ಸೋಮವಾರ, ನವೆಂಬರ್ 18, 2019
28 °C

ಬೆಳೆ ನಷ್ಟ ಪರಿಹಾರ ಹೆಚ್ಚಳ: ಸಿ.ಎಂ

Published:
Updated:

ಬೆಳಗಾವಿ: ‘ಪ್ರವಾಹದಿಂದ ಸಂಭವಿಸಿದ ಬೆಳೆ ನಷ್ಟಕ್ಕೆ ನೀಡಲಾಗುತ್ತಿದ್ದ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ. ಪ್ರತಿ ಹೆಕ್ಟೇರ್‌ ಒಣಭೂಮಿಗೆ ₹ 16,500, ನೀರಾವರಿ ಭೂಮಿಗೆ ₹ 23,500 ಹಾಗೂ ತೋಟಗಾರಿಕಾ ಬೆಳೆಗಳಿಗೆ ₹ 28,000 ನೀಡಲು ತೀರ್ಮಾನಿಸಲಾಗಿದೆ. ಇದು ದೇಶದಲ್ಲಿಯೇ ಅತಿ ಹೆಚ್ಚಿನ ದರವಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಮೊದಲು ಒಣಭೂಮಿಗೆ ₹ 6,500, ನೀರಾವರಿ ಭೂಮಿಗೆ ₹ 13,500 ನೀಡಲಾಗುತ್ತಿತ್ತು’ ಎಂದು ಅವರು ನುಡಿದರು. 

ಅಂಗಡಿಗಳಿಗೂ ಪರಿಹಾರ: ‘ಪ್ರವಾಹದಲ್ಲಿ ಹಾನಿಗೊಳಗಾದ ಅಂಗಡಿಗಳಿಗೆ ₹ 25,000 ಹಾಗೂ ಕೈ ಮಗ್ಗಗಳಿಗೆ ₹ 50,000 ಪರಿಹಾರ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ಹಾನಿಗೊಳಗಾದ ಮನೆಗಳಿಗೆ ₹ 5 ಲಕ್ಷದವರೆಗೆ ಪರಿಹಾರ ನೀಡಲಾಗುತ್ತಿದೆ. ಆದಷ್ಟು ಬೇಗ ಹಣ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘10–15 ದಿನಗಳ ನಂತರ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿ, ಪರಿಹಾರ ವಿತರಣೆ ಕಾರ್ಯವನ್ನು ಪರಿಶೀಲಿಸುವೆ’ ಎಂದರು.

ಔರಾದಕರ ವರದಿ ಶೀಘ್ರ ಜಾರಿ: ‘ಪೊಲೀಸ್ ಇಲಾಖೆಯ ಸುಧಾರಣೆಗೆ ಸಂಬಂಧಿಸಿದಂತೆ ಔರಾದಕರ ಸಮಿತಿ ಸಲ್ಲಿಸಿರುವ ವರದಿಗೆ ಸಹಿ ಹಾಕಿ ಬಂದಿದ್ದೇನೆ. ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ತಕ್ಷಣ ಜಾರಿ ಮಾಡಲಾಗುವುದು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)