮಾರ್ಗದರ್ಶಕರು, ಪದಾಧಿಕಾರಿಗಳ ಬದಲಾವಣೆ ವಿಚಾರದಲ್ಲಿ ನನ್ನ ಮತ್ತು ಅವರ ನಡುವೆ ಗೊಂದಲ ಇಲ್ಲ. ಕಳೆದ ಏಳೆಂಟು ದಿನಗಳಿಂದ ಮುಖ್ಯಮಂತ್ರಿ ಮತ್ತು ನಾನು ಪ್ರವಾಸದಲ್ಲಿದ್ದೆವು. ಹಾಗಾಗಿ ಇಬ್ಬರೂ ಪರಸ್ಪರ ಭೇಟಿ ಮಾಡಿರಲಿಲ್ಲ. ಪಕ್ಷದ ಸಂಘಟನೆ ಬಗ್ಗೆ, ನೆರೆ ಪರಿಹಾರ ವೇಗಗೊಳಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂದಿನ ಪಕ್ಷ ಸಂಘಟನೆ, ಉಪಚುನಾವಣೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ’ ಎಂದರು.

‘ಬಿಜೆಪಿಗೆ ಬರುವ ಎಲ್ಲರಿಗೂ ಸ್ವಾಗತ ಇದೆ. ಯಾರನ್ನು ಯಾವುದೋ ಕಾರಣಕ್ಕೆ ತೆಗೆದಿದ್ದರೂ ಅವರು ವಾಪಸ್‌ ಬರಲಿ, ಯಾರು ಯಾರು ಪಕ್ಷ ಬಿಟ್ಟು ಹೋಗಿದ್ದಾರೋ ಅವರೆಲ್ಲರೂ ಪಕ್ಷಕ್ಕೆ ಬರಬಹುದು, ಯಾರನ್ನೂ ಕೈ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಯಡಿಯೂರಪ್ಪರ ಕಾಲದಲ್ಲೇ ಸುರಾನಾ, ಭಾನುಪ್ರಕಾಶ್ ಅವರ ಉಚ್ಚಾಟನೆ ವಾಪಸ್ ತೆಗೆದುಕೊಂಡಿದ್ದರು. ಹಿಂದಿನ ಚುನಾವಣೆಯಲ್ಲೇ ಭಾನುಪ್ರಕಾಶ್ ಶಿವಮೊಗ್ಗ ಉಸ್ತುವಾರಿ ಆಗಿದ್ದರು. ಈಗ ರಾಜ್ಯ ಮಟ್ಟದಲ್ಲಿ ಸಂಘಟನೆಗೆ ಅವರನ್ನು ನೇಮಕ ಮಾಡಿದ್ದೇವೆ. ಯಡಿಯೂರಪ್ಪ ಅವರ ಸಲಹೆ ಮೇರೆಗೇ ಭಾನುಪ್ರಕಾಶ್ ಮತ್ತು ಸುರಾನಾ ನೇಮಕ ಆಗಿದೆ’ ಎಂದು ನಳಿನ್‌ ಸ್ಪಷ್ಟಪಡಿಸಿದರು.

‘ಬೆಂಗಳೂರು ಮೇಯರ್‌ ನೇಮಕ ವಿಚಾರದಲ್ಲಿ ನಮ್ಮ ನಡೆಯಲ್ಲಿ ಸಮನ್ವಯ ಕೊರತೆ ಇತ್ತು ಎನ್ನುವುದು ಸುಳ್ಳು. ನಾನು ಮತ್ತು ಮುಖ್ಯಮಂತ್ರಿ ಅವರು ಮೂರು ಬಾರಿ ಸಭೆ ನಡೆಸಿದ್ದೇವೆ. ಎಲ್ಲಾ ನಾಯಕರ ಜೊತೆ ಚರ್ಚಿಸಿಯೇ ತೀರ್ಮಾನ ಮಾಡಲಾಗಿದೆ.  ಇಬ್ಬರೂ ಸೇರಿ ಚುನಾವಣೆ ಮುಂದೂಡಿಕೆಗೆ ತೀರ್ಮಾನ ಮಾಡಿದ್ದೆವು. ಆದರೆ ಅಧಿಕಾರಿಗಳು ಒಪ್ಪಲಿಲ್ಲ. ಮೇಯರ್‌ ಆಯ್ಕೆಗಾಗಿ ಯಡಿಯೂರಪ್ಪ ಅವರು ಸಮಿತಿ ರಚಿಸಿರಲಿಲ್ಲ’ ಎಂದರು.

ತಟ್ಟಿದ ಬಿಸಿ, ಓಡಿ ಬಂದ ನಳಿನ್‌

ಯಡಿಯೂರಪ್ಪ ಅವರ ಮನೆಯಲ್ಲಿ ಅರ್ಧ ಗಂಟೆ ಮಾತುಕತೆ ನಡೆಸಿದ ನಳಿನ್‌ ಕುಮಾರ್‌ ಕಟೀಲ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಬೇಕಿತ್ತು. ಅವರೇ ಇದನ್ನು ಮೊದಲಾಗಿ ತಿಳಿಸಿದ್ದರು. ಆದರೆ ಮಾತುಕತೆ ಮುಗಿದ ಬಳಿಕ ಅವರು ಹೊರಗೆ ಕಾಯುತ್ತಿದ್ದ ಪತ್ರಕರ್ತರನ್ನು ಧಿಕ್ಕರಿಸಿ ತೆರಳಿದ್ದರು.

‘ನಳಿನ್‌ ವಿರುದ್ಧ ಯಡಿಯೂರಪ್ಪ ತೀವ್ರ ತರಾಟೆ, ಪೆಚ್ಚು ಮುಖದೊಂದಿಗೆ ನಿರ್ಗಮಿಸಿದ ನಳಿನ್‌’ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗತೊಡಗಿತು. ಇದರಿಂದ ಎಚ್ಚೆತ್ತ ನಳಿನ್‌ ವಿಮಾನನಿಲ್ದಾಣಕ್ಕೆ ಹೋಗುತ್ತಿದ್ದ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿ ವಾಪಸ್ ಡಾಲರ್ಸ್‌ ಕಾಲೋನಿಯ ಮುಖ್ಯಮಂತ್ರಿ ಮನೆಯತ್ತ ಬಂದು ಸುದ್ದಿಗಾರರೊಂದಿಗೆ 10 ನಿಮಿಷ ಮಾತನಾಡಿ, ತಮ್ಮ ಮತ್ತು ಯಡಿಯೂರಪ್ಪ ಅವರ ನಡುವೆ ಮನಸ್ತಾಪ ಇಲ್ಲ ಎಂದು ತಿಳಿಸಿದರು.

‘ನೀವು ನನಗಾಗಿ ಕಾಯುತ್ತಿದ್ದುದನ್ನು ಗಮನಿಸಲಿಲ್ಲ, ನಾನು 11.30ರ ವಿಮಾನದಲ್ಲಿ ಮಂಗಳೂರಿಗೆ ತೆರಳಬೇಕಿತ್ತು. ಹೀಗಾಗಿ ಮಾತುಕತೆ ಬಳಿಕ ವಿಮಾನನಿಲ್ದಾಣದತ್ತ ಧಾವಿಸಿದೆ, ಆದರೆ ತಪ್ಪು ಸಂದೇಶ ರವಾನೆಯಾಗುವುದು ಬೇಡ ಎಂದು ಭಾವಿಸಿ ವಾಪಸ್ ಬಂದೆ’ ಎಂದು ಅವರು ತಿಳಿಸಿದರು. 

Post Comments (+)