ಪ್ರತಿಪಕ್ಷ ಸ್ಥಾನಕ್ಕೂ ಸಿದ್ಧರಾಗಿ: ಸಭೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಸೂಚನೆ

ಭಾನುವಾರ, ಜೂಲೈ 21, 2019
22 °C

ಪ್ರತಿಪಕ್ಷ ಸ್ಥಾನಕ್ಕೂ ಸಿದ್ಧರಾಗಿ: ಸಭೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಸೂಚನೆ

Published:
Updated:

ಬೆಂಗಳೂರು: ಪ್ರತಿ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದೂ ಸೇರಿದಂತೆ ಯಾವುದೇ ಸನ್ನಿವೇಶ ನಿರ್ಮಾಣವಾದರೂ ಎದುರಿಸಲು ಸಿದ್ಧರಾಗುವಂತೆ ಕಾಂಗ್ರೆಸ್ ಶಾಸಕರಿಗೆ ಸೂಚನೆ ನೀಡಲಾಗಿದೆ.

ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲಾಗಿದೆ.

ಈ ಸಮಯದಲ್ಲಿ ಕೆಲವರು ಶಾಸಕರ ರಾಜೀನಾಮೆ ವಿಷಯ ಪ್ರಸ್ತಾಪಿಸಿ, ‘ಗೊಂದಲ ನಿರ್ಮಾಣವಾಗಿರುವ ಇಂತಹ ಸನ್ನಿವೇಶದಲ್ಲಿ
ಮೈತ್ರಿ ಸರ್ಕಾರದಲ್ಲಿ ಮುಂದುವರಿಯುವುದು ಬೇಡ. ಪ್ರತಿ ಪಕ್ಷದ ಸ್ಥಾನದಲ್ಲಿ ಕುಳಿತುಕೊಂಡರೂ ಚಿಂತೆ ಇಲ್ಲ‘ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಮತ್ತೆ ಕೆಲವರು ಸಹಮತ ವ್ಯಕ್ತಪಡಿಸಿದ್ದಾರೆ. ಮಧ್ಯೆ ಪ್ರವೇಶಿಸಿದ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಈಗ ಈ ಮಾತುಗಳು ಬೇಡ ಎಂದು ಸುಮ್ಮನಾಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಸಕರು ರಾಜೀನಾಮೆ ನೀಡಿ, ಪಕ್ಷದಿಂದ ಹೊರ ಹೋಗುತ್ತಿರುವುದು ಹಾಗೂ ಮುಂದೆ ಮತ್ತಷ್ಟು ಶಾಸಕರು ರಾಜೀನಾಮೆ ನೀಡದಂತೆ ತಡೆಯುವ ಬಗ್ಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗುವಂತೆಯೂ ಸಲಹೆ ನೀಡಲಾಗಿದೆ.

ಅಧಿವೇಶನ: ಸಭೆಯ ನಂತರ ಮಾತನಾಡಿದ ಸಿದ್ದರಾಮಯ್ಯ, ‘ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು. ಇದೇ 12ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಏನೆಲ್ಲ ಚರ್ಚೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ. ಹಣಕಾಸು ಮಸೂದೆಗೆ ಒಪ್ಪಿಗೆ ನೀಡಬೇಕಿದ್ದು, ಪಕ್ಷದ ಎಲ್ಲ ಶಾಸಕರು ಉಪಸ್ಥಿತರಿರುವಂತೆ ಸೂಚನೆ ನೀಡಲಾಗಿದೆ ಎಂದರು.

ಪಕ್ಷದ ಚಿಹ್ನೆ ಮೇಲೆ ಆಯ್ಕೆಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಕ್ರಮ ಕೈಗೊಳ್ಳುವಂತೆ ಕೋರಿ ವಿಧಾನ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನಮ್ಮ ಶಾಸಕರು ಬಿಜೆಪಿ ಬಲೆಗೆ ಸಿಲುಕಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗುವುದು ಎಂದು ತಿಳಿಸಿದರು.

ಹಣ ಎಲ್ಲಿಂದ ಬಂತು?

ಮೈತ್ರಿ ಪಕ್ಷಗಳ ಶಾಸಕರ ರಾಜೀನಾಮೆ ಕೊಡಿಸಲು ಹಣ ಹಾಗೂ ಅಧಿಕಾರದ ಆಮಿಷ ಒಡ್ಡಲಾಗುತ್ತಿದೆ. ಶಾಸಕರಿಗೆ ಕೋಟಿಗಟ್ಟಲೆ ಹಣ ನೀಡಲು ಎಲ್ಲಿಂದ ಬಂತು ಹಣ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶಾಸಕರ ಖರೀದಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಬಿಜೆಪಿಗೆ ಯಾರು ಕೊಟ್ಟಿದ್ದಾರೆ ಎಂಬುದು ಗೊತ್ತಾಗಬೇಕು. ಅಕ್ರಮವಾಗಿ ಹಣ ತಂದು ಶಾಸಕರನ್ನು ಖರೀದಿಸಲಾಗುತ್ತಿದೆ ಎಂದು ಆರೋಪಿಸಿದರು.

 

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !