ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿಯಿಂದ 16,121 ದೂರುಗಳಿಗೆ ಕ್ಲೀನ್ ಚಿಟ್!

ಲೋಕಾಯುಕ್ತದ ಪೊಲೀಸ್ ತನಿಖಾಧಿಕಾರ ಕಿತ್ತುಕೊಂಡ ಸಂಸ್ಥೆಯ 4 ವರ್ಷಗಳ ಕಾರ್ಯವೈಖರಿ ಅಚ್ಚರಿ
Last Updated 22 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಾಯುಕ್ತಕ್ಕೆ ನೀಡಿದ್ದ ಪೊಲೀಸ್ ತನಿಖಾಧಿಕಾರ ಕಿತ್ತುಕೊಂಡು ಸಿದ್ದರಾಮಯ್ಯ ಸರ್ಕಾರ ಸ್ಥಾಪಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಾಲ್ಕು ವರ್ಷಗಳಲ್ಲಿ ನೇರವಾಗಿ ಸ್ವೀಕರಿಸಿದ್ದ ಮತ್ತು ಲೋಕಾಯುಕ್ತದಿಂದ ಬಂದ ದೂರುಗಳಲ್ಲಿ 16,121ಕ್ಕೆ ಕ್ಲೀನ್‌ ಚಿಟ್ ನೀಡಿದೆ.

ನೇರವಾಗಿ ಸ್ವೀಕರಿಸಿದ್ದ ದೂರುಗಳಲ್ಲಿ 14,750ನ್ನು ಎಸಿಬಿ ಮುಕ್ತಾಯಗೊಳಿಸಿದೆ. ಅವುಗಳ ಪೈಕಿ, ಸಾಬೀತಾಗಿಲ್ಲ, ಅನಾಮಧೇಯ, ಗುಪ್ತನಾಮದಿಂದ ಬಂದವುಗಳು ಹೀಗೆ ನಾನಾ ಕಾರಣ ನೀಡಿ ಮುಕ್ತಾಯಗೊಳಿಸಿದ 7,829 ದೂರುಗಳಲ್ಲಿ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪ್ರಭಾವಿ ರಾಜಕಾರಣಿಗಳು, ಹಲವು ಐಎಎಸ್ ಅಧಿಕಾರಿಗಳ ವಿರುದ್ಧದ ದೂರುಗಳು ಸಾಕಷ್ಟಿವೆ.

ಉಳಿದಂತೆ, 6,921 ದೂರುಗಳು ತನಗೆ ಸಂಬಂಧ ಇಲ್ಲದವು ಎಂದು ವಿವಿಧ ಇಲಾಖೆಗಳಿಗೆ ವರ್ಗಾಯಿಸಿ ಎಸಿಬಿ ಕೈ ತೊಳೆದುಕೊಂಡಿದೆ. ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಎಸಿಬಿ ರಚನೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್‌ ಅರ್ಜಿಗಳ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಅಂತಿಮ ಹಂತದಲ್ಲಿದೆ. ಹೈಕೋರ್ಟ್ ನಿರ್ದೇಶನದಂತೆ ಎಸಿಬಿ, ತನ್ನ ಈವರೆಗಿನ ಕಾರ್ಯವೈಖರಿ ಮಾಹಿತಿ ಕುರಿತಂತೆ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಮಾ.20ರಂದು ವಿಚಾರಣೆ ನಡೆಯಬೇಕಿತ್ತು. ಆದರೆ, ‘ಕೋವಿಡ್ 19’ ಭೀತಿ ಹಿನ್ನೆಲೆಯಲ್ಲಿ ಏ.15ಕ್ಕೆ ವಿಚಾರಣೆ ಮುಂದೂಡಲಾಗಿದೆ.

2016ರ ಮಾರ್ಚ್ 14ರಂದು ರಾಜ್ಯ ಸರ್ಕಾರ ಎಸಿಬಿ ರಚಿಸಿತು. ಅಂದಿನಿಂದ, ತನ್ನ ಬಳಿಗೆ ಬಂದ, ಎಫ್ಐಆರ್ ದಾಖಲಿಕೊಂಡು ತನಿಖೆ ನಡೆಸಲು ಅರ್ಹವಾದ ದೂರುಗಳನ್ನು ಎಸಿಬಿಗೆ ಲೋಕಾಯುಕ್ತ ಕಳುಹಿಸುತ್ತಿದೆ. ಅಂತಹ 1,534 ದೂರುಗಳನ್ನು ಈವರೆಗೆ ಲೋಕಾಯುಕ್ತ ಪೊಲೀಸ್ ಘಟಕದಿಂದ ಎಸಿಬಿ ಸ್ವೀಕರಿಸಿದೆ. ಈ ಪೈಕಿ, ವಿಚಾರಣೆಯಲ್ಲಿ ಆರೋಪ ಸಾಬೀತಾಗಿಲ್ಲ ಎಂದು 926 ದೂರುಗಳಿಗೆ ಎಸಿಬಿ ತಿಲಾಂಜಲಿ ನೀಡಿದೆ. 29 ಪ್ರಕರಣಗಳಲ್ಲಿ ಮಾತ್ರ ಎಫ್ಐಆರ್ ದಾಖಲಿಸಿದೆ. ಎಂಟು ಪ್ರಕರಣಗಳಲ್ಲಿ ಇಲಾಖಾ ವಿಚಾರಣೆಗೆ ಶಿಫಾರಸು ಮಾಡಿದರೆ, 445 ಪ್ರಕರಣಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ವರ್ಗಾಯಿಸಿದೆ. 126 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ.

‘ಲೋಕಾಯುಕ್ತ ಕಾಯ್ದೆಯ ಕಲಂ 14ರ ಅನ್ವಯ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಅವಕಾಶವಿದೆ. ಈ ಕಾರಣಕ್ಕೆ ಲೋಕಾಯುಕ್ತ ಕಚೇರಿಗಳನ್ನು ಪೊಲೀಸ್ ಠಾಣೆಗಳೆಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದನ್ನು ಹಿಂಪಡೆದು ಸರ್ಕಾರ, ಮುಖ್ಯಮಂತ್ರಿ ಅಡಿಯಲ್ಲಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ನಿಯಂತ್ರಣದಲ್ಲಿ
ಎಸಿಬಿ ರಚಿಸುವ ಮೂಲಕ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಕಿತ್ತುಕೊಂಡಿದೆ’ ಎನ್ನುವ ವಾದವನ್ನು ರಿಟ್ ಅರ್ಜಿಯಲ್ಲಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT