ಪುರಸಭೆ ಚುನಾವಣೆ ತಡೆಯಾಜ್ಞೆ ತೆರವು

7
ಹೈಕೋರ್ಟ್‌ನ ಕಲಬುರ್ಗಿ ವಿಭಾಗೀಯ ಪೀಠ ಆದೇಶ

ಪುರಸಭೆ ಚುನಾವಣೆ ತಡೆಯಾಜ್ಞೆ ತೆರವು

Published:
Updated:

ಕಲಬುರ್ಗಿ: ಪಟ್ಟಣ ಪಂಚಾಯಿತಿಯಿಂದ ಮೇಲ್ದರ್ಜೆಗೇರಿರುವ ಪುರಸಭೆಗಳ ಚುನಾವಣೆಗೆ ಹೈಕೋರ್ಟ್‌ ಕಲಬುರ್ಗಿ ಪೀಠದ ಏಕಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ವಿಭಾಗೀಯ ಪೀಠ ತೆರವುಗೊಳಿಸಿದೆ.

ಕಲಬುರ್ಗಿ ಜಿಲ್ಲೆಯ ಅಫಜಲಪುರ, ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಪಟ್ಟಣ ಪಂಚಾಯಿತಿಗಳು ಪುರಸಭೆಯಾಗಿ ಮೇಲ್ದರ್ಜೆಗೇರಿದ್ದವು. ರಾಜ್ಯ ಚುನಾವಣಾ ಆಯೋಗ ಇವುಗಳಿಗೂ ಚುನಾವಣೆ ಘೋಷಿಸಿತ್ತು.

‘ನಮ್ಮ ಅವಧಿ ಐದು ವರ್ಷ ಇದೆ. ಅವಧಿ ಪೂರ್ಣಗೊಳ್ಳುವ ಮುನ್ನವೇ ಚುನಾವಣೆ ನಡೆಸುವುದು ಸರಿಯಲ್ಲ’ ಎಂದು ಈ ಪುರಸಭೆಗಳ ಆಡಳಿತ ಮಂಡಳಿಯವರು ಹೈಕೋರ್ಟ್‌ ಮೊರೆ ಹೋಗಿದ್ದರು.

ಅವಧಿ ಪೂರ್ಣಗೊಳ್ಳದ ಇಂತಹ ಪುರಸಭೆಗಳ ಚುನಾವಣೆಗೆ ಹೈಕೋರ್ಟ್‌ನ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು. ಇದರ ವಿರುದ್ಧ ರಾಜ್ಯ ಚುನಾವಣಾ ಆಯೋಗ ಕಲಬುರ್ಗಿ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ನ್ಯಾಯಮೂರ್ತಿಗಳಾದ ನಾರಾಯಣಸ್ವಾಮಿ ಹಾಗೂ ಕೆ.ಎನ್‌. ಫಣೀಂದ್ರ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮೇಲ್ಮನವಿಯ ವಿಚಾರಣೆಯನ್ನು ಗುರುವಾರ ನಡೆಸಿತು.

‘ಈ ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ ರಾಜ್ಯ ಸರ್ಕಾರ ಮೇಲ್ದರ್ಜೆಗೇರಿಸಿದೆ. ಪುನರ್‌ ವಿಂಗಡಣೆಯಾಗಿ ವಾರ್ಡ್‌ಗಳ ಸಂಖ್ಯೆಯೂ ಹೆಚ್ಚಳವಾಗಿವೆ. ಯಾವುದೇ ಸ್ಥಳೀಯ ಸಂಸ್ಥೆ ಮೇಲ್ದರ್ಜೆಗೇರಿದ ತಕ್ಷಣವೇ ಚುನಾವಣೆ ನಡೆಯಬೇಕು’ ಎಂದು ರಾಜ್ಯ ಚುನಾವಣಾ ಆಯೋಗದ ಪರ ವಕೀಲ ಪಿ.ಎಸ್‌. ಮಾಲಿಪಾಟೀಲ ಅವರು ವಾದ ಮಂಡಿಸಿದರು.

ಈ ವಾದ ಮಾನ್ಯಮಾಡಿದ ವಿಭಾಗೀಯ ಪೀಠವು ತಡೆಯಾಜ್ಞೆ ತೆರವುಗೊಳಿಸಿತು.

‘ರಾಜ್ಯ ಚುನಾವಣಾ ಆಯೋಗ ನಿಗದಿ ಪಡಿಸಿದಂತೆ ಈ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಈಗ ಯಾವುದೇ ಅಡೆತಡೆ ಇಲ್ಲ’ ಎಂದು ವಕೀಲ ಪಿ.ಎಸ್‌. ಮಾಲಿಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !