ಬುಧವಾರ, ಜುಲೈ 6, 2022
21 °C

ದಿನವಿಡೀ ವನ್ಯಜೀವಿಗಳ ಒಡನಾಟದಲ್ಲಿ ಸಮಯ ಕಳೆದಿದ್ದ ದರ್ಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅರಣ್ಯ ಇಲಾಖೆ ರಾಯಭಾರಿಯೂ ಆಗಿರುವ ಚಲನಚಿತ್ರ ನಟ ದರ್ಶನ್‌ ತೂಗದೀಪ ಭಾನುವಾರ ದಿನವಿಡೀ ವನ್ಯಜೀವಿಗಳ ಒಡನಾಟದಲ್ಲಿ ಸಮಯ ಕಳೆದರು.‌

ಬೆಳಿಗ್ಗೆ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ ಅವರು ನಟ ಸೃಜನ್‌ ಲೋಕೇಶ್‌ ಜೊತೆಗೂಡಿ ಜಿರಾಫೆ ಮರಿ ದತ್ತು ಪಡೆದರು. ಅದಕ್ಕೆ ‘ತೂಗು–ಲೋಕು‌’ ಎಂದು ಹೆಸರಿಟ್ಟರು. ಈಗಾಗಲೇ ಅವರು ‘ವಿನೀಶ್‌’ ಹೆಸರಿನ ಹುಲಿ, ‘ಮಾದೇಶ‌’ ಹೆಸರಿನ ಆನೆ ದತ್ತು ಪಡೆದಿದ್ದಾರೆ. ಹೀಗಾಗಿ, ಆಗಾಗ್ಗೆ ಮೃಗಾಲಯಕ್ಕೆ ಬಂದು ಸಮಯ ಕಳೆಯುತ್ತಾರೆ. ‘ಅರ್ಜುನ’ ಹೆಸರಿನ ಹುಲಿಯನ್ನು ಸೃಜನ್‌ ದತ್ತು ಪಡೆದಿದ್ದಾರೆ.

ದರ್ಶನ್‌ ಜೊತೆ ಚಲನಚಿತ್ರ ನಟರಾದ ಸೃಜನ್‌, ಪ್ರಜ್ವಲ್‌ ದೇವರಾಜ್‌, ಮಂಡ್ಯ ರಮೇಶ್‌, ನಟ ದೇವರಾಜ್‌ ಪತ್ನಿ ಚಂದ್ರಲೇಖಾ, ಪ್ರಣಾಮ್‌ ದೇವರಾಜ್‌, ವಿಶ್ವ, ಕೀರ್ತಿರಾಜ್‌ ಇದ್ದರು. ಚಿರತೆಯನ್ನು ದೇವರಾಜ ಕುಟುಂಬದವರು ಹಾಗೂ ಮೊಸಳೆಯನ್ನು ನಟ ಕೀರ್ತಿ ದತ್ತು ಪಡೆದರು.

ಇದನ್ನೂ ಓದಿ: ನಟ ದರ್ಶನ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಮೈಸೂರಿನಲ್ಲಿ ಚಿಕಿತ್ಸೆ

ಗಜಪಡೆಗೆ ಸತ್ಕಾರ: ಬಳಿಕ ಮೈಸೂರು ಅರಮನೆಗೆ ಭೇಟಿ ನೀಡಿದ ದರ್ಶನ್‌ ಹಾಗೂ ಇತರ ನಟರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳಿಗೆ ಸತ್ಕಾರ ಮಾಡಿದರು. ಅಂಬಾರಿ ರೂವಾರಿ ಅರ್ಜುನ ನೇತೃತ್ವದ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿ ಮೈದಡವಿದರು. ಈ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಇದ್ದರು.

ಗಜಪಡೆಯ ಮಾವುತ, ಕಾವಾಡಿಗಳು ಹಾಗೂ ಅವರ ಕುಟುಂಬದವರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿದರು. ಅವರ ಜೊತೆಯೇ ಕುಳಿತು ನಟರು ಊಟ ಮಾಡಿದರು. ಅಲ್ಲದೇ, ಮಾವುತ, ಕಾವಾಡಿಗರಿಗೆ ಉಡುಪು ಹಾಗೂ ಮಕ್ಕಳಿಗೆ ಪುಸ್ತಕ, ಬ್ಯಾಗು ವಿತರಿಸಿದರು.

ನಾವು ಕಾಡಿಗೆ, ಪ್ರಾಣಿಗಳು ನಾಡಿಗೆ...

‘ನಾವು ಕಾಡಿಗೆ ಹೋಗುತ್ತಿದ್ದೇವೆ. ಹೀಗಾಗಿ, ಪ್ರಾಣಿಗಳು ನಾಡಿಗೆ ಬರುತ್ತಿವೆ’ ಎಂದು ನಟ ದರ್ಶನ್‌ ನುಡಿದರು.

‘ಸಾವಿರಾರು ರೂಪಾಯಿ ಖರ್ಚು ಮಾಡಿ ವಾರಾಂತ್ಯದಲ್ಲಿ ಮೋಜು ಮಸ್ತಿ ಮಾಡಿ ಸಮಯ ಕಳೆಯುವ ಬದಲು ಪ್ರಾಣಿಗಳ ಸೇವೆಯಲ್ಲಿ ತೊಡಗಬೇಕು. ವಿವಿಧ ಸ್ಥಳಗಳಿಗೆ ತೆರಳಿ ಸೆಲ್ಫಿ ತೆಗೆದುಕೊಳ್ಳುವುದಕ್ಕಿಂತ ಕಾಡಿನ ರಕ್ಷಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು