ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರ್ಥ್ಯ ಸಾಬೀತುಪಡಿಸಿದ ಸಿಎಂ ಪುತ್ರ ವಿಜಯೇಂದ್ರ

ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಗೆದ್ದ ಬಿಜೆಪಿ, ನನಸಾದ ಮುಖ್ಯಮಂತ್ರಿ ಕನಸು
Last Updated 11 ಡಿಸೆಂಬರ್ 2019, 10:09 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿಗಳ ತವರೂರುಕೆ.ಆರ್.ಪೇಟೆತಾಲ್ಲೂಕಿನಬೂಕನಕೆರೆಯಲ್ಲಿ ಸಂಭ್ರಮವೋ ಸಂಭ್ರಮ!

ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದ್ದು ಇತಿಹಾಸ ನಿರ್ಮಾಣವಾಗಿದೆ. ‘ತವರು ಕ್ಷೇತ್ರದಲ್ಲಿ ಕಮಲ ಅರಳಿಲ್ಲ’ ಎಂಬ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕೊರಗು ಕೊನೆಯಾಗಿದೆ. ಇದರ ಹಿಂದೆ ಬಿ.ವೈ.ವಿಜಯೇಂದ್ರ ಪರಿಶ್ರಮ ಆಪಾರ.

‘ಜನ್ಮಭೂಮಿಯೇ ಕರ್ಮಭೂಮಿ’ ಎಂದು ಘೋಷಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ತವರಿನ ಋಣ ತೀರಿಸುವ ಕನಸು ಈಡೇರಿಸಿ’ ಎಂಬ ಮೊರೆ ಇಟ್ಟಿದ್ದರು. ಅದಕ್ಕಾಗಿ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ವಹಿಸಿದ್ದರು. ಮುಖ್ಯಮಂತ್ರಿಗಳ ಕನಸು ನನಸಾಗಿಸಿದ್ದು ಮಗ. ಈ ಮೂಲಕ ತಂದೆಗೆ ಗೆಲುವಿನ ಉಡುಗೊರೆ ನೀಡಿದ್ದಾರೆ.

‘ಮೈಮುಲ್’ ನಿರ್ದೇಶಕ ಎಸ್.ಸಿ.ಅಶೋಕ್ ಮಾತನಾಡಿ, ‘ಉಪಚುನಾವಣೆಯಲ್ಲಿ ವಿಜಯೇಂದ್ರ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ತಂಡವೊಂದನ್ನು ಒಟ್ಟುಗೂಡಿಸಿ ಅಭ್ಯರ್ಥಿ ಗೆಲುವಿಗೆ ಬೇಕಾದ ಎಲ್ಲ ತಂತ್ರಗಾರಿಕೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು’ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಬೂಕನಕೆರೆ ಗ್ರಾಮದಲ್ಲಿ ಹುಟ್ಟಿ, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಬೆಳೆದು ಶಿಕಾರಿಪುರದಲ್ಲಿ ರಾಜಕೀಯ ಜೀವನ ಆರಂಭಿಸಿದರು. ಆದರೆ, ಅವರ ಪುತ್ರ ವಿಜಯೇಂದ್ರ ಶಿಕಾರಿಪುರದಲ್ಲಿ ಹುಟ್ಟಿ ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಬೆಳೆದು ಕೆ.ಆರ್‌.ಪೇಟೆಗೆ ಮರಳಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಬೂಕನಕೆರೆಗೆ ಬಂದಾಗಲೆಲ್ಲಾ ಒಂದು ಬಾರಿಯಾದರೂ ನನ್ನ ತಾಲ್ಲೂಕಿನಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಕೇಳಿಕೊಳ್ಳುತಿದ್ದರು. ಈ ಬಾರಿ ಅವರ ಆಸೆಯನ್ನು ಈಡೇರಿಸಿದ್ದೇವೆ ನನ್ನ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಲಾಗಲಿಲ್ಲ ಎಂಬ ಅವರ ನೋವು ಈ ಗೆಲುವಿನೊಂದಿಗೆ ಸಮಾಪ್ತಿಯಾಗಿದೆ. ತವರಿನ ಜನ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ ಕೆ.ಆರ್‌.ಪೇಟೆ ತಾಲ್ಲೂಕಿನ ಮೂಲಕ ಬಿಜೆಪಿ ಪಕ್ಷವನ್ನು ಮಂಡ್ಯದ ಇತಿಹಾಸದಲ್ಲಿ ಅರಳುವಂತೆ ಮಾಡಿದ್ದೇವೆ.ಈ ಗೆಲುವು ತಾಲ್ಲೂಕಿನ ಮಗ ಗ್ರಾಮದ ಸುಪುತ್ರ ಯಡಿಯೂರಪ್ಪನವರಿಗೆ ಕೊಟ್ಟ ಕೊಡುಗೆ ಎಂದು ಬೂಕನಕೆರೆ ಮಧುಸೂಧನ್ ಹೇಳಿದರು.

ಬಿ. ವೈ. ವಿಜಯೇಂದ್ರ ಮಾತನಾಡಿ, ‘ಅಪ್ಪಾಜಿಯವರ ಬಹುವರ್ಷಗಳ ಕನಸನ್ನು ಅವರು ಸಂಕಷ್ಟದಲ್ಲಿ ಇದ್ದ ವೇಳೆಯಲ್ಲಿಯೇ ಈಡೇರಿಸುವ ಮೂಲಕ ತಾಲ್ಲೂಕಿನ ಜನ ನೆರವಾಗಿದ್ದಾರೆ. ತವರಿನ ಋಣ ದೊಡ್ಡದು. ಆ ಋಣವನ್ನು ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಈ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಪ್ರಣಾಳಿಕೆಯಂತೆ ಅಭಿವೃದ್ದಿ ಕಾರ್ಯ ಕೈಗೊಳ್ಳುತ್ತೇನೆ’ ಎಂದರು.

ಪಕ್ಷ ಸಂಘಟನಾ ಕಾರ್ಯದಲ್ಲಿ ಬಿ.ವೈ.ವಿಜಯೇಂದ್ರ
ಪಕ್ಷ ಸಂಘಟನಾ ಕಾರ್ಯದಲ್ಲಿ ಬಿ.ವೈ.ವಿಜಯೇಂದ್ರ

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 9,819 ಮತಗಳಿಸಿ ಠೇವಣಿ ಕಳೆದುಕೊಂಡಿದ್ದರು. ಆದರೆ, ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ 9,731 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಏಳು ಕ್ಷೇತ್ರದಲ್ಲೂ ಗೆದ್ದು ಬೀಗಿದ್ದ ಜೆಡಿಎಸ್‌ ಈಗ ಕೆ.ಆರ್‌.ಪೇಟೆಯನ್ನು ಕಳೆದುಕೊಂಡಿದೆ. ನಾರಾಯಣಗೌಡ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಹ್ಯಾಟ್ರಿಕ್‌ ಸೋಲು ಕಂಡಿದ್ದಾರೆ.

ಬಿಜೆಪಿ ಗೆಲುವಿನಲ್ಲಿ ಚುನಾವಣೆ ಉಸ್ತುವಾರಿ ಹೊತ್ತಿದ್ದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಹಾಸನ ಶಾಸಕ ಪ್ರೀತಂ ಗೌಡರ ದೊಡ್ಡ ಪಾತ್ರವಿದೆ. ಅವರ ಚುನಾವಣಾ ತಂತ್ರಗಳು ಫಲ ಕೊಟ್ಟಿವೆ. ಕುರುಬ, ನಾಯಕ, ಈಡಿಗ, ಗಾಣಿಗ, ಭೋವಿ ಸೇರಿ 15 ಸಣ್ಣ ಸಮುದಾಯಗಳ ಸಮಾವೇಶ ನಡೆಸಿದ್ದ ಅವರು ಒಕ್ಕಲಿಗೇತರ ಮತಗಳನ್ನು ಕ್ರೋಡಿಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಹುಸಂಖ್ಯಾತ ಒಕ್ಕಲಿಗ ಮತಗಳನ್ನೇ ನೆಚ್ಚಿಕೊಂಡಿದ್ದ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತ ಬಿ.ಎಲ್‌.ದೇವರಾಜು ಗೆಲುವಿನ ದಡ ಮುಟ್ಟಲಿಲ್ಲ. ಒಕ್ಕಲಿಗ ಮತಗಳು ಛಿದ್ರವಾಗಿದ್ದು ಮೂರು ಪಕ್ಷಗಳಿಗೆ ಹಂಚಿ ಹೋಗಿವೆ. ಕುಮಾರಸ್ವಾಮಿ ಕಣ್ಣೀರಿಗೆ, ಧ್ವನಿಮುದ್ರಿತ ಫೋನ್‌ ಕರೆಗೆ, ಸಾಲಾ ಮನ್ನಾ ಅಸ್ತ್ರಕ್ಕೆ ಮತದಾರ ಸೊಪ್ಪು ಹಾಕಿಲ್ಲ. ‘ಬಾಂಬೆ ಕಳ್ಳ, ಕಾಮಾಟಿಪುರ’ ಹೇಳಿಕೆಗಳು, ನಾಮಪತ್ರ ಸಲ್ಲಿಸುವ ದಿನ ಚಪ್ಪಲಿ ತೂರಿದ್ದು ಜೆಡಿಎಸ್‌ಗೆ ಮುಳುವಾದವು.

ಸಿದ್ದರಾಮಯ್ಯ ಪುತ್ರ ರಾಕೇಶ್‌
ಸಿದ್ದರಾಮಯ್ಯ ಪುತ್ರ ರಾಕೇಶ್‌

ಸ್ವಯಂ ವರ್ಚಸ್ಸಿನ ನಾಯಕ

ವಿಜಯೇಂದ್ರಗೆ ಸಿಎಂ ಯಡಿಯೂರಪ್ಪನವರ ಮಗ ಎಂಬುದು ಕೇವಲ ಬೋನಸ್‌ ಆಗಿದೆ ಅಷ್ಟೆ. ಸದ್ಯ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂಬ ಮಾತುಗಳುಕೇಳಿ ಬಂದಿದ್ದವು. ಆದರೆ, ಯಡಿಯೂರಪ್ಪ ಈ ಎಲ್ಲ ಊಹಾಪೋಹಗಳಿಗೂ ತೆರೆ ಎಳೆದರು.

ಬಳಿಕ, ವಿಜಯೇಂದ್ರ ಮೈಸೂರು ಭಾಗದ ನಾಯಕರೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಂಡು ಪಕ್ಷ ಸಂಘಟನೆಗೆ ಯೋಜನೆ ರೂಪಿಸಿದ್ದರು. ಇದೀಗ ತನ್ನದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ಜೊತೆಗೆ ಮೈಸೂರು ಭಾಗದ ಪ್ರತಿ ಜಿಲ್ಲೆ, ತಾಲ್ಲೂಕು ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ತಂದೆಯಂತೆ ಪ್ರಬಲ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ನಿರೀಕ್ಷಿತ ಯಶಸ್ಸು ಕಾಣದನಾಯಕರು

ಮೈಸೂರು ಭಾಗದ ರಾಜಕೀಯದಲ್ಲಿ ಪ್ರಮುಖ ನಾಯಕರ ಮಕ್ಕಳು ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಆದರೆ, ಹೆಚ್ಚು ಯಶಸ್ಸು ಗಳಿಸಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ರಾಕೇಶ್‌ ಅವರು ನಾಯಕರಾಗಿ ಹೊರಹೊಮ್ಮುವ ಲಕ್ಷಣ ತೋರಿಸಿದರು. ಆದರೆ, 2016ರಲ್ಲಿ ಅಕಾಲಿಕವಾಗಿ ನಿಧನರಾದರು. ಈಗ ಅವರ ಸಹೋದರ ಯತೀಂದ್ರ ವರುಣಾ ಕ್ಷೇತ್ರದ ಶಾಸಕರಾಗಿದ್ದಾರೆ.

ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರ ಪುತ್ರ ಸುನೀಲ್‌ ಬೋಸ್‌ಅವರೂ ಕೂಡ ರಾಜಕೀಯ ಆಕಾಂಕ್ಷಿಯಾಗಿದ್ದರು. ಅವರನ್ನು ಟಿ.ನರಸೀಪುರ ಕ್ಷೇತ್ರದಿಂದ ಕಣಕ್ಕಿಳಿಸಿ,ತಾವು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಮಹಾದೇವಪ್ಪ ಸಿದ್ಧತೆ ನಡೆಸಿದ್ದರು. ಆದರೆ,ದಿಢೀರ್ ರಾಜಕೀಯಬದಲಾವಣೆಯಿಂದಈ ಎಲ್ಲ ಲೆಕ್ಕಾಚಾರಗಳು ಉಲ್ಟಾ ಹೊಡೆದವು.ಸದ್ಯ ಸುನೀಲ್‌, ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.

ಸುನೀಲ್‌ ಬೋಸ್‌
ಸುನೀಲ್‌ ಬೋಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT