ಶುಕ್ರವಾರ, ಜೂನ್ 5, 2020
27 °C

ಕೇರಳ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಬಾಗಿಲು ತಟ್ಟಿದ ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಂಗಳೂರು ಮತ್ತು ಕಾಸರಗೋಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ತೆರವುಗೊಳಿಸಬೇಕೆಂದು ಕೇರಳ ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಯುವ ಕಾಂಗ್ರೆಸ್ ಮುಖಂಡ ಮಿಥುನ್‌ ರೈ ಅವರು ಗುರುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಿಥುನ್‌ ರೈ ಸ್ಪರ್ಧಿಸಿದ್ದರು.

ಕೇರಳದ ಕಾಸರಗೋಡಿನಲ್ಲಿ ಕೋವಿಡ್‌-19 ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿನ ಜನರು ಪರೀಕ್ಷೆ ಹಾಗೂ ತಪಾಸಣೆಗೆಂದು ಮಂಗಳೂರಿಗೆ ಬರುತ್ತಿದ್ದಾರೆ. ಅದು ಮಂಗಳೂರಿನ ಆರೋಗ್ಯ ಸಂಸ್ಥೆಗಳು ಮತ್ತು ವೈದ್ಯರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಮಿಥುನ್‌ ರೈ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.

ಕಾಸರಗೋಡಿನಿಂದ ಹೆಚ್ಚಿನ ಜನರು ಬರುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಆತಂಕ ಉಂಟಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಸರ್ಕಾರ ಕಾಸರಗೋಡು ಮತ್ತು ಮಂಗಳೂರು ನಡುವೆ ಸಂಚಾರ ಕಲ್ಪಿಸುವ ರಸ್ತೆಗೆ ಅಲ್ಪಾವಧಿ ತಡೆ ಹೇರಿತ್ತು. ಅದು ದಕ್ಷಿಣ ಕನ್ನಡ ಜನರ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಉತ್ತಮ ತೀರ್ಮಾನವಾಗಿತ್ತು. ಆದರೆ, ಕೇರಳ ಹೈಕೋರ್ಟ್‌ ಈ ರಸ್ತೆ ತಡೆಯನ್ನು ತೆರವುಗೊಳಿಸಲು ಸೂಚನೆ ನೀಡಿದೆ. ಇದರ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಈ ಅರ್ಜಿಯ ವಿಚಾರಣೆಯನ್ನು ಎಲ್‌. ನಾಗೇಶ್ವರ ರಾವ್‌ ಮತ್ತು ದೀಪಕ್‌ ಗುಪ್ತಾ ಅವರನ್ನು ಒಳಗೊಂಡ ಪೀಠವು ಶುಕ್ರವಾರ ಕೈಗೆತ್ತಿಕೊಳ್ಳಲಿದೆ. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು