ಬೆಳೆ ವಿಮೆ ಚೆಂಡು ಕೇಂದ್ರದ ಅಂಗಳಕ್ಕೆ: ರೈತರು ಕಂಗಾಲು

7

ಬೆಳೆ ವಿಮೆ ಚೆಂಡು ಕೇಂದ್ರದ ಅಂಗಳಕ್ಕೆ: ರೈತರು ಕಂಗಾಲು

Published:
Updated:

ಬೆಂಗಳೂರು: ಬೆಳೆ ವಿಮೆಗೆ ಹೆಸರು ನೋಂದಾಯಿಸುವ ಅವಧಿ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಬೇಕು ಎಂದು ಹೇಳಿ ರಾಜ್ಯ ಕೃಷಿ ಇಲಾಖೆ ಕೈತೊಳೆದುಕೊಂಡಿದೆ. ಕೇಂದ್ರ ಹಾಗೂ ರಾಜ್ಯದ ನಡುವಿನ ಸಮನ್ವಯ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ.

ವಿಮೆಗೆ ಹೆಸರು ನೋಂದಾಯಿಸಲು ಮಂಗಳವಾರ ಕೊನೆಯ ದಿನವಾಗಿತ್ತು. ಸಾಕಷ್ಟು ರೈತರು ಇನ್ನೂ ಹೆಸರು ನೋಂದಾಯಿಸಿಕೊಂಡಿಲ್ಲ. ಹೀಗಾಗಿ, ಅವಧಿಯನ್ನು ವಿಸ್ತರಿಸಬೇಕು ಎಂದು ಕೋರಿ ರೈತ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಕೃಷಿ ಇಲಾಖೆಗೆ ಮನವಿ ಮಾಡಿದ್ದರು. 15 ದಿನ ವಿಸ್ತರಿಸಲು  ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಒಪ್ಪಿದ್ದಾರೆ ಎಂದೂ ಸಂಸದ ಪ್ರಹ್ಲಾದ ಜೋಷಿ ಹೇಳಿದ್ದರು. ಅವಧಿ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆದಿತ್ತು. ಅವಧಿ ವಿಸ್ತರಣೆಗೆ ಕೋರಿ ಕೇಂದ್ರಕ್ಕೆ ಇಲಾಖೆ ಮಂಗಳವಾರ ಪತ್ರ ಬರೆದಿದೆ.

ಬೆಳೆ ವಿಮೆ ಪ್ರೀಮಿಯಂ ಪಾವತಿ ಅವಧಿಯನ್ನು ವಿಸ್ತರಿಸಲೇಬೇಕಿತ್ತು. ಏಕೆಂದರೆ ನಮ್ಮ ಭಾಗದಲ್ಲಿ ಬೆಳೆ ಕೈಗೆ ಬರುವಲ್ಲಿ ಅನಿಶ್ಚಿತತೆ ಹೆಚ್ಚು. ಈ ಮುಂಗಾರಿನಲ್ಲಿಯೂ ಅದೇ ಪುನರಾವರ್ತನೆಯಾಗುವ ಆತಂಕವಿದೆ. ಈ ಬಾರಿ 8 ದೊಡ್ಡ ಮಳೆ ಸುರಿಯಬೇಕಿತ್ತು. ಅದು ಸುರಿದಿಲ್ಲ. ಇನ್ನು 6 ಮಳೆ ಬಾಕಿ ಉಳಿದಿದೆ. ಆದ್ದರಿಂದ ಕಂತು ಪಾವತಿ ಸೌಲಭ್ಯ ವಿಸ್ತರಿಸಬೇಕಿತ್ತು. ರೈತರಿಗೆ ಒಂದು ಭದ್ರತೆ ಇರುತ್ತಿತ್ತು’ ಎಂದು ಕೊಪ್ಪಳದ ಬೆಳಗೇರಿಯ ರೈತ ಏಳುಕೋಟೇಶ ಕೋಮಲಾಪುರ ಒತ್ತಾಯಿಸಿದರು.

‘ವಿವಿಧೆಡೆ ಸಕಾಲದಲ್ಲಿ ಮಳೆ ಸುರಿಯದ ಕಾರಣ ಬೆಳೆಗಳೆಲ್ಲ ಒಣಗುತ್ತಿವೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಬೆಳೆವಿಮೆ ಕಂತು ತುಂಬುವ ದಿನಾಂಕವನ್ನು ವಿಸ್ತರಿಸಬೇಕು’ ಎಂದು ನೆಲಮಂಗಲದ ರೈತ ರಾಮಪ್ಪ ಹೇಳಿದರು.

‘ಕಳೆದ ವರ್ಷ 11 ಲಕ್ಷ ರೈತರು ಹೆಸರು ನೋಂದಾಯಿಸಿಕೊಂಡಿದ್ದರು. 13.5 ಲಕ್ಷ ಹೆಕ್ಟೇರ್ ಕೃಷಿ ಭೂಮಿ ವಿಮೆ ವ್ಯಾಪ್ತಿಗೆ ಬಂದಿತ್ತು. ಈ ವರ್ಷ ಇಲ್ಲಿಯವರೆಗೆ 9.68 ಲಕ್ಷ ರೈತರು ಹೆಸರು ನೋಂದಾಯಿಸಿದ್ದು, 11.65 ಲಕ್ಷ ಹೆಕ್ಟೇರ್‌ ವ್ಯಾಪ್ತಿಗೆ ಬಂದಿದೆ. ಕೆಲವು ಬೆಳೆಗಳಿಗೆ ಹೆಸರು ನೋಂದಣಿಗೆ ಆಗಸ್ಟ್‌ 14ರ ವರೆಗೆ ಅವಕಾಶ ಇದೆ. ಹೀಗಾಗಿ, 15 ಲಕ್ಷ ಹೆಕ್ಟೇರ್‌ ವ್ಯಾಪ್ತಿಗೆ ಬರುವ ನಿರೀಕ್ಷೆ ಇದೆ’ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಬೆಳೆ ಪ್ರಮಾಣ ಕಡಿಮೆಯಾಗುತ್ತದೆ ಎಂದು ಗೊತ್ತಾದ ಕೂಡಲೇ ಕೆಲವು ರೈತರು ಕೊನೆಯ ಕ್ಷಣದಲ್ಲಿ ವಿಮೆ ಮಾಡಿಸಲು ಮುಂದಾಗುತ್ತಾರೆ. ಇಂತಹ ಪ್ರವೃತ್ತಿಗಳಿಂದ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಅವಧಿ ವಿಸ್ತರಣೆಗೆ ವಿಮಾ ಕಂಪನಿಗಳು ಒಪ್ಪುವುದಿಲ್ಲ. ಈ ಸಲ ಬೆಳೆ ಸಾಲ ಮನ್ನಾ ಮಾಡಲಾಗಿದೆ. ಹೊಸ ಸಾಲ ಸಿಗುವುದು ವಿಳಂಬವಾಗಿದೆ. ಹೀಗಾಗಿ ಅವಧಿ ವಿಸ್ತರಿಸಿ ಎಂದು ಕೋರಿದ್ದೇವೆ. ಕೇಂದ್ರ ಸರ್ಕಾರ ಒಪ್ಪುವ ವಿಶ್ವಾಸ ಇದೆ’ ಎಂದು ಅವರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !