ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಫಲ್ಯ ಮುಚ್ಚಿ ಹಾಕಲು ಭಾವನಾತ್ಮಕ ವಿಚಾರ ಪ್ರಸ್ತಾಪಿಸುವ ಮೋದಿ: ಆರ್.ವಿ. ಸುದರ್ಶನ

Last Updated 16 ಏಪ್ರಿಲ್ 2019, 13:52 IST
ಅಕ್ಷರ ಗಾತ್ರ

ಹಾವೇರಿ:ಭದ್ರತೆ ಹಾಗೂ ಆಡಳಿತದಲ್ಲಿನ ವೈಫಲ್ಯ ಹಾಗೂ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಆದರೆ, 2014ರ ಭರವಸೆಗಳನ್ನೇ ಈಡೇರಿಸದ ಅವರ ಮಾತಿಗೆ ಪ್ರಬುದ್ಧ ಜನತೆ ಮತ್ತೊಮ್ಮೆ ಮರಳಾಗುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಆರ್.ವಿ. ಸುದರ್ಶನ ಹೇಳಿದರು.

‘ಸೇನಾಧಿಕಾರಿಗಳು ಭದ್ರತೆ ಕೇಳಿದ್ದರೂ, ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರೂ ಪುಲ್ವಾಮಾದಲ್ಲಿ ನಮ್ಮ ಸೈನಿಕರಿಗೆ ಯಾಕೆ ರಕ್ಷಣೆ ನೀಡಲಿಲ್ಲ’ ಎಂದು ಪ್ರಶ್ನಿಸಿದ ಅವರು, ‘ಕಾರ್ಗಿಲ್‌ಗೆ ಪಾಕ್ ಸೇನೆ ನುಗ್ಗಿದ್ದು, ಕಂದಾಹಾರ್‌ನಲ್ಲಿ ಭಯೋತ್ಪಾದಕರನ್ನು ಬಿಟ್ಟದ್ದು, ಉರಿ, ಪಠಾಣ್‌ ಕೋಟ್ ಮೇಲೆ ದಾಳಿ, ಅಕ್ಷರಧಾಮ, ರಘುನಾಥ ದೇಗುಲ, ಅಮರನಾಥ ಯಾತ್ರಿಗಳ ಮೇಲೆ ದಾಳಿ ನಡೆದಿರುವುದೆಲ್ಲ ಬಿಜೆಪಿಯ ಆಡಳಿತದಲ್ಲಿ. ಇವರಿಂದ ದೇಶದ ಭದ್ರತೆ ಸಾಧ್ಯವೇ? ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ಎರಡು ಸರ್ಜಿಕಲ್ ಸ್ಟ್ರೈಕ್ ನಡೆದಿದ್ದರೆ, ಮನಮೋಹನ್ ಸಿಂಗ್ ಅವಧಿಯಲ್ಲಿ ಆರು ಸೇರಿದಂತೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 13 ಸರ್ಜಿಕಲ್ ಸ್ಟ್ರೈಕ್‌ಗಳು ನಡೆದಿವೆ. ಆದರೆ, ಕಾಂಗ್ರೆಸ್ ಎಂದಿಗೂ ಸೈನಿಕರ ಶ್ರೇಯಸ್ಸನ್ನು ರಾಜಕೀಯವಾಗಿ ಬಳಸಿಕೊಂಡಿಲ್ಲ ಎಂದರು.

ಕಾಂಗ್ರೆಸ್ ಅವಧಿಯಲ್ಲಿ ಭಾರತವು ನಾಲ್ಕು ಯುದ್ಧಗಳನ್ನು ಗೆದ್ದಿದ್ದರೆ, ಮೋದಿ ಅವಧಿಯಲ್ಲಿ ಭಯೋತ್ಪಾದಕರ ದಾಳಿಯೇ ಹೆಚ್ಚಾಗಿದೆ. ಸೇನೆಯ ಅನುದಾನವನ್ನೂ ಕಡಿತಗೊಳಿಸಿದ್ದಾರೆ ಎಂದು ದೂರಿದರು.

ದೇಶದ ಬಡವರು, ಶೋಷಿತರು, ಮಹಿಳೆಯರಿಗೆ ರಕ್ಷಣೆ ನೀಡುತ್ತಿರುವ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಇವರಿಂದ ದೇಶದ ರಕ್ಷಣೆ ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಸಂಸತ್ತಿನಲ್ಲಿ ನೀಡುವ ಹೇಳಿಕೆಗಳನ್ನು ಸಾಕ್ಷ್ಯ ಸಹಿತ ದೃಢೀಕರಿಸಬೇಕಾಗುತ್ತದೆ. ಅದಕ್ಕಾಗಿ, ಮೋದಿಯವರು ಸಂಸತ್ತಿನಲ್ಲಿ ಮಾತನಾಡುವುದೇ ವಿರಳ. ಕೇವಲ ರ್‍ಯಾಲಿಗಳಲ್ಲಿ ಭಾಷಣ ಬಿಗಿಯುತ್ತಾರೆ ಎಂದು ಟಾಂಗ್‌ ನೀಡಿದರು.

ಮೋದಿ ಆಡಳಿತಾವಧಿಯಲ್ಲಿ ದೇಶದಲ್ಲಿ ಕಪ್ಪುಹಣ ಹೆಚ್ಚಾಗಿದೆ ಎಂದು ವಿದೇಶಿ ಸಂಸ್ಥೆಗಳು ವರದಿ ನೀಡಿವೆ ಎಂದರು.

ಕಳೆದ 27 ವರ್ಷಗಳಿಂದ ಬಿಜೆಪಿಯು ‘ರಾಮ ಮಂದಿರ’ ನಿರ್ಮಾಣ ವಿಚಾರವನ್ನು ಪ್ರಸ್ತಾಪಿಸುತ್ತಿದ್ದು, ಅಧಿಕಾರಕ್ಕೆ ಬಂದರೂ ಯಾಕೆ ನಿರ್ಮಿಸಿಲ್ಲ. ಬಿಜೆಪಿಯನ್ನು ಕಟ್ಟಿ ಬೆಳೆಸಿದ ಎಲ್‌.ಕೆ. ಅಡ್ವಾಣಿ ಹಾಗೂ ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ನೀಡಿದ ಗೌರವವನ್ನು ಕಂಡರೆ, ಹಿರಿಯರು– ಮಹಿಳೆಯರನ್ನೂ ಮೋದಿ–ಶಾಗೌರವಿಸುವುದಿಲ್ಲ ಎಂಬುದು ಸ್ಪಷ್ಟಗೊಂಡಿದೆ ಎಂದರು.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿರುವ ನ್ಯಾಯ್ ಹಾಗೂ ಕೃಷಿ ಭಾಗ್ಯ ಯೋಜನೆಗಳೆರಡಕ್ಕೂ ದೇಶದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಮುಖಂಡ ವೀರಣ್ಣ ಮತ್ತಿಕಟ್ಟಿ ಹೇಳಿದರು.

ಮಾಜಿ ಸಂಸದ ಐ.ಜಿ. ಸನದಿ, ಮುಖಂಡರಾದ ಜಯಸಿಂಹ, ಮಹೇಂದ್ರ ಕುಮಾರ್, ಸಂಜೀವಕುಮಾರ್ ನೀರಲಗಿ, ಶ್ರೀನಿವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT