ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಇಬ್ಬರು ಸಾವು; 11 ಜನ ಅಸ್ವಸ್ಥ

Last Updated 26 ಜನವರಿ 2019, 20:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಂತಾಮಣಿಯ ನರಸಿಂಹಪೇಟೆಯ ಗಂಗಮ್ಮ ದೇವಾಲಯದ ಬಳಿ ಶುಕ್ರವಾರ ಸಂಜೆ ಭಕ್ತರೊಬ್ಬರು ವಿತರಣೆ ಮಾಡಿದ್ದ ಪ್ರಸಾದ ಸೇವಿಸಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, 11 ಮಂದಿ ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಗಂಗಮ್ಮದೇವಿಗೆ ಹರಕೆ ಹೊತ್ತವರು ಶುಕ್ರವಾರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ವಿತರಿಸುವುದು ವಾಡಿಕೆ. ಅದರಂತೆ ಸ್ಥಳೀಯ ಮಹಿಳೆಯೊಬ್ಬರು ಶುಕ್ರವಾರ ಸಂಜೆ ದೇವಾಲಯದ ಬಳಿ ವಿತರಿಸಿದ ಪ್ರಸಾದವನ್ನು (ಕೇಸರಿ ಬಾತ್‌) ಶ್ರೀರಾಮಪುರ ನಿವಾಸಿಗಳಾದ, ನೆರೆಹೊರೆ ಮನೆಯವರಾದ ರಾಜಾ ಮತ್ತು ನಾರಾಯಣಮ್ಮ ಎಂಬುವರು ಮನೆಗೆ ತೆಗೆದುಕೊಂಡು ಹೋಗಿ ಕುಟುಂಬದ ಸದಸ್ಯರಿಗೆ ನೀಡಿದ್ದರು.

ಈ ಇಬ್ಬರ ಕುಟುಂಬಗಳಲ್ಲಿ ಪ್ರಸಾದ ಸೇವಿಸಿದ 10 ಜನರಿಗೆ ರಾತ್ರಿ ಏಕಾಏಕಿ ವಾಂತಿ–ಬೇಧಿ ಕಾಣಿಸಿಕೊಂಡಿತ್ತು. ಆ ಪೈಕಿ ರಾಜು (40), ಅವರ ಪತ್ನಿ ರಾಧಾ (35), ರಾಜು ಅವರ ಸಹೋದರ ಗಂಗಾಧರ್‌ (35), ಗಂಗಾಧರ್ ಪತ್ನಿ ಕವಿತಾ (30) ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಬಳಿಕ ಕೋಲಾರದ ಎಸ್‌ಎನ್ಆರ್ ಆಸ್ಪತ್ರೆಗೆ ದಾಖಲಾದರು.

ಬೆಳಿಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಆರ್.ಎಲ್‌.ಜಾಲಪ್ಪ ಆಸ್ಪತ್ರೆಗೆ ರಾಜು ಕುಟುಂಬದವರನ್ನು ಸ್ಥಳಾಂತರಿಸಲಾಯಿತು. ಈ ಪೈಕಿ ಜಾಲಪ್ಪ ಆಸ್ಪತ್ರೆಯಲ್ಲಿ ಕವಿತಾ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ನಾರಾಯಣಮ್ಮ ಅವರ ಕುಟುಂಬದಲ್ಲಿ ಅವರೂ ಸೇರಿದಂತೆ ಶಿವಾ, ವೆಂಕಟರಾಯಪ್ಪ, ಕವಿತಾ ಎಂಬುವರು ಅಸ್ವಸ್ಥಗೊಂಡಿದ್ದಾರೆ. ಅವರಲ್ಲಿ ಸದ್ಯ ಇಬ್ಬರು ಚಿಂತಾಮಣಿಯ ಡೆಕ್ಕನ್‌ ಆಸ್ಪತ್ರೆ ಮತ್ತು ಚಿಂತಾಮಣಿ ಮತ್ತು ಚೇಳೂರು ಸರ್ಕಾರಿ ಆಸ್ಪತ್ರೆಗಳಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ರಾತ್ರಿ ಶಿಡ್ಲಘಟ್ಟ ತಾಲ್ಲೂಕಿನ ಗಡಿಮುಂಚೇನಹಳ್ಳಿಯ ನಿವಾಸಿ ಸರಸ್ವತಮ್ಮ ಚಿಂತಾಮಣಿಗೆ ಮಗಳ ಮನೆಗೆ ಬಂದಿದ್ದರು. ಜಾಲಪ್ಪ ಆಸ್ಪತ್ರೆಯ ಐಸಿಯುನಲ್ಲಿ ಗಂಗಾಧರ್‌ ಮತ್ತು ಅವರ ಮಕ್ಕಳಾದ ಗಾನವಿ (7), ಶರಣ್ಯ (5), ರಾಜು ಅವರ ಪತ್ನಿ ರಾಧಾ (25) ದಾಖಲಾಗಿದ್ದಾರೆ.

ವಿಚಾರಣೆ: ಚಿಂತಾಮಣಿಯ ನಗರ ಠಾಣೆ ಪೊಲೀಸರು, ಅರ್ಚಕರು ಹಾಗೂ ದೇವಾಲಯದ ಕಸ ಗುಡಿಸುವವರು ಕೆಲ ಮಹಿಳೆಯರು ಸೇರಿ ಸುಮಾರು 12 ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಷ ಬೆರೆತಿರುವ ಸಾಧ್ಯತೆ ಇಲ್ಲ: ‘ಭಕ್ತರು ಸೇವಿಸಿದ ಪ್ರಸಾದದಲ್ಲಿ ವಿಷ ಬೆರೆತಿರುವ ಸಾಧ್ಯತೆ ಇಲ್ಲ’ ಎಂದು ಆರ್‌.ಎಲ್‌. ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಎಂ.ಎಸ್.ಲಕ್ಷ್ಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

12 ಜನರ ವಿಚಾರಣೆ

ಚಿಂತಾಮಣಿ ನಗರ ಠಾಣೆ ಪೊಲೀಸರು ಅರ್ಚಕರು, ದೇವಾಲಯದ ಕಸ ಗುಡಿಸುವವರು, ಕೆಲ ಮಹಿಳೆಯರು ಸೇರಿದಂತೆ ಸುಮಾರು 12 ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

‘ನಾವು ಸಂಶಯದ ಮೇಲೆ ಕೆಲವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸುತ್ತಿದ್ದೇವೆ. ಈವರೆಗೆ ಯಾರನ್ನೂ ಬಂಧಿಸಿಲ್ಲ. ವಿಚಾರಣೆ ಮುಂದುವರಿಸಿದ್ದೇವೆ. ಯಾರನ್ನೆಲ್ಲ ವಿಚಾರಣೆಗೆ ಒಳಪಡಿಸಿದ್ದೇವೆ ಎನ್ನುವುದನ್ನು ಬಹಿರಂಗಪಡಿಸುವುದು ಸಾಧ್ಯವಿಲ್ಲ’ ಎಂದು ಚಿಂತಾಮಣಿ ಡಿವೈಎಸ್ಪಿ ಶ್ರೀನಿವಾಸ್ ತಿಳಿಸಿದರು.

ಮಹಿಳೆ ಪೊಲೀಸ್‌ ವಶಕ್ಕೆ

‘ಗಂಗಮ್ಮದೇವಿಗೆ ಹರಕೆ ಹೊತ್ತಿದ್ದ ಸ್ಥಳೀಯ ನಿವಾಸಿ ಲಕ್ಷ್ಮೀ ಎಂಬುವವರು ಮನೆಯಲ್ಲಿ ಪ್ರಸಾದ ಸಿದ್ಧಪಡಿಸಿಕೊಂಡು ದೇವಾಲಯಕ್ಕೆ ಬಂದಿದ್ದರು. ಅವರ ಮನೆಯಲ್ಲಿ ಕೆಲಸ ಮಾಡುವ ಅಮರಾವತಿ ಎಂಬುವವರು ಭಕ್ತರಿಗೆ ಪ್ರಸಾದ ಹಂಚಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಎಸ್ಪಿ ಕಾರ್ತಿಕ್‌ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT