ಭಾನುವಾರ, ಆಗಸ್ಟ್ 1, 2021
21 °C
ಇಸ್ರೋ, ಡಿಆರ್‌ಡಿಒ ಸಹಯೋಗ; ರಕ್ಷಣಾ ಉಪಕರಣ ಸಂಬಂಧಿ ಸಂಶೋಧನಾ ಕೇಂದ್ರ ಸ್ಥಾಪನೆ

ಜ್ಞಾನಭಾರತಿಯಲ್ಲಿ ಸಿಯುಕೆಗೆ 10 ಎಕರೆ ಜಮೀನು

ಗಣೇಶ ಡಿ. ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಸಹಯೋಗದಲ್ಲಿ ಅಂದಾಜು ₹ 100 ಕೋಟಿ ವೆಚ್ಚದಲ್ಲಿ ರಕ್ಷಣಾ ಉಪಕರಣಗಳ ಸಂಶೋಧನೆ ಮತ್ತು ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲಿದೆ. ಇದಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ 10 ಎಕರೆ ಜಮೀನು ಮಂಜೂರು ಮಾಡಲಾಗಿದೆ.

ಮೈಕ್ರೊವೇವ್ಸ್‌, ಆಂಟಿನಾ ಮತ್ತು ಆಪ್ಟೊ ಎಲೆಕ್ಟ್ರಾನಿಕ್ಸ್‌ ಉಪಕರಣ ವಿಷಯದಲ್ಲಿ ಸಂಶೋಧನೆ ನಡೆಸಲು ಈ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲಾಗುತ್ತಿದೆ. ವಾರ್ಷಿಕ ₹ 5 ಲಕ್ಷ ಪಾವತಿಸುವ ಕರಾರಿನ ಮೇರೆಗೆ 30 ವರ್ಷ ಅವಧಿಗೆ ಜಮೀನನ್ನು ಸಿಯುಕೆಗೆ ಗುತ್ತಿಗೆ ನೀಡಿ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಈಚೆಗೆ ಆದೇಶ ಹೊರಡಿಸಿದೆ.

ಈ ಕೇಂದ್ರದ ಬಳಕೆ ಮತ್ತು ಸಂಶೋಧನೆಗೆ ಬೆಂಗಳೂರು ವಿ.ವಿ. ಬೋಧಕರು ಹಾಗೂ ವಿದ್ಯಾರ್ಥಿಗಳಿಗೂ ಅವಕಾಶ ನೀಡಬೇಕು ಎಂಬುದು ಸೇರಿದಂತೆ ಕೆಲ ಷರತ್ತು ವಿಧಿಸಲಾಗಿದೆ.

‘ನಮ್ಮ ವಿಶ್ವವಿದ್ಯಾಲಯದ ಕುಲಾಧಿಪತಿ‌ ಎನ್‌.ಆರ್‌.ಶೆಟ್ಟಿ ಅವರ ಪ್ರಯತ್ನದಿಂದ ಈ ಜಮೀನು ದೊರೆತಿದೆ. ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ (HEFA)ಯಿಂದ ಆರ್ಥಿಕ ನೆರವು ಪಡೆದು ಜ್ಞಾನಭಾರತಿ ಆವರಣದಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸುತ್ತೇವೆ’ ಎಂದು ಸಿಯುಕೆ ಕುಲಪತಿ ಪ್ರೊ.ಎಚ್‌.ಎಂ. ಮಹೇಶ್ವರಯ್ಯ ತಿಳಿಸಿದರು.

‘ಕಡಗಂಚಿಯ ಕ್ಯಾಂಪಸ್‌ನಲ್ಲಿ ನಮ್ಮ ವಿವಿ ಎಂಜಿನಿಯರಿಂಗ್‌ ಕಾಲೇಜನ್ನೂ ಹೊಂದಿದೆ. ಬೆಂಗಳೂರಿನಲ್ಲಿ ಈ ಕೇಂದ್ರ ಸ್ಥಾಪನೆಯ ನಂತರ ನಮ್ಮ ವಿದ್ಯಾರ್ಥಿಗಳಿಗೂ ಅವಕಾಶಗಳು ತೆರೆದುಕೊಳ್ಳಲಿವೆ’ ಎಂದರು.

ಈ ಕೇಂದ್ರದ ಉದ್ದೇಶ: ಬಾಹ್ಯಾಕಾಶ ಮತ್ತು ರಕ್ಷಣಾ ಸಂಶೋಧನೆಗೆ ಉತ್ಕೃಷ್ಣ ಗುಣಮಟ್ಟದ ಎಂಜಿನಿಯರರು ಮತ್ತು ಸಂಶೋಧಕರನ್ನು ರೂಪಿಸುವುದು. ಕಾರ್ಯನಿರತ ಮತ್ತು ಪದವೀಧರ ಎಂಜಿನಿಯರ್‌ಗಳಿಗೆ ತರಬೇತಿ. ಇಂತಹ ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ ತರಬೇತಿ ಆಧರಿತ ಎಂ.ಟೆಕ್‌ ಮತ್ತು ಪಿಎಚ್‌.ಡಿ ಶಿಕ್ಷಣ ನೀಡುವುದು. ಸಣ್ಣ ಕೈಗಾರಿಕೆ ಮತ್ತು ನವೋದ್ಯಮಗಳಿಗೆ ನೆರವಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು