ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50ದಿನಗಳ ಬಳಿಕ ರಸ್ತೆಗಿಳಿದ ಸಾರಿಗೆ ಸಂಸ್ಥೆ ಬಸ್‌; ಗೊಂದಲದಲ್ಲಿ ಪ್ರಯಾಣಿಕ ಸುಸ್ತು

Last Updated 20 ಮೇ 2020, 2:14 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಸುಮಾರು 50 ದಿನಗಳ ಬಳಿಕ ಮಂಗಳವಾರ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿದವು. ಸಾಕಷ್ಟು ಗೊಂದಲ ಮತ್ತು ನಿರ್ಬಂಧಗಳು ಇದ್ದ ಕಾರಣ ದೂರದ ಊರುಗಳಿಗೆ ಜನರು ನಿರುಮ್ಮಳವಾಗಿ ಪ್ರಯಾಣಿಸಲು ಸಾಧ್ಯವಾಗಲಿಲ್ಲ.

ರಾಜ್ಯದಾದ್ಯಂತ ಮೊದಲ ದಿನವೇ ಒಟ್ಟು 1,606 ಬಸ್‌ಗಳಲ್ಲಿ 53,506 ಮಂದಿ ಪ್ರಯಾಣ ಮಾಡಿದರು. ಊರು ಎಷ್ಟೇ ದೂರ ಇದ್ದರೂ ಸಂಜೆ 7 ಗಂಟೆಯ ಒಳಗೇ ತಲುಪಬೇಕು ಎಂಬ ಕರಾರು ವಿಧಿಸಿದ್ದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.

ಬೆಂಗಳೂರು, ಕಲಬುರ್ಗಿ, ಬೆಳಗಾವಿ, ಮಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ಬಹುತೇಕ ದೊಡ್ಡ ನಗರಗಳಿಂದ ಸಮೀಪದ ಊರುಗಳಿಗೆ ಪ್ರಯಾಣಿಕರು ಪ್ರಯಾಣ ಬೆಳೆಸಿದರು. ಹಲವು ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಬಸ್‌ ವ್ಯವಸ್ಥೆ ಇರಲಿಲ್ಲ.

ಕೆಂಪೇಗೌಡ ಬಸ್‌ನಿಲ್ದಾಣದಲ್ಲಿ ಬೆಳಿಗ್ಗೆ 6.30ಕ್ಕೇ ಸಾವಿರಾರು ಜನ ನೆರೆದಿದ್ದರು. ಬಸ್‌ನಲ್ಲಿ 30 ಜನ ಎಂದು ನಿಗದಿ ಮಾಡಿದ್ದರೂ 15ರಿಂದ 20 ಪ್ರಯಾಣಿಕರಷ್ಟೇ ಇದ್ದರು.

ಸುಳಿಯದ ಪ್ರಯಾಣಿಕರು

ಕಲಬುರ್ಗಿ ಮತ್ತು ರಾಯಚೂರು ಸೇರಿ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಬಸ್‌ಗಳನ್ನು ತಂದು ನಿಲ್ಲಿಸಿದ್ದರೂ ಪ್ರಯಾಣಿಕರೇ ಸುಳಿಯಲಿಲ್ಲ. ರಾಯಚೂರುಬಸ್‌ ನಿಲ್ದಾಣದಲ್ಲಿ ಬಳ್ಳಾರಿ, ಗಂಗಾವತಿ, ಕಲಬುರ್ಗಿ ಹಾಗೂ ಸಿಂದಗಿಗೆತೆರಳುವುದಕ್ಕೆ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಜನರು ಬಸ್‌ ಹತ್ತಲೇ ಇಲ್ಲ.ಕಲಬುರ್ಗಿಯಲ್ಲಿ ಪ್ರಯಾಣಿಕರಿಲ್ಲದೇ ಬಸ್‌ಗಳು ಗಂಟೆಗಟ್ಟಲೇ ಕಾದು ನಿಂತವು.

ಇಂದಿನಿಂದ ಸಂಚಾರ ಅವಧಿ ವಿಸ್ತರಣೆ

ಬುಧವಾರದಿಂದ ಬೆಳಿಗ್ಗೆ 7 ರಿಂದ ಸಂಜೆ 7ರವರೆಗೆ ಬಸ್‌ ಸೇವೆ ಇರಲಿದೆ. ಆದರೆ, ದೂರದ ಊರಿನ ಪ್ರಯಾಣಿಕರಿಗೆ ಬೆಂಗಳೂರಿನಿಂದ ಕೊನೆಯ ಬಸ್‌ ಮಧ್ಯಾಹ್ನ 12 ಅಥವಾ 1ರೊಳಗೆ ಹೊರಡುತ್ತಿತ್ತು. ಬುಧವಾರದಿಂದ ಸಂಜೆ 7 ರವರೆಗೂ ಬಸ್‌ ಸೇವೆ ಇರುತ್ತದೆ. ಅಂದರೆ, ಬೆಂಗಳೂರಿನಿಂದ ಬೀದರ್‌ ಅಥವಾ ಕಲಬುರ್ಗಿಗೆ ಸಂಜೆ 7ಕ್ಕೆ ಹೊರಟು, ಮರುದಿನ ಬೆಳಿಗ್ಗೆ ತಲುಪಲಿದೆ.ಬೆಂಗಳೂರಿನಿಂದ ಎಲ್ಲ ಜಿಲ್ಲಾ ಕೇಂದ್ರಗಳಿಗೂ ಸಂಜೆ 7ರವರೆಗೆ ಕೊನೆಯ ಬಸ್‌ ಹೊರಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT