ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ ಹಂಚಿಕೆ ಗೊಂದಲ ಸುಖಾಂತ್ಯ; ಮರು ಹಂಚಿಕೆಯಲ್ಲೂ ಸಿದ್ದರಾಮಯ್ಯ ಮೇಲುಗೈ

ಮರು ಹಂಚಿಕೆಯಲ್ಲೂ ಸಿದ್ದರಾಮಯ್ಯ ಮೇಲುಗೈ
Last Updated 28 ಡಿಸೆಂಬರ್ 2018, 20:04 IST
ಅಕ್ಷರ ಗಾತ್ರ

ಬೆಂಗಳೂರು: ಸಂಪುಟ ಪುನಾರಚನೆ ಬಳಿಕ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಉಂಟಾಗಿದ್ದ ಕಗ್ಗಂಟು ಕಾಂಗ್ರೆಸ್ ಹೈಕಮಾಂಡ್‌ ಮಧ್ಯಪ್ರವೇಶದಿಂದ ಕೊನೆಗೂ ಸುಖಾಂತ್ಯ ಕಂಡಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶಿಫಾರಸಿನ ಮೇರೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಶುಕ್ರವಾರ ಅಂಕಿತ ಹಾಕಿದ್ದಾರೆ.

‘ಪ್ರಭಾವಿ’ ಸಚಿವರ ಕೈಯಿಂದ ಖಾತೆ ಕಿತ್ತುಕೊಂಡು ತಮ್ಮ ಆಪ್ತರಿಗೆ ನೀಡುವಲ್ಲಿ ಯಶಸ್ವಿಯಾಗುವ ಮೂಲಕ ಖಾತೆಗಳ ಮರು ಹಂಚಿಕೆ ವಿಷಯದಲ್ಲೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ.

ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ತಮ್ಮ ಬಳಿ ಇದ್ದ ಪ್ರಮುಖ ಹೆಚ್ಚುವರಿ ಖಾತೆಗಳನ್ನು ಬಿಟ್ಟುಕೊಡಲು ನಿರಾಕರಿಸಿದ್ದರು. ಹೀಗಾಗಿ, ಖಾತೆ ಮರು ಹಂಚಿಕೆ ಕಾಂಗ್ರೆಸ್‌ ನಾಯಕತ್ವಕ್ಕೆ ತಲೆನೋವಾಗಿ ಪರಿಣಮಿಸಿತ್ತು.ರಾಜ್ಯ ನಾಯಕರ ಜೊತೆ ಸಮಾಲೋಚನೆ ನಡೆಸಿ ದೆಹಲಿಗೆ ತೆರಳಿದ್ದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಜೊತೆ ಚರ್ಚಿಸಿದ ಬಳಿಕ ಖಾತೆ ಹಂಚಿಕೆ ಪ್ರಕಟಿಸಿದರು. ಈಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಶುಕ್ರವಾರ ಬೆಳಿಗ್ಗೆ ಮುಖ್ಯಮಂತ್ರಿಗೆ ನೀಡಿದರು.

ಗೃಹ ಖಾತೆ ಬಿಟ್ಟು ಕೊಡಲು ಪರಮೇಶ್ವರ ಹಿಂದೇಟು ಹಾಕಿದ್ದರು. ಆದರೆ, ಹೈಕಮಾಂಡ್‌ ಒತ್ತಾಯಕ್ಕೆ ಮಣಿದಿರುವ ಅವರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ ಎಂ.ಬಿ. ಪಾಟೀಲರಿಗೆ ಗೃಹ ಖಾತೆ ನೀಡಲಾಗಿದೆ. ಜಲಸಂಪನ್ಮೂಲ ಖಾತೆ ಬಿಡಲು ಬಿಟ್ಟು ಶಿವಕುಮಾರ್ ಒಪ್ಪಲಿಲ್ಲ. ಹೀಗಾಗಿ, ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಇ. ತುಕಾರಾಂ ಅವರಿಗೆ ನೀಡಲಾಗಿದೆ. ಶಿವಕುಮಾರ್‌ ಅವರಿಗೆ ಕನ್ನಡ ಮತ್ತು ಸಂಸ್ಕೃತಿ, ಖಾತೆ ಹೆಚ್ಚುವರಿಯಾಗಿ ವಹಿಸಲಾಗಿದೆ.

ಆರ್.ವಿ. ದೇಶಪಾಂಡೆ, ಕೃಷ್ಣ ಬೈರೇಗೌಡ, ಯು.ಟಿ. ಖಾದರ್, ಜಮೀರ್ ಅಹ್ಮದ್ ಖಾನ್ ಬಳಿ ಇದ್ದ ಹೆಚ್ಚುವರಿ ಖಾತೆಗಳನ್ನೂ ಮರು ಹಂಚಿಕೆ ಮಾಡಲಾಗಿದೆ.

ಖಾತೆ ಹಂಚಿಕೆ–ಅಸಮಾಧಾನ ಇಲ್ಲ: ಸಿಎಂ

‘ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ನನಗೆ ಯಾವುದೇ ಅಸಮಾಧಾನ ಇಲ್ಲ. ನನ್ನನ್ನು ನೋಡಿದರೆ ಅಸಮಾಧಾನ ಹೊಂದಿರುವಂತೆ ಕಾಣಿಸುತ್ತೇನೆಯೇ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಖಾತೆಗಳ ಹಂಚಿಕೆ ಕುರಿತು ಕಾಂಗ್ರೆಸ್‌ ನಾಯಕರು ಪಟ್ಟಿಯನ್ನು ಕಳುಹಿಸಿದ್ದಾರೆ. ಅದನ್ನು ರಾಜ್ಯಪಾಲರಿಗೆ ಕಳುಹಿಸಿದ್ದೇನೆ’ ಎಂದರು.

‘ಒಪ್ಪಂದದ ಪ್ರಕಾರ ಸರ್ಕಾರ ನಡೆಯುತ್ತಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಒಬ್ಬೊಬ್ಬರು ಒಂದೊಂದು ರೀತಿ ಚರ್ಚೆ ಮಡುತ್ತಾರೆ. ಅದಕ್ಕೆಲ್ಲ ನಾನು ಜವಾಬ್ದಾರಿ ಹೊರಲು ಆಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT