ಬುಧವಾರ, ಏಪ್ರಿಲ್ 21, 2021
31 °C

ವಿಶ್ವಾಸಮತ ಯಾಚನೆಯಲ್ಲಿ ಪಾಲ್ಗೊಳ್ಳಲ್ಲ: ‘ಮೈತ್ರಿ’ಗೆ ಕೈಕೊಟ್ಟ ಬಿಎಸ್‌ಪಿಯ ಮಹೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದ ಬಿಎಸ್‌ಪಿಯ ಶಾಸಕ ಎನ್‌.ಮಹೇಶ್‌ ಹೇಳಿದ್ದಾರೆ. ಈ ಮೂಲಕ ‘ಮೈತ್ರಿ’ಪಡೆಗೆ ಕೊನೆ ಗಳಿಗೆಯಲ್ಲಿ ಕೈಕೊಟ್ಟಿದ್ದಾರೆ. 

ಬಿಎಸ್‌ಪಿಯ ಮುಖ್ಯಸ್ಥೆ ಮಾಯಾವತಿ ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದ್ದಾಗಿ ಎಎನ್‌ಐ ಟ್ವೀಟ್‌ ಮಾಡಿದೆ.

ಬಿಎಸ್‌ಪಿಯ ಮಹೇಶ್‌ ಸದ್ಯ ಮಿತ್ರಕೂಟದ ಜತೆಗೆ ಗುರುತಿಸಿಕೊಂಡಿದ್ದರು. 

ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರ ರಚನೆಯಾದ ನಾಲ್ಕೂವರೆ ತಿಂಗಳಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿದ್ದ ಎನ್‌.ಮಹೇಶ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

224 ಸಂಖ್ಯಾಬಲದ ವಿಧಾನಸಭೆಯಲ್ಲಿ ಪ್ರಸ್ತುತ ಮೈತ್ರಿ ಸರ್ಕಾರದ 15 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸಿರುವ ಅತೃಪ್ತರು ಮುಂಬೈನ ಬೀಡುಬಿಟ್ಟಿದ್ದಾರೆ.

ಇಬ್ಬರು ಪಕ್ಷೇತರರು ಮೈತ್ರಿಗೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದಿರುವುದಾಗಿ ಘೋಷಿಸಿದ್ದಾರೆ.

ಕಾಂಗ್ರೆಸ್‌ನ ಶಾಸಕ ಶ್ರೀಮಂತ ಪಾಟೀಲ್‌ ಅವರೂ ಅನಾರೋಗ್ಯ ನಿಮಿತ್ತ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಷ್ಟೆಲ್ಲಾ ರಾಜೀನಾಮೆ, ವಾಕ್ಸಮರಗಳ ನಡುವೆಯೂ ಮೈತ್ರಿ ಸರ್ಕಾರ ಉಳಿಸಿಕೊಳ್ಳುವಲ್ಲಿ ಎರಡೂ ಪಕ್ಷಗಳ ನಾಯಕರು ಕಸರತ್ತು ನಡೆಸಿದ್ದಾರೆ. ಸೋಮವಾರ ವಿಶ್ವಾಸಮತ ಯಾಚನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದ್ದು, ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರೂ ಅದಕ್ಕೆ ಶುಕ್ರವಾರ ನಡೆದ ಕಲಾಪದ ವೇಳೆ ಒಪ್ಪಿಗೆ ಸೂಚಿಸಿದ್ದಾರೆ. ಅತ್ತ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಗಳನ್ನೂ ಸಲ್ಲಿಸಿದ್ದಾರೆ. ಆ ಅರ್ಜಿಗಳ ವಿಚಾರಣೆ ಸೋಮವಾರ ನಡೆಯಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು