ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಪ್ರದೇಶದ ಅಕ್ರಮ ಮಳಿಗೆಗಳಿಗೆ ಶೀಘ್ರದಲ್ಲೇ ಬೀಗ| ಪಾಲಿಕೆ ಭರವಸೆ

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ವಿರುದ್ಧ ತ್ವರಿತ ಕ್ರಮ
Last Updated 22 ಜೂನ್ 2019, 19:05 IST
ಅಕ್ಷರ ಗಾತ್ರ

ಬೆಂಗಳೂರು: ವಸತಿ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಣಿಜ್ಯ ಚಟುವಟಿಕೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಭರವಸೆ ನೀಡಿದೆ.

‘ವಸತಿ ಪ್ರದೇಶಗಳಲ್ಲಿ ಅಕ್ರಮವಾಗಿ ವಹಿವಾಟು ನಡೆಸುತ್ತಿರುವ ಉದ್ದಿಮೆಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಲಿದ್ದೇವೆ. ಇಂತಹ ಉದ್ದಿಮೆಗಳನ್ನು ಎಷ್ಟು ದಿನಗಳ ಒಳಗೆ ಮುಚ್ಚಿಸುತ್ತೇವೆ ಎಂಬ ಬಗ್ಗೆ ಹೈಕೋರ್ಟ್‌ಗೂ ಇನ್ನೆರಡು ದಿನಗಳಲ್ಲಿ ಅಫಿಡವಿಟ್‌ ಸಲ್ಲಿಸಲಿದ್ದೇವೆ’ ಎಂದು ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತ ಜಿ.ಎಂ.ರವೀಂದ್ರ ತಿಳಿಸಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ವಸತಿ ಪ್ರದೇಶಗಳ ವಾಣಿಜ್ಯೀಕರಣದ ಸುತ್ತ ಚರ್ಚೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ತಡೆಯಲು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುವಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಇಲ್ಲದಿರುವುದನ್ನು ಅವರು ಒಪ್ಪಿಕೊಂಡರು.

‘ಪರಿಣಾಮಕಾರಿ ಕಾರ್ಯಾಚರಣೆಗೆ ಈಗ ಸಮಯ ಕೂಡಿ ಬಂದಿದೆ. ಈ ಕುರಿತು ಸಲ್ಲಿಕೆ ಆಗಿರುವ ಸಾರ್ವಜನಿಕ ಹಿತಾಸಕ್ತಿ ದಾವೆ ಸಂಬಂಧ ನಾವು ಹೈಕೋರ್ಟ್‌ಗೆ ವಿವರಣೆ ನೀಡಬೇಕಾಗಿದೆ. ಪಾಲಿಕೆಯ ಆರೋಗ್ಯ ವಿಭಾಗ, ಪೊಲೀಸ್‌ ಇಲಾಖೆ, ಮತ್ತು ಅಬಕಾರಿ ಇಲಾಖೆಗಳ ಪ್ರಮುಖರು, ಸರ್ಕಾರಿ ವಕೀಲರು ಹಾಗೂ ಪಾಲಿಕೆಯ ಕಾನೂನು ಸಲಹೆಗಾರರ ತಂಡದ ಜೊತೆ ಸಮಾಲೋಚನೆ ನಡೆಸಿ ಅಕ್ರಮವಾಗಿ ನಡೆಯುತ್ತಿರುವ ಉದ್ದಿಮೆಗಳನ್ನು ಮುಚ್ಚಿಸುವ ಕುರಿತು ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದರು.

‘ಅಕ್ರಮ ವಾಣಿಜ್ಯ ಚಟುವಟಿಕೆ ತಡೆಯುವ ಕೆಲಸ ಈಗಲೂ ನಡೆಯುತ್ತಿದೆ. ಆದರೆ, ವೇಗ ಕಡಿಮೆ ಇದೆ. ಎಲ್ಲ ಅಧಿಕಾರಿಗಳು ವೇಗ ಹೆಚ್ಚಿಸಿ ಆದಷ್ಟು ಬೇಗ ಉತ್ತಮ ಫಲಿತಾಂಶ ಕಾಣುತ್ತೇವೆ’ ಎಂದು ಭರವಸೆ ನೀಡಿದರು.

ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ, ‘ವಾಣಿಜ್ಯ ಚಟುವಟಿಕೆಯನ್ನು ದಿಢೀರ್‌ ನಿಲ್ಲಿಸಲು ಸಾಧ್ಯವಿಲ್ಲ. ಕ್ರಮ ತೆಗೆದುಕೊಳ್ಳುವ ಮುನ್ನ ಸಹಜ ನ್ಯಾಯ ಪಾಲಿಸುವ ಸಲುವಾಗಿ ಅವರಿಗೆ ನೋಟಿಸ್‌ ನೀಡಬೇಕು. ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದರಿಂದಾಗಿ ಪ್ರಕ್ರಿಯೆ ವಿಳಂಬವಾಗುತ್ತಿದೆ’ ಎಂದರು.

‘2014ರಲ್ಲಿ ನಗರದಲ್ಲಿ ಪರವಾನಗಿ ಪಡೆದ 58 ಸಾವಿರ ಉದ್ದಿಮೆಗಳಿದ್ದವು. ಈಗ ಅವುಗಳ ಸಂಖ್ಯೆ 41ಸಾವಿರಕ್ಕೆ ಇಳಿದಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೆಚ್ಚುವರಿ ಕೆಲಸದ ಒತ್ತಡದ ನಡುವೆಯೂ 400ಕ್ಕೂ ಅಧಿಕ ಉದ್ದಿಮೆಗಳನ್ನು ಮುಚ್ಚಿಸಿದ್ದೇವೆ. ಸಾರ್ವಜನಿಕರಿಂದ ಬಂದ ದೂರುಗಳ ಆಧಾರದಲ್ಲಿ ಇಂದಿರಾನಗರ ಹಾಗೂ ಕೋರಮಂಗಲ ಪ್ರದೇಶದಲ್ಲಿ ಬಹಳಷ್ಟು ಉದ್ದಿಮೆಗಳಿಗೆ ಬೀಗ ಹಾಕಿಸಿದ್ದೇವೆ. ಕ್ರಮೇಣ ಎಲ್ಲ ಕಡೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಿಕರು, ‘ನೀವು ಮುಚ್ಚಿಸಿದ ಉದ್ದಿಮೆಗಳು ಮತ್ತೆ ಆರಂಭವಾಗಿದೆ’ ಎಂದರು.

‘ನಾವು ಉದ್ದಿಮೆ ಮುಚ್ಚಿಸಿದರೆ, ಆ ಕಟ್ಟಡವನ್ನು ಮಾಲೀಕರು ಬೇರೆಯವರಿಗೆ ಬಾಡಿಗೆಗೆ ಕೊಡುತ್ತಾರೆ. ಅಲ್ಲಿ ಇನ್ನೊಂದು ಉದ್ದಿಮೆ ಆರಂಭವಾಗುತ್ತದೆ. ಕಟ್ಟಡದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ. ಪ್ಲೇ–ಸ್ಕೂಲ್‌, ಬ್ಯಾಂಕ್‌ ಸೇರಿದಂತೆ ಹಲವಾರು ರೀತಿಯ ವಾಣಿಜ್ಯ ಚಟುವಟಿಕೆಗೆ ಪಾಲಿಕೆಯ ಪರವಾನಗಿ ಅಗತ್ಯವಿಲ್ಲ. ಹಾಗಾಗಿ ಇಂತಹವುಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗುತ್ತಿಲ್ಲ’ ಎಂದು ಕಾನೂನು ತೊಡಕುಗಳ ಬಗ್ಗೆ ಮನೋರಂಜನ್‌ ಹೆಗ್ಡೆ ವಿವರಿಸಿದರು.

‘ಉತ್ತಮ ಯೋಜನೆ–ಕಟ್ಟುನಿಟ್ಟಿನ ಅನುಷ್ಠಾನವೇ ಪರಿಹಾರ’
‘ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ಮಹಾನಗರಗಳು ಎದುರಿಸುವ ದೊಡ್ಡ ಸಮಸ್ಯೆ. ಇದರಿಂದಾಗಿ ವಾಯುಮಾಲಿನ್ಯ, ಶಬ್ದ ಮಾಲಿನ್ಯದ ಜೊತೆಗೆ, ಪಾರ್ಕಿಂಗ್‌ ಸಮಸ್ಯೆಗಳನ್ನು ಜನರು ಅನುಭವಿಸುವಂತಾಗಿದೆ. ಉತ್ತಮ ನಗರ ಯೋಜನೆ ರೂಪಿಸುವುದು ಮತ್ತು ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದೇ ಈ ಸಮಸ್ಯೆಗೆ ಪರಿಹಾರ’ ಎಂದು ನಗರ ಯೋಜನಾ ತಜ್ಞ ವಿ. ರವಿಚಂದರ್‌ ಸಲಹೆ ನೀಡಿದರು.

ವಿ. ರವಿಚಂದರ್
ವಿ. ರವಿಚಂದರ್

‘ಪರಿಷ್ಕೃತ ನಗರ ಮಹಾ ಯೋಜನೆ–2015’ರಲ್ಲಿ ಮ್ಯುಟೇಷನ್‌ ಕಾರಿಡಾರ್‌ ಕಲ್ಪನೆ ಪರಿಚಯಿಸಿದ್ದೇ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ. ಈ ಕಲ್ಪನೆಯ ಪರಿಣಾಮದಿಂದಲೇ ವಸತಿ ಪ್ರದೇಶಗಳಲ್ಲಿ ಉದ್ದಿಮೆಗಳು ತಲೆ ಎತ್ತಿವೆ. ಈ ಮೊದಲು, ಇಂತಹ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕಾದವರು ಹಲವು ಪರವಾನಗಿ ಪಡೆಯಬೇಕಿತ್ತು ಎಂದು ಅವರು ವಿವರಿಸಿದರು.

‘ಸಮುದಾಯ ಮತ್ತು ಸರ್ಕಾರ ಒಗ್ಗೂಡಿ ಕಾರ್ಯನಿರ್ವಹಿಸಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. 40 ಅಡಿಗಿಂತ ಕಡಿಮೆ ಅಗಲದ ರಸ್ತೆಯಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸುವ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (ಒ.ಸಿ) ನೀಡಬಾರದು’ ಎಂದರು.

‘ನಿರ್ದಿಷ್ಟ ರಸ್ತೆಗಳ ಬದಿಯಲ್ಲಿ ವಾಹನ ನಿಲುಗಡೆ ಮಾಡಲು ಹೆಚ್ಚಿನ ಶುಲ್ಕ ವಿಧಿಸಬೇಕು. ಇದರಿಂದ ಸರ್ಕಾರಕ್ಕೆ ಆದಾಯವೂ ಬರುತ್ತದೆ, ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವುದೂ ಪ್ರಮಾಣವೂ ಕಡಿಮೆಯಾಗುತ್ತದೆ’ ಎಂದು ಅವರು ಸಲಹೆ ನೀಡಿದರು.

‘ಆರ್‌ಎಂಪಿ–2015ರಂತೆ ವಲಯ ರಚಿಸಿ’
‘2015ರ ಪರಿಷ್ಕೃತ ನಗರ ಮಹಾಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ವಸತಿ, ವಾಣಿಜ್ಯ, ಕೈಗಾರಿಕಾ, ಸಾರ್ವಜನಿಕ ಮತ್ತು ಅರೆ ಸರ್ಕಾರಿ, ಸಂಚಾರ ಮತ್ತು ಸಾರಿಗೆ, ಸಾರ್ವಜನಿಕ ಬಳಕೆ ವಲಯ, ಉದ್ಯಾನ ಮತ್ತು ಬಯಲು ಪ್ರದೇಶ, ಅವರ್ಗೀಯ ಹಾಗೂ ಕೃಷಿ ಭೂಮಿ ಎಂಬ ವಲಯಗಳನ್ನು ಸರಿಯಾಗಿ ಗುರುತಿಸುವ ಕಾರ್ಯವಾಗಬೇಕಿದೆ’ ಎಂದು ‘ಐ ಚೇಂಜ್‌ ಇಂದಿರಾನಗರ’ ಸಂಸ್ಥೆ ಸದಸ್ಯೆ ಸ್ವರ್ಣಾ ವೆಂಕಟರಾಮನ್‌ ಸಲಹೆ ಒತ್ತಾಯಿಸಿದರು.

ಸ್ವರ್ಣಾ ವೆಂಕಟರಾಮನ್
ಸ್ವರ್ಣಾ ವೆಂಕಟರಾಮನ್

‘ಇಂದಿರಾನಗರದಲ್ಲಿ ಶೇ 98ರಷ್ಟು ಉದ್ದಿಮೆಗಳು ಪರವಾನಗಿ ಹೊಂದಿಲ್ಲ. ಅಂಥವರಿಗೆ ನೋಟಿಸ್‌ ನೀಡುವ ಕೆಲಸವಾಗಿಲ್ಲ. ಅಂದರೆ, ಈ ಪ್ರದೇಶದಲ್ಲಿ ಕಾನೂನಿನ ಅನುಷ್ಠಾನವೇ ಆಗಿಲ್ಲ’ ಎಂದು ಅವರು ದೂರಿದರು.

‘ವ್ಯಾಪಾರ ಪರವಾನಗಿ ಹೊಂದಿರದೆ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರನ್ನು ಗುರುತಿಸಿ ನೋಟಿಸ್‌ ನೀಡಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳೆಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘3 ಷರತ್ತು ಒಪ್ಪಿದರೆ ಮಾತ್ರ ಪರವಾನಗಿ’
‘ಉದ್ದಿಮೆ ಪರವಾನಗಿಗೆ ಅಥವಾ ಪರವಾನಗಿ ನವೀಕರಣಕ್ಕಾಗಿ ಬರುವ ಪ್ರತಿ ಕಡತವನ್ನೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಅವರಿಗೆ ಕಳುಹಿಸಿ ಎಲ್ಲ ಷರತ್ತು ಪಾಲಿಸಲಾಗಿದೆಯೇ ಎಂದು ಪರಿಶೀಲಿಸುತ್ತೇವೆ. ಎಇಇ ವರದಿ ಪೂರಕವಾಗಿದ್ದರೆ, ಕಸ ವಿಲೇವಾರಿ ಸಂಬಂಧ ಉದ್ದಿಮೆಯು ಸಂಬಂಧಪಟ್ಟ ಸಂಸ್ಥೆ ವಿರುದ್ಧ ಒಪ್ಪಂದ ಮಾಡಿಕೊಂಡಿದ್ದರೆ ಹಾಗೂ ಪ್ಲಾಸ್ಟಿಕ್‌ ಉತ್ಪನ್ನ ಬಳಸುವುದಿಲ್ಲ ಎಂದು ದೃಢೀಕರಣ ನೀಡಿದ್ದರೆ ಮಾತ್ರ ಪರವಾನಗಿ ನೀಡುತ್ತೇವೆ’ ಎಂದು ರವೀಂದ್ರ ತಿಳಿಸಿದರು.

‘2019ರ ಫೆಬ್ರುವರಿಯಿಂದ ಇದುವರೆಗೆ ಉದ್ದಿಮೆ ಪರವಾನಗಿ ನವೀಕರಣಕ್ಕಾಗಿ ನನ್ನ ಬಳಿ 1,500 ಅರ್ಜಿಗಳು ಬಂದಿವೆ. ಮೂರು ಷರತ್ತು ಪಾಲಿಸದ ಕಾರಣಕ್ಕೆ 1,400 ಅರ್ಜಿಗಳನ್ನು ತಿರಸ್ಕರಿಸಿದ್ದೇನೆ. ಪೂರ್ವ ವಲಯದಲ್ಲಿ ಷರತ್ತು ಉಲ್ಲಂಘಿಸಿರುವ 939 ಉದ್ದಿಮೆಗಳ ವಿದ್ಯುತ್‌ ಸಂಪರ್ಕ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂ ಹಾಗೂ ಜಲಮಂಡಳಿಗೆ ಪತ್ರ ಬರೆದಿದ್ದೇನೆ’ ಎಂದು ಅವರು ತಿಳಿಸಿದರು

‘ಪಾಲಿಕೆ ಅಧಿಕಾರಿಗಳು ಇನ್ನಷ್ಟು ಚುರುಕಾಗಬೇಕು’
‘ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ತಡೆಯಲು ಪಾಲಿಕೆ ಏನೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸರಿಯಲ್ಲ. ಇಂದಿರಾನಗರ ಹಾಗೂ ಕೋರಮಂಗಲ ಭಾಗದಲ್ಲಿ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ಸಂಪೂರ್ಣ ನಿಂತಿಲ್ಲ ನಿಜ. ಆದರೆ, ಅದಕ್ಕೆ ಕಾರಣಗಳೂ ಇವೆ. ಕೆಲವೊಮ್ಮೆ ಪಾಲಿಕೆ ಅಧಿಕಾರಿಗಳು ಉದ್ದಿಮೆಗಳನ್ನು ಮುಚ್ಚಿಸಿದರೂ ಗುಟ್ಟಾಗಿ ಮತ್ತೆ ಅವುಗಳನ್ನು ತೆರೆಯುತ್ತಾರೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಕೆಲವು ಅಧಿಕಾರಿಗಳು ಇನ್ನಷ್ಟು ಚುರುಕಾಗಬೇಕು’ ಎಂದು ಮೇಯರ್‌ ಗಂಗಾಂಬಿಕೆ ಹೇಳಿದರು.

‘ಜನರ ದೈನಂದಿನ ಅಗತ್ಯಗಳನ್ನು ಪೂರೈಸುವ ಹಾಲಿನ ಅಂಗಡಿ, ಪ್ರಾವಿಜನಲ್‌ ಸ್ಟೋರ್‌, ತರಕಾರಿ ಅಂಗಡಿಗಳನ್ನು ಮುಚ್ಚಿಸುವುದರಲ್ಲಿ ಅರ್ಥವಿಲ್ಲ. ರಸ್ತೆಗಳ ಅಗಲ 40 ಅಡಿಗಿಂತ ಕಡಿಮೆ ಇರುವ ಕಡೆ ಪಬ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ದೊಡ್ಡ ಪ್ರಮಾಣದ ಅಂಗಡಿಗಳನ್ನು ತೆರೆಯಬೇಕಾಗಿಲ್ಲ. ಇಂತಹವುಗಳ ಪರವಾನಗಿ ರದ್ದುಪಡಿಸುವಂತೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಕಾರ್ಯವನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ನಿರ್ವಹಿಸಬೇಕು’ ಎಂದರು.

ಮೇಯರ್‌ ಗಂಗಾಂಬಿಕೆ ಅವರು ಜಂಟಿ ಆಯುಕ್ತ ರವೀಂದ್ರ ಜತೆ ಚರ್ಚಿಸಿದರು
ಮೇಯರ್‌ ಗಂಗಾಂಬಿಕೆ ಅವರು ಜಂಟಿ ಆಯುಕ್ತ ರವೀಂದ್ರ ಜತೆ ಚರ್ಚಿಸಿದರು

ಪ್ರಶ್ನೆಗಳ ಸರಮಾಲೆ
* ಹೈಕೋರ್ಟ್‌ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರೂವಸತಿ ಪ್ರದೇಶದಲ್ಲಿರುವ ಉದ್ದಿಮೆಗಳ ವಿರುದ್ಧ ಕ್ರಮ ಕೈಗೊಂಡಿಲ್ಲವೇಕೆ?
* ರಸ್ತೆಗಳಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸುವುದರ ವಿರುದ್ಧವೂ ಕ್ರಮವಿಲ್ಲವೇಕೆ?
* ನಗರದ ಸ್ಥಳೀಯ ಆಡಳಿತ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆ ಬಗೆಹರಿಯುವುದು ಯಾವಾಗ?
* ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯದವರ ವಿರುದ್ಧ ಕ್ರಮವಿಲ್ಲವೇಕೆ?
* ಲ್ಯಾವೆಲ್ಲೆ ರಸ್ತೆ–ರಿಚ್ಮಂಡ್‌ ವೃತ್ತದ ನಡುವೆ 40 ಶಾಲೆಗಳು ಇವೆ. ಇವುಗಳಲ್ಲಿ ಪಾರ್ಕಿಂಗ್‌ ಸ್ಥಳವಿಲ್ಲ, ಆಟದ ಮೈದಾನವಿಲ್ಲ. ನಿಯಮ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕ್ರಮವಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT