ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 14ರಂದು ಡಿಕೆಶಿ ಪದಗ್ರಹಣ: ಅನುಮತಿ ಕೋರಿ ಸರ್ಕಾರಕ್ಕೆ ಕಾಂಗ್ರೆಸ್‌ ಪತ್ರ

Last Updated 6 ಜೂನ್ 2020, 10:43 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇದೇ 14ರಂದು ಪಕ್ಷದ ನೂತನ ಅಧ್ಯಕ್ಷರಾಗಿ ‘ಪದಗ್ರಹಣ’ ಮಾಡುವುದು ಬಹುತೇಕ ಖಚಿತವಾಗಿದೆ.

‘ಪಕ್ಷದ ಕಚೇರಿಯಲ್ಲಿ ಸರಳ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಅನುಮತಿಗಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಆದರೆ, ಅನುಮತಿ ನೀಡುವ ಬಗ್ಗೆ ಜೂನ್‌ 8ರ ಬಳಿಕ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದೂ ಗೊತ್ತಾಗಿದೆ.

ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಪಕ್ಷ ಧ್ವಜ ಪಡೆದುಕೊಂಡು, ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಶಿವಕುಮಾರ್‌ ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಅಲಂಕರಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅಂದು ಈ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ವೀಕ್ಷಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದೂ ಪಕ್ಷದ ಮೂಲಗಳು ಹೇಳಿವೆ.

ಲಾಕ್‌ಡೌನ್‌ ವಿಘ್ನ

ಈ ಹಿಂದೆ ಮೂರು ಬಾರಿ ಡಿ.ಕೆ. ಶಿವಕುಮಾರ್‌ ‘ಪದಗ್ರಹಣ’ಕ್ಕೆ ಮುಹೂರ್ತ ನಿಗದಿಪಡಿಸಲಾಗಿತ್ತು. ಆದರೆ, ಲಾಕ್‌ಡೌನ್‌ ವಿಘ್ನವಾಗಿ ಕಾಡಿದೆ. ಮೊದಲು ಏಪ್ರಿಲ್‌ ಎರಡನೇ ವಾರದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿತ್ತು. ಬಳಿಕ ಮೇ 31ರಂದು ಅಧಿಕಾರ ಸ್ವೀಕಾರ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆದಿತ್ತು. ಆದರೆ, ಲಾಕ್‌ಡೌನ್‌ ವಿಸ್ತರಿಸಿದ್ದರಿಂದ ಆ ದಿನವನ್ನು ಜೂನ್‌ 7ಕ್ಕೆ ನಿಗದಿಪಡಿಸಲಾಗಿತ್ತು.

ಆದರೆ, ಲಾಕ್‌ಡೌನ್‌ ಅವಧಿಯಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲದೇ ಇರುವುದರಿಂದ ಅಂದೂ ಕೂಡಾ ಅಧಿಕಾರ ಸ್ವೀಕರಿಸಲು ಡಿ.ಕೆ. ಶಿವಕುಮಾರ್‌ ಅವರಿಗೆ ಸಾಧ್ಯ ಆಗಿರಲಿಲ್ಲ.

ಈ ಮಧ್ಯೆ, ತಮ್ಮ ‘ಪದಗ್ರಹಣ’ ವಿಚಾರದಲ್ಲೂ ಬಿಜೆಪಿ ರಾಜಕೀಯ ನಡೆಸುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಕಿಡಿ ಕಾರಿದ್ದರು. ಇದೀಗ ಮತ್ತೊಂದು ದಿನವನ್ನು ಪಕ್ಷ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT