ಭಾನುವಾರ, ಫೆಬ್ರವರಿ 28, 2021
31 °C
ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಾಧನೆ

ಧಾರವಾಡದಲ್ಲೂ ಬೆಳೆದ ‘ದೇವರ ಬೆಳೆ’

ಇ.ಎಸ್‌. ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

Deccan Herald

ಧಾರವಾಡ: ಈಶಾನ್ಯ ರಾಜ್ಯಗಳಲ್ಲಿ ‘ದೇವರ ಬೆಳೆ’ ಎಂದೇ ಹೆಸರಾಗಿರುವ ಬಕ್‌ವೀಟ್‌ ತೃಣಧಾನ್ಯವನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾಗಿದೆ. ಇದರೊಂದಿಗೆ ನಮ್ಮ ರಾಜ್ಯದಲ್ಲೂ ಈ ಬೆಳೆ ಬೆಳೆಯುವ ಆಸೆ ಚಿಗುರಿದೆ.

ಅತಿ ಹೆಚ್ಚು ನಾರಿನಂಶ, ಪ್ರೊಟೀನ್‌, ಅಮಿನೊ ಆಮ್ಲ, ಕಬ್ಬಿಣ, ಸತು, ಗಂಧಕ ಹೀಗೆ ಪೌಷ್ಟಿಕಗಳ ಆಗರವಾಗಿರುವ ಈ ಉತ್ಪನ್ನ, ಸದ್ಯ ಅಮೆಜಾನ್‌ನಂತಹ ಆನ್‌ಲೈನ್‌ ಶಾಂಪಿಂಗ್ ತಾಣದಲ್ಲಿ ಮಾತ್ರ ಲಭ್ಯವಾಗುತ್ತಿದೆ. ಪ್ರತಿ 400 ಗ್ರಾಂ.ಗೆ ₹160 ಕೊಟ್ಟು ಗ್ರಾಹಕರು ಖರೀದಿಸುತ್ತಿದ್ದಾರೆ.

ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಡಾ. ಎಸ್‌.ಎ.ದೇಸಾಯಿ ಅವರು 2016ರಿಂದ ಬೆಳೆಯನ್ನು ಪ್ರಾಯೋಗಿಕವಾಗಿ ಬೆಳೆಯಲು ಆರಂಭಿಸಿದರು. ಇವರ ಜತೆ, ಸಂಶೋಧಕರಾದ ಡಾ. ಯು.ಕೆ.ಹುಲಿಹಳ್ಳಿ, ಡಾ. ಸುಮಾ ಬಿರಾದಾರ, ಡಾ. ಉಮಾ ಕುಲಕರ್ಣಿ ಕೈ ಜೋಡಿಸಿದ್ದಾರೆ. ಅಂತಿಮವಾಗಿ, ಈಗ ರಾಜ್ಯದ ಹವಾಗುಣದಲ್ಲೂ ಇದನ್ನು ಬೆಳೆಯಬಹುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

‘ಈಶಾನ್ಯ ರಾಜ್ಯದ ಆದಿವಾಸಿಗಳು ಇದನ್ನು ದೇವರ ಬೆಳೆಯೆಂದೇ ಕರೆಯುತ್ತಾರೆ. ಪ್ರತಿ ವರ್ಷ ಹಬ್ಬಕ್ಕೆ ಇದರ ಸಿಹಿ ತಿನಿಸನ್ನು ದೇವರಿಗೆ ನೈವೇದ್ಯ ಇಡುತ್ತಾರೆ. ಹಿಂದಿಯಲ್ಲಿ ‘ಕುಟ್ಟು’ ಎಂದು ಕರೆಯಲಾಗುತ್ತದೆ. ತಮಿಳುನಾಡಿನ ನೀಲಗಿರಿ ಬೆಟ್ಟ ಪ್ರದೇಶದಲ್ಲೂ ಯಶಸ್ವಿಯಾಗಿ ಬೆಳೆಯಲಾಗಿದೆ’ ಎಂದು ಡಾ. ಹುಲಿಹಳ್ಳಿ ತಿಳಿಸಿದರು.

‘0.5ರಿಂದ 1.5 ಮೀಟರ್ ಎತ್ತರ ಬೆಳೆಯುವ ಇದು ಏಕದಳವೂ ಅಲ್ಲ, ದ್ವಿದಳವೂ ಅಲ್ಲ. ಆದರೆ ಏಕದಳದೊಂದಿಗೆ ಹೋಲಿಕೆ ಮಾಡಬಹುದಾದ ತೃಣಧಾನ್ಯ. ಇದರ ತೆನೆಯನ್ನು ‘ಎಖೀನ್’ ಎಂದು ಕರೆಯುತ್ತಾರೆ. ಬೀಜಗಳು ಕಂದು ಅಥವಾ ಕಪ್ಪು ಬಣ್ಣದ ಗಟ್ಟಿ ಕವಚ ಹೊಂದಿದ್ದು, ತ್ರಿಕೋನಾಕಾರದಲ್ಲಿ ಇರುತ್ತವೆ. 70ರಿಂದ 90 ದಿನಗಳ ಅವಧಿಯ ಬೆಳೆಯಾಗಿದೆ. ಕಡಿಮೆ ಫಲವತ್ತತೆಯ ಭೂಮಿಯಲ್ಲೂ ಬೆಳೆಯಬಹುದು’ ಎಂದು ಅವರು ವಿವರಿಸಿದರು.

‘ಇದರ ಬೇರಿನಲ್ಲಿ ರಂಜಕ ಮತ್ತು ಲಘು ಪೋಷಕಾಂಶಗಳು ಹೇರಳವಾಗಿರುವುದರಿಂದ ಹಿಂಗಾರಿಗೂ ಮೊದಲು ಇದನ್ನು ಬೆಳೆದು ಉಳುಮೆ ಮಾಡಿದರೆ, ಮಣ್ಣಿನ ಸತ್ವ ಹೆಚ್ಚಾಗಲಿದೆ. ಕಡಿಮೆ ನೀರು, ಕಡಿಮೆ ಫಲವತ್ತತೆಯ ಭೂಮಿಯಲ್ಲಿ ಬೆಳೆಯುವುದರಿಂದ ಎಲ್ಲ ರೀತಿಯಿಂದಲೂ ರೈತರಿಗೆ ಲಾಭದಾಯಕ’ ಎಂದು ಅಭಿಪ್ರಾಯಪಟ್ಟರು.

‘ಉದರ ಸಮಸ್ಯೆ ಇರುವವರು ಇದನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಮಧುಮೇಹಿಗಳು ಸಹ ಬಳಸಬಹುದು. ಹಲವು ಬಗೆಯ ಅಲರ್ಜಿ ತಡೆಗಟ್ಟುವ ಸಾಮರ್ಥ್ಯ ಇರುವುದರಿಂದ ಇದನ್ನು ಆಸ್ಪತ್ರೆಯ ಚಿಕಿತ್ಸಾ ದಿಂಬುಗಳ ತಯಾರಿಕೆಯಲ್ಲೂ ಬಳಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಈ ಬೆಳೆ ಬೆಳೆಯುವ ಸಂಬಂಧ ರೈತರನ್ನು ಉತ್ತೇಜಿಸಲು ಯೋಜನೆ ರೂಪಿಸಲಾಗಿದೆ. ಕೃಷಿ ಮೇಳದಲ್ಲಿ ಪ್ರಾಯೋಗಿಕವಾಗಿ ಕೆಲವು ರೈತರಿಗೆ ಬೀಜ ವಿತರಿಸಲಾಗುವುದು’ ಎಂದರು.

ಮಾಹಿತಿಗೆ: ಡಾ.ಯು.ಕೆ.ಹುಲಿಹಳ್ಳಿ – 94488 10902.

*
ಬಕ್‌ವೀಟ್‌ಗೆ ಮಾರುಕಟ್ಟೆ ಸೌಲಭ್ಯ ಇಲ್ಲ. ಆನ್‌ಲೈನ್‌ನಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಖರೀದಿ ಒಪ್ಪಂದದ ಆಧಾರದಲ್ಲಿ ಬೆಳೆಯುವುದು ಸೂಕ್ತ
-ಡಾ. ಯು.ಕೆ.ಹುಲಿಹಳ್ಳಿ, ಸಂಶೋಧಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು