ಧರ್ಮಸ್ಥಳ ‌ಮಂಜುನಾಥ ಸ್ವಾಮಿ ದರ್ಶನ ಪಡೆದ ಮುಖ್ಯಮಂತ್ರಿ

7

ಧರ್ಮಸ್ಥಳ ‌ಮಂಜುನಾಥ ಸ್ವಾಮಿ ದರ್ಶನ ಪಡೆದ ಮುಖ್ಯಮಂತ್ರಿ

Published:
Updated:

ಮಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಂದೆ ಎಚ್.ಡಿ.ದೇವೇಗೌಡ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಸೋಮವಾರ ರಾತ್ರಿ ಧರ್ಮಸ್ಥಳದ ಮಂಜುನಾಥ ಸ್ವಾಮಿ‌ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಮುಖ್ಯಮಂತ್ರಿಯಾದ ಬಳಿಕ ಇದು ಅವರ ಮೊದಲ ಧರ್ಮಸ್ಥಳ ಭೇಟಿ. ನಿಯೋಜಿತ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇಲ್ಲಿಗೆ ಬಂದು ದೇವರ ದರ್ಶನ ಪಡೆದಿದ್ದರು.

ಸೋಮವಾರ ಭಾರಿ ಮಳೆಯ ನಡುವೆಯೇ ಮುಖ್ಯಮಂತ್ರಿ ಕುಟುಂಬ ರಸ್ತೆ ಮಾರ್ಗವಾಗಿ ಧರ್ಮಸ್ಥಳ ತಲುಪಿತು. ಶಿರಾಡಿ ಘಾಟಿ ಮಾರ್ಗದಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿರುವ ಕಾರಣದಿಂದ ಚಾರ್ಮಾಡಿ ಘಾಟಿ ಮಾರ್ಗವಾಗಿ ಧರ್ಮಸ್ಥಳ ತಲುಪಿದರು.

ಸಂಜೆ 7.30ಕ್ಕೆ ಧರ್ಮಸ್ಥಳ ತಲುಪಿದ ಕುಮಾರಸ್ವಾಮಿ ದಂಪತಿ ಸನ್ನಿಧಿ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆದರು. ರಾತ್ರಿ 9 ಗಂಟೆಗೆ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಕುಮಾರಸ್ವಾಮಿ ಅವರೊಂದಿಗೆ ತಂದೆ, ತಾಯಿ ಚನ್ನಮ್ಮ, ಪತ್ನಿ ಅನಿತಾ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸೇರಿದಂತೆ ಹಲವರು ಇದ್ದರು. ಡಿ.ಹರ್ಷೇಂದ್ರಕುಮಾರ್ ಮತ್ತು ದೇವಳದ ಸಿಬ್ಬಂದಿ ದೇವಾಲಯದ ಎದುರಿನಲ್ಲಿ ಮುಖ್ಯಮಂತ್ರಿ ಕುಟುಂಬದವರಿಗೆ ಸ್ವಾಗತ ನೀಡಿದರು.

ದೇವರ ದರ್ಶನದ ನಂತರ ಕ್ಷೇತ್ರದ ಧರ್ಮಾಧಿಕಾರಿ ನಿವಾಸಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದರು.

ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರು ಧರ್ಮಸ್ಥಳದಲ್ಲಿ ದರ್ಶನ ಮುಗಿಸಿ ರಾತ್ರಿಯೇ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳಬೇಕಿತ್ತು. ಆದರೆ, ಭಾರಿ ಮಳೆಯ ಕಾರಣದಿಂದ ಪ್ರವಾಸ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ರಾತ್ರಿ ಧರ್ಮಸ್ಥಳದಲ್ಲೇ ತಂಗಲಿರುವ ಅವರು ಮಂಗಳವಾರ ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವರು. ಅಲ್ಲಿ ಕೆಲವು ವಿಶೇಷ ಪೂಜೆಗಳನ್ನು ಸಲ್ಲಿಸಲಿದ್ದಾರೆ.

ಭಾರಿ ಭದ್ರತೆ: ಮುಖ್ಯಮಂತ್ರಿಯವರ ಭೇಟಿ ಕಾರಣದಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಮತ್ತು ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ದಕ್ಷಿಣ ಕನ್ನಡ ಎಸ್ ಪಿ ಡಾ.ಬಿ.ಆರ್. ರವಿಕಾಂತೇಗೌಡ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.

ಮುಖ್ಯಮಂತ್ರಿ ಭೇಟಿ ಕಾರಣದಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ದರ್ಶನ ಪಡೆಯಲು ಅವಕಾಶ ನೀಡಲಿಲ್ಲ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !