ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮದ ಹೆಸರಲ್ಲಿ ಮೋಡಿ ಮಾಡಿದ ಖಾನ್‌’

Last Updated 11 ಜೂನ್ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ಕೋಟಿಗಟ್ಟಲೆ ಷೇರು ಸಂಗ್ರಹಿಸಿ ಪಂಗನಾಮ ಹಾಕಿರುವ ‘ಐಎಂಎ ಜ್ಯುವೆಲ್ಸ್’ ಕಂಪನಿ ಮಾಲೀಕ ಮಹಮದ್‌ ಮನ್ಸೂರ್‌ ಖಾನ್‌ ಧರ್ಮದ ಹೆಸರಿನಲ್ಲಿ ಗ್ರಾಹಕರನ್ನು ಮೋಡಿ ಮಾಡುತ್ತಿದ್ದರು. ಯಾವ ಕಾರಣಕ್ಕೂ ಮೋಸ ಆಗುವುದಿಲ್ಲ ಎಂದು ನಂಬಿ ಜನ ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದೆ.

‘ಹೂಡಿಕೆ ಮಾಡಲು ಕಂಪನಿ ಕಚೇರಿಗೆ ಬರುತ್ತಿದ್ದ ಗ್ರಾಹಕರಿಗೆ ಕುರಾನ್‌ ಗ್ರಂಥಗಳನ್ನು ಕೊಡಲಾಗುತಿತ್ತು. ಇದಕ್ಕಾಗಿ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯ ಗ್ರಂಥಗಳನ್ನು ಇಡಲಾಗಿತ್ತು. ಮೌಲ್ವಿಗಳಿಂದ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗುತಿತ್ತು. ಹೂಡಿಕೆದಾರ
ರನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಹೀಗೆ ಮಾಡಲಾಗುತ್ತಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಐಎಂಎ 2006ರಲ್ಲೇ ಆರಂಭವಾಗಿದ್ದರೂ 2015ರವರೆಗೂ ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಹೂಡಿಕೆಗೆ ಆಕರ್ಷಕ ಲಾಭ ಕೊಡುವುದಾಗಿ ಮುಸ್ಲಿಂರಿಂದ ಷೇರು ಸಂಗ್ರಹಿಸಿ ವಿವಿಧ ಉದ್ಯಮಗಳನ್ನು ಆರಂಭಿಸಿದ್ದರು’.

‘ಹೂಡಿಕೆಗೆ ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಯೋಜನೆಗಳನ್ನು ರೂಪಿಸಲಾಗಿತ್ತು. ನಿಗದಿತ ಅವಧಿ ಬಳಿಕ ಸುಲಭವಾಗಿ ಹಣ ವಾಪಸ್‌ ಪಡೆಯಬಹುದು ಎಂದು ಹೇಳಲಾಗುತಿತ್ತು. ನಿಮ್ಮ ಹಣವನ್ನು ನಮ್ಮ ವ್ಯವಹಾರದಲ್ಲಿ ತೊಡಗಿಸಿ, ಸಮೃದ್ಧಿಯ ದಾರಿ ತುಳಿಯಿರಿ’ ಎಂದೂ ಪ್ರಚಾರ ಮಾಡಲಾಗುತ್ತಿತ್ತು’ ಎಂದೂ ಮೂಲಗಳು ವಿವರಿಸಿವೆ.

ಕಂಪನಿ ಚಿನ್ನ, ಬೆಳ್ಳಿ ಗಟ್ಟಿ ವ್ಯಾಪಾರ ಮಾಡುತ್ತಿದೆ. ವಹಿವಾಟು ಭರಾಟೆಯಿಂದ ನಡೆಯುತ್ತಿದೆ ಎಂದು ಹೇಳಿ ಕೆಲವರಿಗೆ ಮಾಸಿಕ ಶೇ 7ರಷ್ಟು ಬಡ್ಡಿ ಪಾವತಿಸಿತ್ತು. ಈ ಬೆಳವಣಿಗೆಯು ಹೂಡಿಕೆಗೆ ಜನ ಮುಗಿಬೀಳುವಂತೆ ಮಾಡಿತು. ಆದರೆ, ಇದು ಬಹಳ ಕಾಲ ಉಳಿಯಲಿಲ್ಲ. ಕೆಲವೇ ದಿನಗಳಲ್ಲಿ ಶೇ 7ರಿಂದ 5ಕ್ಕೆ ಇಳಿಯಿತು. ಬಳಿಕ ಶೇ 3ಕ್ಕೆ ಕುಸಿಯಿತು. ಕಳೆದ ಏಪ್ರಿಲ್‌ನಲ್ಲಿ ಶೇ 1 ರಷ್ಟು ಲಾಭಾಂಶ ಮಾತ್ರ ಸಿಕ್ಕಿತು. ಮೇ ತಿಂಗಳಲ್ಲಿ ಏನೂ ಸಿಗದಿದ್ದಾಗ ಹೂಡಿಕೆದಾರರು ಆತಂಕಕ್ಕೊಳಗಾದರು. ಅನೇಕರು ಹಣ ವಾಪಸ್‌ ಕೊಡುವಂತೆ ತಾಕೀತು ಮಾಡಿದರು.

‘ಹೂಡಿಕೆದಾರರು ಹಣ ವಾಪಸ್‌ ಬರುವುದಿಲ್ಲ ಎಂದು ಆತಂಕಪಡುವ ಅಗತ್ಯವಿಲ್ಲ. ಕಂಪನಿಯ ಆರ್ಥಿಕ ಸ್ಥಿತಿ ಚೆನ್ನಾಗಿದೆ. ನೋಟು ಅಮಾನ್ಯೀಕರಣ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಣಕಾಸು ವಹಿವಾಟಿನ ಮೇಲೆ ಆಯೋಗ ನಿಗಾ ಇಟ್ಟಿರುವುದರಿಂದ ತಾತ್ಕಾಲಿಕವಾಗಿ ಕೊಂಚ ಸಮಸ್ಯೆಯಾಗಿದೆ. ಈ ನಡುವೆ ಶೇ 70ರಷ್ಟು ಹೂಡಿಕೆದಾರರಿಗೆ ಲಾಭಾಂಶ ವಿತರಿಸಲಾಗಿದೆ. ಮಿಕ್ಕವರಿಗೂ ಸದ್ಯದಲ್ಲೇ ನೀಡಲಾಗುವುದು’ ಎಂದು ಕಂಪನಿ ಇತ್ತೀಚೆಗೆ ಹೇಳಿತ್ತು.

‘ಜೂನ್‌ 5ರಿಂದ ರಂಜಾನ್‌ ಪ್ರಯುಕ್ತ ಕಂಪನಿ ಕಚೇರಿ ಮುಚ್ಚಲಾಗುತ್ತಿದೆ’ ಎಂದು ಶಿವಾಜಿನಗರದ ಕಚೇರಿ ಮುಂದೆ ಫಲಕ ಹಾಕಲಾಯಿತು. ಅನಂತರ ಬಾಗಿಲು ತೆರೆಯಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT