ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು | ಲಾಕ್‌ಡೌನ್‌ ಪರಿಣಾಮ: ಒಬ್ಬೊಬ್ಬರದೂ ಕರುಳು ಹಿಂಡುವ ಕತೆ

Last Updated 31 ಮಾರ್ಚ್ 2020, 6:47 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕೊರೊನಾ ವೈರಾಣು ಸೋಂಕು ಹರಡಿರುವ ಆತಂಕ ಮತ್ತು ಮೂಡಿಸಿರುವ ಭೀಕರ ಪರಿಸ್ಥಿತಿಯಿಂದಾಗಿ ಗ್ರಾಮಾಂತರ ಪ್ರದೇಶದ ಜನಸಾಮಾನ್ಯರು, ರೈತರು, ಕಾರ್ಮಿಕರ ಕಣ್ಣೀರಿನ ಕತೆ ಕರುಳು ಹಿಂಡುತ್ತಿದೆ. ಎಲ್ಲರೂ ಪಡಬಾರದ ಯಮಯಾತನೆ ಪಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ.

‘ಹೊಲದಲ್ಲಿ ಟೊಮೆಟೊ, ಸೌತೆಕಾಯಿ, ಕಲ್ಲಂಗಡಿ, ಮೆಣಸಿನಕಾಯಿ, ಕೊತ್ತಂಬರಿ ಬೆಳೆಯಲು ಸಾಕಷ್ಟು ಖರ್ಚು ಮಾಡಿದ್ದೇವೆ. ಈಗ ಬೆಳೆ ಕೈಗೆ ಬಂದಿದೆ. ಎಲ್ಲಿ ಮಾರಾಟ ಮಾಡಬೇಕು ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

‘ಸಮರ್ಪಕ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಸಂತೆಗೆ ಹೊತ್ತುಕೊಂಡು ಹೋಗಿ ಮಾರುವಂತಿಲ್ಲ. ನಗರಗಳಿಗೂ ಕೊಂಡೊಯ್ಯುವಂತಿಲ್ಲ. ಹೀಗಾಗಿ ಕಿತ್ತೂರು ಪೇಟೆಗೆ ತಂದು ಕೈಗೆ ಬಂದಷ್ಟು ದುಡ್ಡಿಗೆ ಮಾರಿಕೊಂಡು ಹೋಗುತ್ತಿರುವೆ’ ಎಂದು ನಿಂಗಪ್ಪ ನೆರಳೆ ಅಳಲು ತೋಡಿಕೊಂಡರು.

‘ನಿತ್ಯ ದುಡಿಯದೆ ಬದುಕಿನ ಬಂಡಿ ಮುಂದಕ್ಕೆ ಹೋಗುವಂತಿಲ್ಲ. ಕೊರೊನಾ ಆತಂಕದಿಂದ ಲಾಕ್‌ಡೌನ್‌ ಆಗಿರುವುದರಿಂದ ಕಟ್ಟಡ ನಿರ್ಮಾಣದ ಕೆಲಸ ಇಲ್ಲದಂತಾಗಿದೆ. ಹೀಗೆ ಎಷ್ಟು ದಿನ ಮುಂದುವರೆಯುತ್ತಿದೆಯೋ ತಿಳಿಯದಾಗಿದೆ’ ಎಂದು ಕಟ್ಟಡ ಕಾರ್ಮಿಕ ಫಕ್ಕೀರಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.

ದಾರಿ ದೂರ: ಕೊರೊನಾ ಭೀತಿ ಹುಟ್ಟಿಸುವ ಮೊದಲು ತಮ್ಮ ಭವಿಷ್ಯ ಕಂಡುಕೊಳ್ಳಲು ಬೇರೆ ನಗರ ಪ್ರದೇಶಗಳಿಗೆ ಹೋದ ಯುವಕರ ಪಾಡು ಹೇಳತೀರದಾಗಿದೆ. ಮೈಸೂರು ಮತ್ತಿತರ ಕಡೆಗಳಿಂದ ಭಾನುವಾರ 24 ಯುವಕರು ನಡೆದುಕೊಂಡು ತಮ್ಮ ಊರುಗಳನ್ನು ಸೇರಲು ಹೋಗುತ್ತಿದ್ದರೆ, ಸೋಮವಾರ ಮಾರುಕಟ್ಟೆ ಕೌಶಲದ ತರಬೇತಿಗೆಂದು ಮಹಾರಾಷ್ಟ್ರದ ಕರಾಡಕ್ಕೆ ಹೋಗಿದ್ದ ಚೆನ್ನೈನ ಮೂವರು ಯುವಕರು ಕಾಲ್ನಡಿಗೆಯಲ್ಲಿ ‘ಘರ್‌ ವಾಪಸ್‌’ಗೆ ಪ್ರತಿಜ್ಞೆ ಮಾಡಿ ಹೊರಟಿದ್ದರು.

ರಾಷ್ಟ್ರೀಯ ಹೆದ್ದಾರಿ ಮೇಲೆ ಬೆನ್ನಿಗೊಂದು ಬ್ಯಾಗ್ ಹಾಕಿಕೊಂಡು ಹೊರಟ ಯುವಕರನ್ನು ಮಾತನಾಡಿಸಿದಾಗ ತಮಗಾದ ಸಂಕಷ್ಟದ ಪರಿಸ್ಥಿತಿಯನ್ನು ಎಳೆಯಾಗಿ ಬಿಚ್ಚಿಟ್ಟರು.

‘ಎರಡು ತಿಂಗಳ ಹಿಂದೆ ಮಾರುಕಟ್ಟೆ ಕೌಶಲ ತರಬೇತಿ ಪಡೆಯಲು ಕರಾಡಕ್ಕೆ ಹೋಗಿದ್ದೆವು. ದಿಢೀರನೆ ಘೋಷಿಸಿದ ‘ಲಾಕ್ ಡೌನ್’ನಿಂದಾಗಿ ತಮ್ಮ ಅವಸ್ಥೆ ಹೀಗಾಗಿದೆ. ಬೆಳಿಗ್ಗೆ ಎಲ್ಲರಿಗೂ ಕಟಗ್ ಚಪಾತಿ ಸಿಕ್ಕಿತ್ತು. ಅದನ್ನು ತಿಂದು ದಾರಿ ಸವೆಸುತ್ತಿದ್ದೇವೆ. ಲಾರಿ ಸಿಕ್ಕರೆ ಏರುತ್ತೇವೆ. ಇಲ್ಲದಿದ್ದರೆ ಕಾಲೇ ನಮ್ಮ ಪ್ರಯಾಣಕ್ಕೆ ಆಧಾರ’ ಎಂದು ಅಳಲು ತೋಡಿಕೊಂಡರು.

ಪೊಲೀಸ್ ಕಟ್ಟೆಚ್ಚರ: ಕಿತ್ತೂರು ಸಮೀಪವಿರುವ ಬೆಳಗಾವಿ ಗಡಿ ಆರಂಭಕ್ಕೆ ಪೊಲೀಸರು ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಡಿವೈಎಸ್ಪಿ ಕರುಣಾಕರಶೆಟ್ಟಿ ಮತ್ತು ಸಿಪಿಐ ಶ್ರೀಕಾಂತ ತೋಟಗಿ ಉಸ್ತುವಾರಿಯಲ್ಲಿ ಪೊಲೀಸರು ಲಾರಿಗಳಲ್ಲಿ ಪ್ರಯಾಣಿಸುವ ಕಾರ್ಮಿಕರು ಮತ್ತು ಯುವಕರು ಗಡಿ ದಾಟಿ ಹೋಗದಂತೆ ಹದ್ದಿನ ಕಣ್ಣು ನೆಟ್ಟಿದ್ದಾರೆ.

‘ಲಾರಿಯಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವ ಹಾಗಿಲ್ಲ. ಅವರನ್ನು ತಡೆಯಬೇಕು. ಬೆಳಗಾವಿ ಸೇರಿದಂತೆ ಇತರ ಕಡೆಗಳಲ್ಲಿ ತೆರೆದಿರುವ ವಸತಿ ತಾಣದಲ್ಲಿ ಅವರನ್ನು ಇಡಬೇಕಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT