ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೋವಿಡ್‌ ಸೋಂಕು ದೃಢ

Last Updated 30 ಜೂನ್ 2020, 19:34 IST
ಅಕ್ಷರ ಗಾತ್ರ

ಬೆಂಗಳೂರು:ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ಇಬ್ಬರು ವಿದ್ಯಾರ್ಥಿನಿಯರು ಸೇರಿ ಮೂವರಿಗೆ ಕೋವಿಡ್–19 ದೃಢಪಟ್ಟಿದೆ.

ಕುಣಿಗಲ್ ತಾಲ್ಲೂಕಿನ ದೊಡ್ಡಕಲ್ಲಹಳ್ಳಿಯ 10ನೇ ತರಗತಿ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬಾಲಕನ ಸಂಬಂಧಿ ಬೆಂಗಳೂರಿನಿಂದ ಈಚೆಗೆ ಗ್ರಾಮಕ್ಕೆ ಬಂದು ಹೋಗಿದ್ದರು.

ಬೆಂಗಳೂರಿನಲ್ಲಿ ಅವರಿಗೆ ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದಾಗ ಸೋಂಕಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಮಹಿಳೆಯ ಪ್ರಾಥಮಿಕ ಸಂಪರ್ಕದ ಹಿನ್ನೆಲೆಯಲ್ಲಿ ಬಾಲಕನಿಗೂ ಕ್ವಾರಂಟೈನ್ ಮಾಡಲಾಗಿತ್ತು. ಗಂಟಲು ದ್ರವ ಪಡೆದು ತಪಾಸಣೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಈತ ಅಮೃತೂರು ಕೇಂದ್ರದಲ್ಲಿ ಪರೀಕ್ಷೆ ಸಹ ಬರೆದಿದ್ದಾನೆ.

ಬಾಲಕನ ಜತೆ ಇತರೆ ಮೂರು ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆದಿದ್ದಾರೆ. ಅಲ್ಲದೆ, ಗ್ರಾಮದಿಂದ ಪರೀಕ್ಷಾ ಕೇಂದ್ರಕ್ಕೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಇತರೆ ವಿದ್ಯಾರ್ಥಿಗಳೊಂದಿಗೆ ಬಂದಿದ್ದಾನೆ. ಇದರಿಂದಾಗಿ ಈ ಭಾಗದವರಲ್ಲಿ ಆತಂಕ ಮೂಡಿದೆ.

ವಿದ್ಯಾರ್ಥಿನಿಗೆ ಕೋವಿಡ್–19:ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಕೋವಿಡ್-19 ದೃಢಪಟ್ಟಿದೆ.

ಸೋಮವಾರ ವಿಜ್ಞಾನ ವಿಷಯದ ಪರೀಕ್ಷೆ ಬರೆದ ಬಳಿಕ ವಿದ್ಯಾರ್ಥಿನಿಗೆ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆಕೆಯ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಂಗಳವಾರ ಬಂದ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಡಿಎಚ್‌ಒ ಸುಧೀರ್ ಚಂದ್ರ ಸೂಡ ತಿಳಿಸಿದರು.

ವಿದ್ಯಾರ್ಥಿನಿಯ ಕುಟುಂಬದ ಸದಸ್ಯರಿಗೆ ಸೋಂಕು ಕಾಣಿಸಿಕೊಂಡಿಲ್ಲ.ವಿದ್ಯಾರ್ಥಿನಿಗೆ ಸೋಂಕು ಹೇಗೆ ತಗುಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಆಕೆಯ ಸಂಚಾರ ಮಾಹಿತಿ, ಭೇಟಿಯಾದವರ ವಿವರಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸೋಂಕಿತ ವಿದ್ಯಾರ್ಥಿನಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ಪೂರಕ ಪರೀಕ್ಷೆಯಲ್ಲಿ ಉಳಿಕೆ ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿನಿಗೆ ಕೊರೊನಾ ದೃಢ: ಹರಿಹರ ನಗರದ ಅಗಸರಬೀದಿ ಕಂಟೈನ್‍ಮೆಂಟ್‍ ವಲಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಮಾಹಿತಿ ನೀಡಿದರು.

‘ನಗರದ ಜೆ.ಸಿ. ಬಡಾವಣೆಯ ಡಿ.ಆರ್‌.ಎಂ. ಪರೀಕ್ಷಾ ಕೇಂದ್ರದ ವಿಶೇಷ ಕೊಠಡಿಯಲ್ಲಿ ವಿದ್ಯಾರ್ಥಿನಿಯು ಮೂರು ಪರೀಕ್ಷೆಗಳನ್ನು ಬರೆದಿದ್ದಳು. ಬಾಕಿ ಪರೀಕ್ಷೆ ಬರೆಯುವುದಕ್ಕೆ ಆಕೆಗೆ ನಿರ್ಬಂಧಿಸಲಾಗಿದೆ. ಮುಂಬರುವ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು. ವಿದ್ಯಾರ್ಥಿನಿಯತಾಯಿಗೂ ಕೋವಿಡ್‌–19 ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT