ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆ: ಶಾಸಕರಲ್ಲೇ ಗೊಂದಲ

ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಗಿರಕಿ ಹೊಡೆಯುತ್ತಿರುವ ಚರ್ಚೆ
Last Updated 19 ಡಿಸೆಂಬರ್ 2018, 19:34 IST
ಅಕ್ಷರ ಗಾತ್ರ

ಬೆಳಗಾವಿ: ಸಂಪುಟ ವಿಸ್ತರಣೆ ನಡೆಯುತ್ತದೆಯೋ ಇಲ್ಲವೋ ಎಂಬ ಸಂಶಯ ಇಲ್ಲಿನ ಸುವರ್ಣ ವಿಧಾನಸೌಧದ ವಿಧಾನಸಭೆಯ ಮೊಗಸಾಲೆ ಯಲ್ಲಿ ಬುಧವಾರ ಗಿರಕಿ ಹೊಡೆಯುತ್ತಿತ್ತು.

ವಿಸ್ತರಣೆ ಜತೆಗೆ ಪುನರ್‌ರಚನೆ ಎಂಬ ‘ಪ್ರಯೋಗ’ವೂ ನಡೆಯಬಹುದು ಎಂದು ಪಕ್ಷದ ರಾಜ್ಯ ನಾಯಕರು ಹೇಳಿರುವುದರಿಂದಾಗಿ ಯಾವ ಪ್ರಕ್ರಿಯೆಯೂ ಈ ವಾರ ನಡೆಯುವುದಿಲ್ಲ. ಇದೆಲ್ಲ ಅತೃಪ್ತರು, ಆಕಾಂಕ್ಷಿಗಳನ್ನು ಅಲ್ಪಕಾಲ ಸಮಾಧಾನಪಡಿಸಲು ಬಿಟ್ಟಿರುವ ಅಸ್ತ್ರ
ವಷ್ಟೇ ಎಂಬ ಮಾತು ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಕುಳಿತಿದ್ದ ಕಾಂಗ್ರೆಸ್ ಶಾಸಕರ ಚರ್ಚೆಯ ಮಧ್ಯೆ ಹರಿದಾಡುತ್ತಿತ್ತು.

ಈಗ ಆಗದೇ ಇದ್ದರೆ ಮತ್ತೆ ಲೋಕಸಭೆ ಚುನಾವಣೆವರೆಗೆ ಆಗುವುದಿಲ್ಲ. ಹೀಗಾಗಿ ಮಾಡಿಯೇ ಮಾಡುತ್ತಾರೆ. ಕಾಂಗ್ರೆಸ್‌ಗೆ ಪಾಲಿಗೆ ಇರುವ ಆರು ಸ್ಥಾನಗಳಪೈಕಿ ಐದನ್ನು ಭರ್ತಿ ಮಾಡುತ್ತಾರೆ ಎಂಬ ಭರವಸೆಯೂ ಮಾತುಕತೆ ಮಧ್ಯೆ ವ್ಯಕ್ತವಾಗುತ್ತಿತ್ತು.

‘ಪುನರ್‌ರಚನೆ ಬೇಡ, ವಿಸ್ತರಣೆಯಷ್ಟೇ ಸಾಕು’ ಎಂದು ಸಿದ್ದರಾಮಯ್ಯ ಸಲಹೆ ನೀಡಿರುವುದಾಗಿಯೂ ವದಂತಿ
ಗಳು ಹರಿದಾಡುತ್ತಿದ್ದವು.

‘ವಿಸ್ತರಣೆಗೆ ಸಕಾಲ. ಈಗಲೇ ಮಾಡಿದರೆ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಹೆಚ್ಚು ಅನುಕೂಲವಾಗಲಿದೆ. ರಾಜ್ಯ ನಾಯಕರಿಗೆ ಮನಸ್ಸಿರಬಹುದು. ಆದರೆ, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಪ್ಪಿಗೆ ನೀಡುವುದು ಅನುಮಾನ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡಗಳಲ್ಲಿ ಸಂಪುಟ ವಿಸ್ತರಣೆಯಾಗುವವರೆಗೆ ಕರ್ನಾಟಕದತ್ತ ಅವರು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಬಳ್ಳಾರಿ ಜಿಲ್ಲೆಯ ಆಕಾಂಕ್ಷಿಯೊಬ್ಬರು ತಿಳಿಸಿದರು.

‘ಕರ್ನಾಟಕದಲ್ಲಿ ಕುಮಾರಸ್ವಾಮಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಸುಗಮವಾಗಿ ನಡೆಯುತ್ತಿದೆ. ರಾಹುಲ್ ಗಾಂಧಿ ಅವರ ದೃಷ್ಟಿ ಈಗ ಏನಿದ್ದರೂ ದೆಹಲಿ(ಕೇಂದ್ರ)ಯಲ್ಲಿ ಪಕ್ಷವನ್ನು ಅಧಿಕಾರಕ್ಕೇರಿಸುವತ್ತ ನೆಟ್ಟಿದೆ. ಈ ಹಂತದಲ್ಲಿ ವಿಸ್ತರಣೆಗೆ ಕೈ ಹಾಕಿದರೆ ಸಮಸ್ಯೆಯನ್ನು ತಂದುಕೊಂಡಂತಾಗುತ್ತದೆ’ ಎಂದು ಬೆಂಗಳೂರು ನಗರದ ಪ್ರಭಾವಿ ಸಚಿವರೊಬ್ಬರು ಹೇಳಿದರು.

ಎಸ್.ಆರ್. ಪಾಟೀಲರಿಗೆ ಸಭಾಪತಿ ಹುದ್ದೆ ತಪ್ಪಿದ ಮೇಲೆ ಉತ್ತರಕ್ಕೆ ಅನ್ಯಾಯವಾಗಿದೆ ಎಂಬ ಕೂಗೆದ್ದಿದೆ. ಹೀಗಾಗಿ ಅವರೊಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದಷ್ಟೆ ಎಂದು ಈ ಭಾಗದ ಶಾಸಕರ ಅಭಿಪ್ರಾಯ.

‘ಇಲ್ಲಿನ ನಾಯಕರು ಏನೇ ಹೇಳಬಹುದು. ಅಂತಿಮವಾಗಿ ರಾಹುಲ್‌ಜಿ ತೀರ್ಮಾನ ಆಗಬೇಕ‌ಲ್ರೀ. ಏನ್ರೀ. ಶನಿವಾರವರೆಗೆ ನೋಡೋಣ’ ಎಂದು ವಿಜಯಪುರ ಜಿಲ್ಲೆಯ ಪ್ರಭಾವಿ ಮುಖಂಡರು ಪ್ರತಿಕ್ರಿಯಿಸಿದರು.

‘ಕೆಪಿಸಿಸಿ ಅಧ್ಯಕ್ಷರಿಗೆ ವಿಸ್ತರಣೆ ಆಗಬೇಕು ಎಂದಿದೆ. ಲೋಕಸಭೆ ಚುನಾವಣೆವರೆಗೆ ಬೇಡ ಎಂಬುದು ಶಾಸಕಾಂಗ ಪಕ್ಷದ ನಾಯಕರ ಭಾವನೆ. ವಿಸ್ತರಣೆ ನಿಜ' ಎಂದು ಈ ಭಾಗದ ಮಹಿಳಾ ಶಾಸಕಿಯೊಬ್ಬರು ಅಭಿಪ್ರಾಯಪಟ್ಟರು.

ಧನುರ್ಮಾಸ ಅಡ್ಡಿ?

ಸಂಪುಟ ವಿಸ್ತರಣೆ ವಿಷಯದಲ್ಲಿ ಆಡಳಿತ ಪಕ್ಷದಲ್ಲಿ ಭಾಗಿದಾರರಾಗಿರುವ ಜೆಡಿಎಸ್ ಶಾಸಕರ ಅಭಿಪ್ರಾಯವೇ ಭಿನ್ನ ರೀತಿಯಲ್ಲಿತ್ತು.

‘ನಮ್ಮ ಪಕ್ಷದಿಂದ ಯಾರು ಆಗುತ್ತಾರೆ ಎಂಬುದನ್ನು ನಿರ್ಧರಿಸುವುದು ದೇವೇಗೌಡರು. ಹಾಗಾಗಿ ನಾವೆಲ್ಲ ಚರ್ಚೆ ಮಾಡಲಿಕ್ಕೆ ಹೋಗುವುದಿಲ್ಲ. ಆದರೆ, ಧನುರ್ಮಾಸ ಮುಗಿಯುವವರೆಗೆ ವಿಸ್ತರಣೆ ನಡೆಯಲು ಸಾಧ್ಯವೇ ಇಲ್ಲ. ಅದಕ್ಕೆ ರೇವಣ್ಣ(ಲೋಕೋಪಯೋಗಿ ಸಚಿವ) ಅವಕಾಶವನ್ನೂ ಕೊಡುವುದೂ ಇಲ್ಲ’ ಎಂದು ನಗುತ್ತಲೇ ಆಡಿಕೊಳ್ಳುತ್ತಿದ್ದರು. ಕಾಂಗ್ರೆಸ್ ಹೈಕಮಾಂಡ್ ಒಪ್ಪಿದರೂ ರೇವಣ್ಣ ಅವರು ದೇವೇಗೌಡರ ಮೂಲಕ ರಾಹುಲ್ ಗಾಂಧಿಗೆ ಹೇಳಿಸುತ್ತಾರೆ. ಜನವರಿ 14ರವರೆಗೆ ಆಗುವುದು ಖಚಿತವಿಲ್ಲ. ಆಮೇಲೆ ಲೋಕಸಭೆ ಚುನಾವಣೆ ನೆವ ಹೇಳಿ ಮುಂದೂಡುವ ಸಾಧ್ಯತೆ ಇದೆ ಎಂದು ಮಾತಾಡಿಕೊಳ್ಳುತ್ತಿದ್ದರು.

ಸಿದ್ದರಾಮಯ್ಯ, ದಿನೇಶ್‌ ದೆಹಲಿಗೆ

ಸಂಪುಟ ವಿಸ್ತರಣೆ ಕುರಿತಂತೆ ಹೈಕಮಾಂಡ್‌ ಜೊತೆ ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಗುರುವಾರ ಸಂಜೆಯೊಳಗೆ ದೆಹಲಿ ತಲುಪಲಿದ್ದಾರೆ. ಶುಕ್ರವಾರ ಬೆಳಿಗ್ಗೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸತೀಶ ಸಿ.ಎಂ ಆಗಬಾರದೇಕೆ?

ಬಾಗಲಕೋಟೆ: ‘ಸತೀಶ ಜಾರಕಿಹೊಳಿ ಏಕೆ ಮುಖ್ಯಮಂತ್ರಿ ಆಗಬಾರದು? ಆ ಸ್ಥಾನದಲ್ಲಿ ಯಾರೋ ಒಬ್ಬರು ಗೂಟ ಹೊಡೆದುಕೊಂಡು ಕೂರುವುದಲ್ಲ.ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡವನು.. ಹೌದುಅವನೂ ಒಂದು ಸಾರಿ ಸಿ.ಎಂ ಆಗಬೇಕು' ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಬಾದಾಮಿಯಲ್ಲಿ ಬುಧವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನೆರೆದವರಲ್ಲಿ ಕೆಲವರು ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು ಎಂದು ಕೂಗಿದರು. ಆಗ ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಅವರೂ ಅದಕ್ಕೆ ದನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ‘ಎಲ್ಲ ಸಮಾಜದವರಿಗೂ ಅವಕಾಶ ಬಂದೇ ಬರುತ್ತದೆ. ನಾವು ಕಾಯಬೇಕು. ಮುಂದಿನ ದಿನಗಳಲ್ಲಿ ನೋಡೋಣ’ ಎಂದರು.

‘ಸಚಿವ ಸ್ಥಾನ ಪಡೆದೇ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಬೇಕು ಎಂದೇನಿಲ್ಲ. ಅದು ಇಲ್ಲದಿದ್ದರೂ ಕೆಲಸ ಮಾಡುವ ಶಕ್ತಿ ಇದೆ. ಸಂಪುಟದಿಂದ ರಮೇಶ ಜಾರಕಿಹೊಳಿ ಕೈಬಿಡುವ ವಿಚಾರ ನನಗಂತೂ ಗೊತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT