ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಶಿವಕುಮಾರ್ ಬಂಧನ: ಕಾದು ನೋಡುವ ತಂತ್ರ

Published:
Updated:

ಬೆಂಗಳೂರು: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ ನಂತರ ಪಕ್ಷದ ಆಂತರಿಕ ವಲಯದಲ್ಲಿ ಇದೇ ವಿಷಯ ಪ್ರಮುಖವಾಗಿ ಚರ್ಚೆಯಾಗುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಅವರನ್ನು ಬಿಟ್ಟು ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಮುಖಂಡರು ಸಲಹೆ ಮಾಡಿದ್ದರೆ.

ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸಿ, ಆ ಸ್ಥಾನಕ್ಕೆ ಶಿವಕುಮಾರ್ ಅವರನ್ನು ನೇಮಿಸುವ ಸಾಧ್ಯತೆಗಳ ಮಾತುಗಳು ಎಐಸಿಸಿ ಹಾಗೂ ಕೆಪಿಸಿಸಿ ಅಂಗಳದಲ್ಲಿ ಕೇಳಿ ಬಂದಿದ್ದವು. ಇದೇ ಸಂದರ್ಭದಲ್ಲಿ ಉಭಯ ಸದನಗಳ ಶಾಸಕಾಂಗ ಪಕ್ಷದ ನಾಯಕರನ್ನು ನೇಮಿಸಲು ವರಿಷ್ಠರು ಪ್ರಯತ್ನ ಆರಂಭಿಸಿದ್ದರು. ಈಗ ಅವರ ಬಂಧನದಿಂದ ಅಧಿಕಾರ ಹಂಚಿಕೆಗೆ ಸ್ವಲ್ಪ ಹಿನ್ನಡೆಯಾಗಿದ್ದು, ಕೆಲ ದಿನ ಕಾದು ನೋಡಲು ಮುಂದಾಗಿದ್ದಾರೆ. ಮುಂದಿನ ‘ಪರಿಣಾಮ’ ನಾಯಕರಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ.

‘ಶಿವಕುಮಾರ್ ಬಂಧನದ ವಿಚಾರವನ್ನು ಸಮರ್ಥವಾಗಿ ಪ್ರತಿಬಿಂಬಿಸುವುದು. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ತನಿಖೆಗೆ ಸಹಕರಿಸಿದರೂ ಬಂಧಿಸಿ, ಹಿಂಸೆ ನೀಡುವಂತೆ ಮಾಡಿದ್ದಾರೆ’ ಎಂದು ಜನರಿಗೆ ಮನದಟ್ಟು ಮಾಡಿಕೊಡುವುದು. ಅವರ ಮೇಲಿನ ಅನುಕಂಪದ ವಾತಾವರಣ ಮುಂದುವರಿಯುವಂತೆ ನೋಡಿಕೊಳ್ಳುವುದು. ಇದು ಮುಂದಿನ ದಿನಗಳಲ್ಲಿ 17 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾದರೆ ದ್ವೇಷ ರಾಜಕಾರಣದ ವಿಚಾರವನ್ನು ಬಳಸಿಕೊಳ್ಳಬಹುದು’ ಎಂದು ಪಕ್ಷದ ಮುಖಂಡರೊಬ್ಬರು ವಿಶ್ಲೇಷಿಸುತ್ತಾರೆ.

ಜಾಮೀನು ಸಿಗುವುದು ಮತ್ತಷ್ಟು ವಿಳಂಬವಾದರೆ ಏನೆಲ್ಲ ಕಾರ್ಯತಂತ್ರ ರೂಪಿಸಬೇಕು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟು ಉಳಿದ ಸ್ಥಾನಗಳಿಗೆ ನೇಮಕ ಮಾಡಬೇಕೆ? ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಅವರನ್ನು ಬಿಟ್ಟು ನಿರ್ಧಾರ ಕೈಗೊಳ್ಳಬೇಕೆ? ಜಾಮೀನು ಸಿಕ್ಕಿ, ವಾಪಸಾಗುವವರೆಗೂ ಕಾಯಬೇಕೆ? ಎಂಬ ಲೆಕ್ಕಾಚಾರವೂ ಮುಖಂಡರ ನಡುವೆ ನಡೆದಿದೆ.

ಸೋನಿಯಾ ಅಭಯ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ. ‘ಪಕ್ಷ ವಹಿಸಿದ್ದ ಕೆಲಸ ಮಾಡಿದ್ದು, ಅದಕ್ಕೆ ಪ್ರತೀಕಾರವಾಗಿ ಬಿಜೆಪಿ ಸೇಡು ತೀರಿಸಿಕೊಳ್ಳುತ್ತಿದೆ. ಪಕ್ಷ ಅವರ ಬೆಂಬಲಕ್ಕೆ ನಿಲ್ಲುತ್ತದೆ. ಮುಂದಿನ ದಿನಗಳಲ್ಲೂ ಕೈ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರಿಗೆ ಅಭಯ ನೀಡಿದ್ದಾರೆ. ಜೈಲಿನಿಂದ ಬಂದ ನಂತರವೂ ಪಕ್ಷದಲ್ಲಿ ಅವರಿಗೆ ಅಧಿಕಾರ ಸಿಗಲಿದ್ದು, ಇನ್ನಷ್ಟು ದೊಡ್ಡ ಮಟ್ಟದ ನಾಯಕರಾಗಿ ಬೆಳೆಯಲಿದ್ದಾರೆ. ದೆಹಲಿ ಮಟ್ಟದಲ್ಲಿ ಅವರ ವರ್ಚಸ್ಸು ಹೆಚ್ಚಲಿದೆ ಎಂದು ಹೇಳಲಾಗುತ್ತಿದೆ.

ಒಬಿಸಿ ಸಭೆ

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ (ಒಬಿಸಿ) ಕಾರ್ಯಕಾರಿಣಿ ಸಭೆ ನಡೆಯಲಿದೆ. ಒಬಿಸಿ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭಾಗವಹಿಸಲಿದ್ದಾರೆ.

ಅಹಿಂದ ಸಮಾವೇಶ ಮಾಡುವುದಿದ್ದರೆ ಪಕ್ಷದ ವೇದಿಕೆಯಲ್ಲೇ ಮಾಡಬೇಕು. ಪಕ್ಷ ಸಹ ಸಮುದಾಯದ ಜತೆಗೆ ಗುರುತಿಸಿಕೊಂಡಿರುವುದರಿಂದ ಪ್ರತ್ಯೇಕ ಸಮಾವೇಶ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ ನೀಡಿದ್ದು, ಅವರು ಪ್ರತ್ಯೇಕ ಸಮಾವೇಶದಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

 

Post Comments (+)