ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: 385 ಬಾಲೆಯರ ವಿವಾಹಕ್ಕೆ ಬ್ರೇಕ್ !

ವಿವಾಹ ಮರೆಮಾಚಲು ಪೋಷಕರ ಕಸರತ್ತು
Last Updated 16 ಜುಲೈ 2019, 19:51 IST
ಅಕ್ಷರ ಗಾತ್ರ

ಹಾವೇರಿ: ಬಡತನ, ಸಾಲದ ಶೂಲ, ತವರಿನ ನೆಂಟಸ್ತಿಕೆ ಉಳಿಸಿಕೊಳ್ಳುವ ನಿಲುವು, ಅಸುರಕ್ಷತೆಯ ಭಾವ–ಇಂತಹ ಕಾರಣಗಳಿಂದ ಜಿಲ್ಲೆಯಲ್ಲಿ 13 ರಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳ ವಿವಾಹ ಪ್ರಕರಣಗಳು ಹೆಚ್ಚುತ್ತಿದ್ದು, ಮೂರೂವರೆ ವರ್ಷದಲ್ಲಿ 385 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ.

ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ಚೈಲ್ಡ್‌ ರೈಟ್ಸ್‌) 262 ಮಕ್ಕಳ ಮದುವೆಗಳನ್ನು ನಿಲ್ಲಿಸಿದ್ದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ 123 ಮಕ್ಕಳನ್ನು ರಕ್ಷಿಸಿದ್ದಾರೆ.

ಮಕ್ಕಳ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿರುವಚೈತನ್ಯ ಸಂಸ್ಥೆಗೆ, ಮಕ್ಕಳ ದೌರ್ಜನ್ಯ ಸಂಬಂಧಮೂರೂವರೆ ವರ್ಷದಲ್ಲಿ 2,026 ಕರೆಗಳು ಬಂದಿವೆ. ಅದರಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ದೂರುಗಳೇ ಹೆಚ್ಚಿವೆ.

ಇಲ್ಲಿ ತಡೆದರೆ, ಅಲ್ಲಿ ಮದುವೆ: ‘ಕಾನೂನಿನ ಬಗ್ಗೆ ಅರಿವು ಇದ್ದವರೂ ಈ ಅನಿಷ್ಟ ಪದ್ಧತಿಯಿಂದ ಹೊರತಾಗಿಲ್ಲ. ಮಗಳ ಮದುವೆಗೆ ಇಲ್ಲಿನ ಅಧಿಕಾರಿಗಳು ಅಡ್ಡಿಯಾಗಬಹುದೆಂದು ಗೋವಾ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಕರೆದೊಯ್ದು ಗುಟ್ಟಾಗಿ ಮದುವೆ ಮಾಡಿಸಿ ವಾಪಸ್ ಕರೆ ತರುತ್ತಿದ್ದಾರೆ. ಈ ಆರು ತಿಂಗಳಲ್ಲಿ ಅಂತಹ ಎರಡು ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದು, ಇಡೀ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಚೈಲ್ಡ್‌ ರೈಟ್ಸ್‌ ನಿರ್ದೇಶಕ ಮಜೀದ್, ‘ಮಕ್ಕಳ ರಕ್ಷಣೆಗೆ ಸಂಬಂಧಿಸಿ ತಿಂಗಳಿಗೆ ಕನಿಷ್ಠ 60 ಕರೆಗಳು ಬರುತ್ತವೆ. ವಿವಾಹ ಮರೆಮಾಚುವ ಉದ್ದೇಶದಿಂದ ಆಮಂತ್ರಣ ಪತ್ರಿಕೆ ಮುದ್ರಿಸದೇ, ಚಪ್ಪರ ಹಾಕಿಸದೇ ರಾತ್ರೋರಾತ್ರಿ ಮದುವೆ ಮಾಡಿದ ನಿದರ್ಶನಗಳೂ ಇವೆ’ ಎಂದರು.

‘ಈ ವರ್ಷ 33 ಬಾಲ್ಯ ವಿವಾಹಗಳನ್ನು ತಡೆದಿದ್ದೇವೆ. ಅಲ್ಲದೇ, ‘18 ವರ್ಷ ತುಂಬುವ ಮೊದಲೇ ಮಗಳ ಮದುವೆ ಮಾಡುವುದಿಲ್ಲ‌’ ಎಂದು ಪೋಷಕರಿಂದ ಬಾಂಡ್ ಬರೆಸಿಕೊಂಡು ಎಚ್ಚರಿಕೆ ನೀಡಿದ್ದೇವೆ. ಸಂತ್ರಸ್ತ ಬಾಲಕಿ ಹಾಗೂ ಪೋಷಕರಿಗೆ ಆಪ್ತ ಸಮಾಲೋಚನೆ ಮಾಡಿಸಿ, ಕಾನೂನಿನ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ’ ಎಂದರು.

**

ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೆ ಜನ 1098 ಅಥವಾ 100 ಸಂಖ್ಯೆಗೆ ಕರೆ ಮಾಡಬೇಕು. ಹೆಸರು ಗೋಪ್ಯವಾಗಿಟ್ಟು ಮಗುವನ್ನು ಕಾಪಾಡುತ್ತೇವೆ
- ಪಿ.ವೈ.ಶೆಟ್ಟಪ್ಪನವರ, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT