ಸೋಮವಾರ, ಮೇ 17, 2021
30 °C

ಬಿಎಸ್‌ವೈಗೆ 78: ಆಚರಣೆಗೆ ಸಜ್ಜು, ಅಭಿನಂದನಾ ಸಮಾರಂಭಕ್ಕೆ ಗಣ್ಯರಿಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಇದೇ 27 ರಂದು 77 ವರ್ಷ ಪೂರ್ಣಗೊಂಡು 78 ಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ನಗರದ ಅರಮನೆ ಆವರಣದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರ ಕುರಿತಾದ ‘ದಣಿವರಿಯದ ಧೀಮಂತ’ ಅಭಿನಂದನಾ ಗ್ರಂಥ, ‘ಎ ಲೀಡರ್‌ ಹು ಸಾ ಟುಮಾರೋ’ ಹೆಸರಿನ ಚಿತ್ರ ಕೈಪಿಡಿ ಮತ್ತು ‘ಅಪ್ರತಿಮ’ ಎಂಬ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ.

ಅಭಿನಂದನಾ ಗ್ರಂಥದಲ್ಲಿ ಒಟ್ಟು 81 ಲೇಖನಗಳಿದ್ದು, ಚಿದಾನಂದ ಮೂರ್ತಿ, ಹಂಪ ನಾಗರಾಜಯ್ಯ, ಡಾ.ಕಸ್ತೂರಿರಂಗನ್, ಡಿ.ಎಚ್‌.ಶಂಕರಮೂರ್ತಿ, ರಾಮಚಂದ್ರಗೌಡ, ಸು.ರಾಮಣ್ಣ, ರಾಮಾ ಜೋಯಿಸ್‌, ಬಿ.ಎಲ್‌.ಶಂಕರ್‌, ಪಿ.ಜಿ.ಆರ್‌.ಸಿಂಧ್ಯಾ, ವೈ.ಎಸ್‌.ವಿ.ದತ್ತ ಮುಂತಾದವರು ಲೇಖನ ಬರೆದಿದ್ದಾರೆ.

ಚಿತ್ರ ಕೈಪಿಡಿಯಲ್ಲಿ ಯಡಿಯೂರಪ್ಪ ಅವರು ಬಾಲ್ಯದಿಂದ ಹಿಡಿದು ನಾಲ್ಕು ಬಾರಿ ಮುಖ್ಯಮಂತ್ರಿ ಆಗುವ ಹಂತದವರೆಗೆ ತುಳಿದ ಹಾದಿಯನ್ನು ದಾಖಲಿಸಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಬೆಳೆದು ಬಂದ ಪರಿ, ಹೋರಾಟದ ಹಂತಗಳು, ರಾಜಕೀಯ ಬೆಳವಣಿಗೆಯನ್ನು ವಿವಿಧ ಲೇಖಕರು ದಾಖಲಿಸಲಿದ್ದಾರೆ.

ಕಾರ್ಯಕ್ರಮವನ್ನು ಕೇಂದ್ರದ ರಕ್ಷಣಾ ಸಚಿವ ರಾಜನಾಥಸಿಂಗ್ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಬಿಜೆಪಿ ಹಿರಿಯ ನಾಯಕ ಎಸ್‌.ಎಂ.ಕೃಷ್ಣ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭಾಗವಹಿಸಲಿದ್ದಾರೆ. ಕವಿ ಡಾ.ಸಿದ್ದಲಿಂಗಯ್ಯಅಭಿನಂದನಾ ಭಾಷಣ ಮಾಡಲಿದ್ದಾರೆ. ಅರಮನೆ ಆವರಣದ ವೈಟ್‌ ಪೆಟಲ್ಸ್‌ನಲ್ಲಿ ಸಂಜೆ 5 ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು