ಮಂಗಳವಾರ, ಆಗಸ್ಟ್ 3, 2021
28 °C
ಪ್ರಧಾನಿ ಮೋದಿ ‘ಉಕ್ಕಿನ ಮನುಷ್ಯ’

ದೇಶ ನಿರ್ಮಾಣಕ್ಕೆ ಸಮರ್ಪಿತ ಅಪರೂಪದ ವ್ಯಕ್ತಿ ಪ್ರಧಾನಿ ಮೋದಿ: ಬಿ.ಎಸ್‌.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಕಟ್ಟುವ ಕಾಯಕಕ್ಕೆ ತನ್ನನ್ನು ತಾನೇ ಸಮರ್ಪಿಸಿಕೊಂಡ ‘ಉಕ್ಕಿನ ಮನುಷ್ಯ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವ್ಯಾಖ್ಯಾನಿಸಿದ್ದಾರೆ.

ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಒಂದು ವರ್ಷದಲ್ಲಿ ಮಾಡಿದ ಸಾಧನೆಗಳನ್ನು ಶ್ಲಾಘಿಸಿದರು.

ರೈತರು, ಕಾರ್ಮಿಕರು, ಸಣ್ಣ ಪುಟ್ಟ ಅಂಗಡಿಗಳನ್ನು ನಡೆಸುವವರು ಮತ್ತು ಅಸಂಘಟಿತ ವಲಯಕ್ಕೆ ಮಾಸಿಕ ಪಿಂಚಣಿ, ಪ್ರಧಾನಮಂತ್ರಿ  ಕಿಸಾನ್‌ ಸಮ್ಮಾನ್‌ ನಿಧಿಯನ್ನು ಜಾರಿ ತರುವ ಮೂಲಕ ಸಮಾಜದ ಅತ್ಯಂತ ಬಡವರನ್ನು ಸಂಕಷ್ಟದಿಂದ ಮೇಲಕ್ಕೆತ್ತುವ ಕೆಲಸ ಮಾಡಿದ್ದಾರೆ.

ಕಳೆದ 70 ವರ್ಷಗಳಲ್ಲಿ ಯಾವುದೇ ಸರ್ಕಾರ ಮಾಡದಿರುವ ಸಾಧನೆಗಳು ಮಾಡಿದೆ. ಜಮ್ಮುಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಜಮ್ಮು–ಕಾಶ್ಮೀರ ಮತ್ತು ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದರು.

ದೇಶದ ಜನತೆ ಮೋದಿಯವರ ಆಡಳಿತದ ಮೇಲೆ ವಿಶ್ವಾಸವಿಟ್ಟು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 303 ಸ್ಥಾನಗಳನ್ನು ಮತ್ತು ಎನ್‌ಡಿಎಗೆ  352 ಸ್ಥಾನಗಳನ್ನು ಗೆಲ್ಲಿಸಿದರು. ಕರ್ನಾಟಕದಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೂ ಮೋದಿ ಅಲೆಯಲ್ಲಿ ಕೊಚ್ಚಿ ಹೋದರು. ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಬಿಜೆ‍ಪಿ 25 ನ್ನು ಗೆದ್ದುಕೊಂಡಿತು ಎಂದು ಯಡಿಯೂರಪ್ಪ ಹೇಳಿದರು.

ಪ್ರಮುಖ ಅಂಶಗಳು

* 2ನೇ ಅವಧಿಯ ಪ್ರಾರಂಭದಲ್ಲೆ ದೇಶದ ಪ್ರಜಾತಂತ್ರ ವ್ಯವಸ್ಥೆಯ ಚರಿತ್ರೆಯಲ್ಲಿ ಸುವರ್ಣ ಅಧ್ಯಾಯವನ್ನು ಪ್ರಾರಂಭಿಸಿದರು.

* ಹಲವಾರು ದಶಕಗಳಿಂದ ದೇಶದ ಜನತೆ ನಿರೀಕ್ಷೆ ಮಾಡಿದ್ದ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟಿನಿಂದ ತೀರ್ಪು ಪಡೆಯುವುದರಲ್ಲಿ ಪ್ರಧಾನಿಯವರು ನಡೆಸಿದ ಕಾನೂನು ಸಮರ, ಸಹನೆ ಹಾಗೂ ಚಾಣಕ್ಯ ತಂತ್ರಗಾರಿಕೆಯನ್ನು ದೇಶದ ಜನತೆಯ ಪ್ರಶಂಸಿದ್ದಾರೆ.

*ದೇಶದ ಭದ್ರತೆಗಾಗಿ ಸೇನೆಯ ಮೂರು ವಿಭಾಗಗಳಿಗೂ ಒಬ್ಬರೇ ದಂಡನಾಯಕನನ್ನು ನೇಮಿಸಿದ್ದು ದೇಶದ ರಕ್ಷಣೆಗೆ ನೀಡಿದ ಮಹತ್ವದ ಕೊಡುಗೆ

* ಶತ ಶತಮಾನಗಳಿಂದ ಆಚರಣೆಯಲ್ಲಿದ್ದ ತ್ರಿವಳಿ ತಲಾಖ್ ಪದ್ದತಿಯನ್ನು ರದ್ದು ಮಾಡಿ ಮುಸ್ಲಿಂ ಸಮುದಾಯದಲ್ಲಿನ ಹೀನ ಸಂಪ್ರದಾಯಕ್ಕೆ ಮಂಗಳ ಹಾಡಿದರು

* ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾಯ್ದೆಯನ್ನು ಜಾರಿ ಮಾಡಿ ಉಗ್ರರ ನಿಗ್ರಹಕ್ಕೆ ಮತ್ತು ಅವರ ಬೆಂಬಲಕ್ಕೆ ಇದ್ದ ಸವಲತ್ತುಗಳನ್ನು ನಿಗ್ರಹ ಮಾಡಿದರು

* ಸಣ್ಣ ಪುಟ್ಟ ಬ್ಯಾಂಕ್‌ಗಳನ್ನು ಸೇರಿಸಿ ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ವಿಲೀನ ಮಾಡುವುದರ ಮೂಲಕ ಬ್ಯಾಂಕ್‌ಗಳ ಸುಧಾರಣೆ ಮತ್ತು ವಸೂಲಾಗದ ಸಾಲಗಳಿಂದ ಬ್ಯಾಂಕುಗಳಿಗೆ ಮುಕ್ತಿ ಹಾಗೂ ಬ್ಯಾಂಕುಗಳ ಅನಗತ್ಯ ವೆಚ್ಚವನ್ನು ತಗ್ಗಿಸಿದರು

* ಕಂದಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಮಕ್ಕಳ ದೌರ್ಜನ್ಯ ಕಠಿಣ ಕಾಯ್ದೆ ರೂಪಿಸಿದರು

* ದೇಶದ ಏಕತೆಗಾಗಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನ ಮಾನದ 370 ನೇ ವಿಧಿಯನ್ನು ರದ್ದುಪಡಿಸಿ, ಜಮ್ಮು ಕಾಶ್ಮೀರದ ಆಡಳಿತವನ್ನು ರಾಷ್ಟ್ರೀಯ ಆಡಳಿತಕ್ಕೆ ಒಳಪಡಿಸಿ ಸರ್ವತೋಮುಖ ಅಭಿವೃದ್ಧಿಗೆ ದಿಟ್ಟ ಹೆಜ್ಜೆಯನ್ನು ತೆಗೆದುಕೊಂಡ ಉಕ್ಕಿನ ನಾಯಕ

* ವಿದೇಶದಲ್ಲಿ ನೆಲೆ ಇಲ್ಲದ ನಿರಾಶ್ರಿತರಿಗೆ ಆಶ್ರಯ ನೀಡಲು ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಅಭಯ ಹಸ್ತ ಚಾಚಿದ್ದಾರೆ

* ದೇಶದ ವಿಭಜನೆ ಸಂದರ್ಭದಲ್ಲಿ ಭಾರತದಿಂದ ಅನಿವಾರ್ಯವಾಗಿ ನೆರೆ ರಾಷ್ಟ್ರಗಳಿಗೆ ವಲಸೆ ಹೋಗಿ ನಿರಾಶ್ರಿತರಾಗಿ ಭಾರತಕ್ಕೆ ಹಿಂದುರುಗಿದ ಭಾರತೀಯರಿಗೆ ಇದು ಜೀವ ರಕ್ಷಕ ಕಾಯ್ದೆಯಾಗಿದೆ

* ವಾಹನ ಅಪಘಾತ ತಗ್ಗಿಸಲು ಹೊಸ ಮೋಟಾರು ಕಾಯ್ದೆ ಜಾರಿ ಮಾಡಿದರು. ದೇಶದಲ್ಲಿ ಸುಮಾರು 5 ಲಕ್ಷ ಅಪಘಾತಗಳಿಂದ ಸುಮಾರು 1.5 ಲಕ್ಷ ಪ್ರಾಣ ಕಳೆದುಕೊಳ್ಳುತ್ತಿರುವ ವಾಹನ ಚಾಲಕರ ಕುಟುಂಬಕ್ಕೆ ರಕ್ಷಣೆ ಕಾಯ್ದೆಯಾಗಿದೆ

* ಈ ಕಾಯ್ದೆಗಳ ಜೊತೆಗೆ ರೈತರ ಮತ್ತು ಸಾಮಾನ್ಯ ಜನರ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.  ಅವುಗಳಲ್ಲಿ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ 3 ಕಂತುಗಳಲ್ಲಿ ರೈತರಿಗೆ ₹ 6000 ಸಹಾಯಧನ, ಅಟಲ್ ಭೂ ಜಲ ಯೋಜನೆ, ಜಲ ಸಂರಕ್ಷಣೆ, ಜಲ ಜೀವನ ಮಿಷನ್ ಯೋಜನೆ ಜಾರಿ ಮಾಡಿದರು.

* ರೈತರಿಗೆ, ಕಾರ್ಮಿಕರಿಗೆ, ಸಣ್ಣ ಬೀದಿ ವ್ಯಾಪಾರಿಗಳಿಗೆ, ಅಸಂಘಟಿತ ಕಾರ್ಮಿಕ ವರ್ಗಕ್ಕೆ ಪಿಂಚಣಿ ಯೋಜನೆ ಜಾರಿ ಮಾಡಿದ್ದಾರೆ.

* ದೇಶವನ್ನು ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಮುಕ್ತಿಗೊಳಿಸಲು ಕಾರ್ಯಕ್ರಮಗಳನ್ನು ನೀಡಿದ್ದಾರೆ.
* ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕತೆ ಸೃಷ್ಟಿಸಲು ಕಾರ್ಪೋರೇಟ್ ತೆರಿಗೆಯಲ್ಲಿ ಭಾರಿ ತೆರಿಗೆ ತಗ್ಗಿಸಲಾಗಿದೆ.

* ವಲಸಿಗ ಕಾರ್ಮಿಕರ ಅನುಕೂಲಕ್ಕಾಗಿ ಅಂತರರಾಜ್ಯ ಪಡಿತರ ಚೀಟಿ ಪೋರ್ಟಿಬಿಲಿಟಿ ಜಾರಿ ಮಾಡಿ 1 ದೇಶ 1 ರೇಷನ್ ಕಾರ್ಡ್ ಜಾರಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು