ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪ್ರದಾಯ ಮುರಿದ ಮೈತ್ರಿ ಸರ್ಕಾರ

ಜಂಬೂಸವಾರಿ ದಿನಕ್ಕೆ ಮುನ್ನವೇ ನಂದಿಧ್ವಜಕ್ಕೆ ಪೂಜೆ, ಅರ್ಜುನನಿಗೆ ಪುಷ್ಪಾರ್ಚನೆ
Last Updated 14 ಅಕ್ಟೋಬರ್ 2018, 19:26 IST
ಅಕ್ಷರ ಗಾತ್ರ

ಮೈಸೂರು: ದಶಕಗಳಿಂದ ನಡೆಸಿ‌ಕೊಂಡು ಬರುತ್ತಿರುವ ನಾಡಹಬ್ಬ ದಸರಾಮಹೋತ್ಸವದ ಸಂಪ್ರದಾಯವನ್ನು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಮುರಿದಿದೆ.

ದಸರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸಾಂಸ್ಕೃತಿಕ ಮೆರವಣಿಗೆ ಹೆಸ‌ರಲ್ಲಿ ಜಂಬೂಸವಾರಿ ದಿನಕ್ಕೆ ಮುನ್ನವೇ ನಂದಿಧ್ವಜಕ್ಕೆ ಪೂಜೆ ಹಾಗೂ ಗಜಪಡೆಗೆ ಪುಷ್ಪಾರ್ಚನೆ ನೆರವೇರಿಸಲಾಗಿದೆ.

ಪ್ರತಿ ವರ್ಷ ಜಂಬೂಸವಾರಿ ದಿನ ಮುಖ್ಯಮಂತ್ರಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಬಳಿಕ ಪುಷ್ಪಾರ್ಚನೆ ಮಾಡುವುದು ವಾಡಿಕೆ. ಆದರೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಭಾನುವಾರ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆಗೆ ಅರಮನೆ ಆವರಣದಲ್ಲಿ ಪತ್ನಿ ಜೊತೆಗೂಡಿ ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಕುಶಾಲತೋಪು ಸಿಡಿಸಿ ಗೌರವ ವಂದನೆ ಸಲ್ಲಿಸಲಾಯಿತು.

ಮೈತ್ರಿ ಸರ್ಕಾರದ ಕ್ರಮಕ್ಕೆ ಸಾರ್ವಜನಿಕರಿಂದಲೂ ಟೀಕೆ ವ್ಯಕ್ತವಾಗಿದೆ. ಸಾಂಸ್ಕೃತಿಕ ಮೆರವಣಿಗೆ ನೆಪದಲ್ಲಿ ಮೈತ್ರಿ ಧರ್ಮ ಪಾಲಿಸಲು ಕಾಂಗ್ರೆಸ್‌ ಪಕ್ಷದ ಡಾ.ಪರಮೇಶ್ವರ ಅವರಿಗೂ ಅವಕಾಶ ಮಾಡಿಕೊಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಚಿನ್ನದ ಅಂಬಾರಿ ಇರಲಿಲ್ಲ ಎಂಬುದನ್ನು ಹೊರತುಪಡಿಸಿದರೆ ಥೇಟ್‌ ಜಂಬೂಸವಾರಿ ಹೋಲುವ ಮೆರವಣಿಗೆ ಇದಾಗಿತ್ತು. ಅಲಂಕೃತ ಗಜಪಡೆ ಜೊತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಂಸ್ಕೃತಿಯನ್ನು ಬಿಂಬಿಸುವ ಉಡುಪು ತೊಟ್ಟು ಸಾಗಿದರು. 50ಕ್ಕೂ ಹೆಚ್ಚು ಕಲಾ ತಂಡಗಳು ಮೆರುಗು ತುಂಬಿದವು. ಪೊಲೀಸ್‌ ಪಡೆ, ಅಶ್ವಾರೋಹಿ ಪಡೆಗಳು ಭಾಗಿಯಾದವು.

10 ಆನೆಗಳು ಅರಮನೆ ಆವರಣದಿಂದ ಹೊರಟು ಚಾಮರಾಜ ವೃತ್ತ, ಕೆ.ಆರ್‌.ವೃತ್ತ, ಸಯ್ಯಾಜಿರಾವ್‌ ರಸ್ತೆ ಮೂಲಕ ಬನ್ನಿಮಂಟಪ ತಲುಪಿದವು. ಸುಮಾರು 5 ಕಿ.ಮೀ ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಸ್ಥಳೀಯರು ಮೆರವಣಿಗೆ ವೀಕ್ಷಿಸಿದರು.

ಕೇವಲ ಸಾಂಸ್ಕೃತಿಕ ಮೆರವಣಿಗೆಗೆ ನಾನು ಚಾಲನೆ ನೀಡಿದ್ದೇನೆ. ಜಂಬೂಸವಾರಿ ದಿನ ಮತ್ತೆ ಬರುತ್ತೇನೆ. ಆಗ ಮುಖ್ಯಮಂತ್ರಿ ಕೂಡ ಇರುತ್ತಾರೆ‌‌‌

-ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT